ಕಲಬುರಗಿಯಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ತಂದೆ

ಮಗಳ ಪ್ರೀತಿಯ ವಿಷಯ ತಿಳಿದ ಪೋಷಕರು, ಮೊದಲು ಆಕೆಗೆ ಬುದ್ಧಿವಾದ ಹೇಳಿ ಸಂಬಂಧದಿಂದ ದೂರವಿರುವಂತೆ ತಿಳಿಸಿದ್ದರು.;

Update: 2025-08-30 05:00 GMT

 ಮೃತ ಅಪ್ರಾಪ್ತ ಯುವತಿ ಕವಿತಾ

ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಕುಪಿತಗೊಂಡ ತಂದೆಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟುಹಾಕಿರುವ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ.

ಕವಿತಾ ಕೊಳ್ಳೂರ್ (20) ಮೃತ ಯುವತಿ. ಪಿಯುಸಿ ಮುಗಿಸಿ ನರ್ಸಿಂಗ್ ಓದುತ್ತಿದ್ದ ಕವಿತಾ, ಅದೇ ಗ್ರಾಮದ ಅನ್ಯ ಜಾತಿಗೆ ಸೇರಿದ ಆಟೋ ಚಾಲಕನನ್ನು ಪ್ರೀತಿಸುತ್ತಿದ್ದಳು.

ಮಗಳ ಪ್ರೀತಿಯ ವಿಷಯ ತಿಳಿದ ಪೋಷಕರು, ಮೊದಲು ಆಕೆಗೆ ಬುದ್ಧಿವಾದ ಹೇಳಿ ಸಂಬಂಧದಿಂದ ದೂರವಿರುವಂತೆ ತಿಳಿಸಿದ್ದಾರೆ. ಆದರೆ, ಕವಿತಾ ತನ್ನ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪದಿದ್ದಾಗ, ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಘಟನೆ ನಡೆದ ರಾತ್ರಿ ತಂದೆ ಶಂಕರ ಕೊಳ್ಳೂರ್, ತನ್ನ ಸಹೋದರ ಸಂಬಂಧಿಗಳಾದ ಶರಣಪ್ಪ ಮತ್ತು ದತ್ತಪ್ಪ ಜೊತೆ ಸೇರಿ ಕವಿತಾಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ನಂತರ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ.

ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

ಕೊಲೆಯ ನಂತರ, ಇದು ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಕವಿತಾಳ ದೇಹದ ಮೇಲೆ ಕ್ರಿಮಿನಾಶಕ ಸುರಿದು ಆತ್ಮಹತ್ಯೆಯ ಕಥೆ ಕಟ್ಟಲು ಯೋಜಿಸಿದ್ದರು. ಬಳಿಕ, ಊರಿನಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುದ್ದಿ ಹಬ್ಬಿಸಿ, ಯಾರಿಗೂ ಅನುಮಾನ ಬಾರದಂತೆ ತಮ್ಮದೇ ಜಮೀನಿನಲ್ಲಿ ಆತುರಾತುರವಾಗಿ ಶವವನ್ನು ಸುಟ್ಟುಹಾಕಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ಕವಿತಾಳ ಸಾವಿನ ಬಗ್ಗೆ ಅನುಮಾನಗೊಂಡ ಅನಾಮಧೇಯ ವ್ಯಕ್ತಿಯೊಬ್ಬರು ಫರಹತಾಬಾದ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಕರೆಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಇದೊಂದು ಮರ್ಯಾದಾ ಹತ್ಯೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Tags:    

Similar News