Honey Trap | 'ಮಧು ಬಲೆ' ಚೀಟಿ ಬಹಿರಂಗವಾದರೆ ರಾಜಕೀಯ ಕ್ರಾಂತಿ ಖಚಿತ: ಯತ್ನಾಳ್
ಸಚಿವರೇ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಉಂಟಾಗಿದೆ. ಚೀಟಿಯಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ರಾಜಣ್ಣ ವಿವರ ನೀಡಿಲ್ಲ ಎಂದರು;
ಬಸನಗೌಡ ಯತ್ನಾಳ್
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಕುರಿತು ಚೀಟಿ ಬರೆದು ಕಳುಹಿಸಿದವರ ಹೆಸರಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಆ ಚೀಟಿಯ ವಿಷಯ ಬಹಿರಂಗವಾದರೆ ಭಾರಿ ರಾಜಕೀಯ ಭೂಕಂಪ ಸಂಭವಿಸಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹನಿಟ್ರ್ಯಾಪ್ ಬಗ್ಗೆ ರಾಜಕಾರಣಿಗಳು ಸಾಕಷ್ಟು ಸಮಯದಿಂದ ಹೇಳುತ್ತಿದ್ದರು. ಈಗ ಸಚಿವರೇ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಉಂಟಾಗಿದೆ. ಚೀಟಿಯಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ರಾಜಣ್ಣ ವಿವರ ನೀಡಿಲ್ಲ. ಬಹುಶಃ ಮಹಾನಾಯಕನೇ ಇದಕ್ಕೆ ಕಾರಣರಾಗಿರಬಹುದು. ಆದರೆ, ಚೀಟಿಯಲ್ಲಿರುವ ವಿಷಯ ಬಹಿರಂಗವಾದರೆ ಎರಡೂ ಪಕ್ಷಗಳ ನಾಯಕರು ರಾಜಕೀಯದಿಂದ ಹಿಂದೆ ಸರಿಯಬೇಕಾದ ಪರಿಸ್ಥಿತಿ ಎದುರಾಗಬಹುದು" ಎಂದು ಹೇಳಿದರು.
"ನಾನು ಯಾರ ಒತ್ತಡಕ್ಕೂ ಒಳಗಾಗುವ ವ್ಯಕ್ತಿ ಅಲ್ಲ. ರಾಜ್ಯದ ಹಿತದೃಷ್ಟಿಯಿಂದಲೇ ಮಾತಾಡುತ್ತಿದ್ದೇನೆ. ರಾಜ್ಯ ರಾಜಕಾರಣದಲ್ಲಿ ಈಗ ಎರಡು ಬಣಗಳಿವೆ. ಒಂದು ಬಣ 'ಹಲೋ' ಎಂದರೆ ಪ್ರತಿಸ್ಪಂದನವಾಗಿ 'ಹಲೋ' ಎಂದು ಹೇಳುತ್ತದೆ. ಇನ್ನೊಂದು ಬಣ 'ಜೈ ಶ್ರೀರಾಮ' ಎಂದರೆ ತಕ್ಷಣ ಅದನ್ನೇ ಪ್ರತಿಧ್ವನಿಸುತ್ತದೆ. ಶಾಸಕರ ಗೌರವ ಹರಾಜು ಮಾಡುವಂತಹ ಅಸಭ್ಯ ನಡೆಗಳು ನಡೆಯಬಾರದು. ಇಂತಹ ಜನರು ರಾಜಕೀಯದಿಂದ ತೊಲಗಬೇಕು. ಇಂಥವರು ಮುಖ್ಯಮಂತ್ರಿಯಾಗಬಾರದು" ಎಂದು ಯತ್ನಾಳ ಕಿಡಿಕಾರಿದರು.