Honey Trap | ʼಹನಿ ಟ್ರ್ಯಾಪ್ʼ ತಲ್ಲಣ: 48 ರಾಜಕೀಯ ಮುಖಂಡರ ಸಿ.ಡಿ. ತಯಾರು: ತಮ್ಮ ಮೇಲೂ ಪ್ರಯತ್ನ ಎಂದ ಸಚಿವ ಕೆ.ಎನ್. ರಾಜಣ್ಣ
ಪ್ರಭಾವಿ ಸಚಿವರೊಬ್ಬರು ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆಸಿದ್ದರು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಫೋಟಕ ಮಾಹಿತಿ ನೀಡಿದ್ದಾರೆ. ಗುರುವಾರ ವಿಧಾನಸಭೆ ಅಧಿವೇಶನದಲ್ಲಿ"ನನ್ನ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿದೆ. ಜೊತೆಗೆ ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ., ಪೆನ್‌ಡ್ರೈವ್ ಕೂಡ ತಯಾರಾಗಿರುವ ಮಾಹಿತಿ ಇದೆ," ಎಂದು ಆರೋಪಿಸಿದ್ದಾರೆ.;
ತಮ್ಮದೇ ಸರ್ಕಾರದ ಸಚಿವರೊಬ್ಬರು ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆಸಿದ್ದರು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಫೋಟಕ ಮಾಹಿತಿ ನೀಡಿದ್ದಾರೆ. ಆದರೆ ಆ ಪ್ರಭಾವಿ ಸಚಿವರು ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ.
ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ನನ್ನ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿದೆ. ಜೊತೆಗೆ ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ., ಪೆನ್‌ಡ್ರೈವ್ ಕೂಡ ತಯಾರಾಗಿರುವ ಮಾಹಿತಿ ಇದೆ ಎಂಬ ಸ್ಫೋಟಕ ಆರೋಪ ಮಾಡಿದ್ದಾರೆ.
ರಾಜಕೀಯ ನಾಯಕರನ್ನು ಹನಿಟ್ರ್ಯಾಪ್ ಮೂಲಕದ ಬೆದರಿಸುತ್ತಿರುವ ಕುರಿತು ದೂರು ನೀಡಲಾಗುವುದು. ಗೃಹ ಸಚಿವರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಸಿ.ಡಿ, ಪೆನ್‌ಡ್ರೈವ್ ಫ್ಯಾಕ್ಟರಿ ಆಗಿದೆ ಎಂದು ಬಹಳಷ್ಟು ಜನ ಹೇಳುತ್ತಿದ್ದರು. ಇದು ಬಹಳ ಗುರುತರ ಆರೋಪ. ತುಮಕೂರಿನ ಇಬ್ಬರು ಪ್ರಭಾವಿ ಸಚಿವರು ಹನಿಟ್ರ್ಯಾಪ್ ನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತ ಸುದ್ದಿಗಳು ಹರಿದಾಡುತ್ತಿದ್ದವು. ತುಮಕೂರಿನಲ್ಲಿ ಇರೋರು ನಾನು ಮತ್ತು ಪರಮೇಶ್ವರ್ ಮಾತ್ರ. ಸಿ.ಡಿ, ಪೆನ್‌ಡ್ರೈವ್ 48 ಜನರ ಮೇಲೆ ಮಾಡಲಾಗಿದೆ. ಎಲ್ಲ ಪಕ್ಷದವರ ಸಿ.ಡಿ, ಪೆನ್‌ಡ್ರೈವ್ ಇದೆ. ಕೆಲವರು ಈಗಾಗಲೇ ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಇದು ರಾಜ್ಯಕ್ಕೆ ಮಾತ್ರ ಸೀಮಿತ ಆಗಿಲ್ಲ. ರಾಷ್ಟ್ರದ ಎಲ್ಲ ಪಕ್ಷಗಳ ಮುಖಂಡರ ಹನಿಟ್ರ್ಯಾಪ್ ಪೆನ್‌ಡ್ರೈವ್‌ಗಳಿವೆ. ಇದರ ಹಿಂದೆ ಯಾರಿದ್ದಾರೆ, ನಿರ್ಮಾಪಕರು, ನಿರ್ದೇಶಕರು ಯಾರೆಂಬ ಸತ್ಯ ಹೊರಬರಲಿ. ಜನಕ್ಕೆ ಗೊತ್ತಾಗಲಿ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್ ಅವರು, ಕೆಲವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ಸಲುವಾಗಿ ಇಂತಹ ನೀಚ ಕೃತ್ಯಗಳಿಗೆ ಇಳಿದಿದ್ದಾರೆ. ಕೆಲವರು ಸಿಎಂ ಆಗಲು ಹನಿಟ್ರ್ಯಾಪ್ ಮಾಡುತ್ತಿದ್ದಾರೆ. ಇಂದು ರಾಜಣ್ಣ, ನಾಳೆ ಮತ್ತೊಬ್ಬರ ಮೇಲೆ ಹನಿಟ್ರ್ಯಾಪ್ ಯತ್ನಗಳು ನಡೆಯುತ್ತವೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದ್ದರು.
ಎಚ್.ಡಿ. ಕುಮಾರಸ್ವಾಮಿ ಟೀಕೆ
ಮರ್ಯಾದೆಗೇಡಿ, ಕಿಡಿಗೇಡಿ ನನ್ನ ಮೇಲೆ ಮತ್ತೆ ವಿಷ ಕಕ್ಕಿರುವುದು ಹತಾಶೆ ಅಷ್ಟೇ. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ..! ಇಷ್ಟೂ ಸಾಮಾನ್ಯಜ್ಞಾನವೂ ಇಲ್ಲವೇ? ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಅಹೋರಾತ್ರಿಯೂ ದ್ರೋಹ ಚಿಂತನೆ, ವಿಶ್ವಾಸದ್ರೋಹ, ಉಂಡ ಮನೆಗೆ ಕನ್ನ, ಸ್ವಪಕ್ಷೀಯರಿಗೇ ಗುನ್ನ.. ಇದೂ ಒಂದು ಬದುಕೇ..? ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವ ವಿಷಸರ್ಪ ನನ್ನಡೆಗೆ ನಾಲಿಗೆ ಚಾಚಿದೆ! ಇಂಥ ಕ್ರಿಮಿನಲ್ ಒಬ್ಬ ಕೆಟ್ಟ ಅಲೋಚನೆಗಳಲ್ಲಿ ದಿನಪೂರ್ತಿ ಮುಳುಗಿರುವುದು ಸಹಜ. ಕ್ರಿಮಿನಲ್'ನ ಚಾಳಿಯೇ ಧಮ್ಕಿ ಹಾಕುವುದು. ವಿಷಕ್ರಿಮಿಯ ಕೆಲಸ ಎಲ್ಲರನ್ನೂ ಕಚ್ಚುವುದು.. ಇದರಲ್ಲಿ ನನಗೇನೂ ಅಚ್ಚರಿ ಇಲ್ಲ. ನಾನು ಭೂ ಒತ್ತುವರಿ ಮಾಡಿದ್ದೇನೋ ಇಲ್ಲವೋ ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನವಾಗುತ್ತದೆ. ಈಗ ನನ್ನ ಮರ್ಯಾದೆ ವಿಷಯ ಇರಲಿ, ಇವತ್ತು ಸ್ವಪಕ್ಷೀಯರೇ ಈ ಮರ್ಯಾದೆಗೇಡಿಯ ಮಾನವನ್ನು ವಿಧಾನಸೌಧದಲ್ಲಿಯೇ ಹರಾಜು ಹಾಕಿದ್ದಾರೆ! ಅದಕ್ಕೆ ಉತ್ತರವೇನು? ಎಂದು ಪ್ರಶ್ನಿಸಿದ್ದಾರೆ.