ಹಾಲಿನ ಬೆಲೆ ಏರಿಕೆ ಪ್ರಸ್ತಾಪಕ್ಕೆ ಹೋಟೆಲ್ ಮಾಲೀಕರ ವಿರೋಧ; ಕಾಫಿ, ಟೀ ದರ ಹೆಚ್ಚಳ ಎಚ್ಚರಿಕೆ
ಕಾಫಿ ಪುಡಿ ದರ ಆಕಾಶಕ್ಕೇರಿದೆ. ಈಗ ಹಾಲಿನ ಬೆಲೆ ಹೆಚ್ಚಳಗೊಂಡರೆ ಚಹಾ, ಕಾಫಿಯಂತಹ ನಾನಾ ಬಿಸಿ ಪಾನೀಯಗಳ ಬೆಲೆ ಏರಿಕೆ ಅನಿವಾರ್ಯವಾಗಲಿದೆ ಎಂದು ರಾಜ್ಯ ಹೋಟೆಲ್‌ಗಳ ಸಂಘ ಹೇಳಿದೆ.;
ನಂದಿನಿ ಹಾಲು ದರ ಏರಿಕೆ ಸಂಬಂಧ ಕೆಎಂಎಫ್ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘವು ಭಾರೀ ವಿರೋಧ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ಕ್ಕೆ ಈ ಸಂಬಂಧ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಜಿ.ಕೆ ಶೆಟ್ಟಿ, ಅವರು, ಹಾಲಿನ ದರ ಹೆಚ್ಚಳ ಮಾಡಿದರೆ ಹೋಟೆಲ್ ಉದ್ಯಮದ ಮೇಲೆ ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಫಿ ಪುಡಿ ದರ ಆಕಾಶಕ್ಕೇರಿದೆ. ಈಗ ಹಾಲಿನ ಬೆಲೆ ಹೆಚ್ಚಳಗೊಂಡರೆ ಚಹಾ, ಕಾಫಿಯಂತಹ ನಾನಾ ಬಿಸಿ ಪಾನೀಯಗಳ ಬೆಲೆ ಏರಿಕೆ ಅನಿವಾರ್ಯವಾಗಲಿದೆ. ಇದು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿರುವ ಹಾಗೂ ಸರ್ಕಾರ, ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಮೂಲವಾಗಿರುವ ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಕಂಟಕವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಹೋಟೆಲ್‌ಗಳು ಗ್ರಾಹಕರಿಗೆ ಆಹಾರ ಸುರಕ್ಷತಾ ನೀತಿಗೆ ಅನುಗುಣವಾಗಿ ಎಲ್ಲ ಶುಚಿತ್ವ ಹಾಗೂ ಗುಣಮಟ್ಟದ ನೀತಿ ಅನುಸರಿಸುತ್ತಾ ಚಹಾ, ಕಾಫಿ ಹಾಗೂ ಇತರ ಪಾನೀಯಗಳನ್ನು ಒದಗಿಸುತ್ತವೆ. ಹಾಲಿನ ದರ ಹೆಚ್ಚಳಗೊಂಡರೆ, ಇವುಗಳ ಬೆಲೆ ಏರಿಕೆ ಅನಿವಾರ್ಯವಾಗಲಿದೆ. ಆದರೆ ಕೆಲವರು ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ಮಾರಾಟ ಮಾಡಲಾಗುವ ಚಹಾ, ಕಾಫಿ ಸೇವನೆ ಆರಂಭಿಸಬಹುದು. ಇದು ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಜಿ.ಕೆ ಶೆಟ್ಟಿ ಎಚ್ಚರಿಸಿದ್ದಾರೆ.
ಸರ್ಕಾರ ಸಾರ್ವಜನಿಕ ಆರೋಗ್ಯ ಮತ್ತು ಹೋಟೆಲ್ ಉದ್ಯಮದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು, ಹಾಲಿನ ಬೆಲೆ ಏರಿಕೆ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು ಅವರು ಒತ್ತಾಯಿಸಿದ್ದಾರೆ.
ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 5 ರೂ. ಹೆಚ್ಚಳ ಮಾಡುವಂತೆ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ಫೆ.19 ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಬಜೆಟ್ ನಂತರ ಹಾಲಿನ ಬೆಲೆ ಹೆಚ್ಚಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದರು.
ಈ ಹಿಂದೆಯು ಹಾಲಿನ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿತ್ತು. ಪ್ರತಿ ಅರ್ಧ ಲೀಟರ್‌ನ ಪಾಕೆಟ್ ಮೇಲೆ 50 ಎಂಎಲ್ ಹೆಚ್ಚುವರಿ ಹಾಲು ನೀಡಿ, 3 ರೂಪಾಯಿ ಹೆಚ್ಚಿಸಿತ್ತು. ಇದರಿಂದ ಗ್ರಾಹಕರಿಗೆ ಹೊರೆಯಾಗಿ, ಕೆಎಂಎಫ್ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.