Honey Trap : ಹನಿಟ್ರ್ಯಾಪ್ ಮಾಡಿದ ನಾಯಕನಿಂದಲೇ ಫೋನ್ ಕದ್ದಾಲಿಕೆ? ಸರ್ಕಾರಕ್ಕೆ ಮತ್ತೆ ಮುಜುಗರ?
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಈ ವಿವಾದದಲ್ಲಿ ತೊಡಗಿರುವ ಆ 'ಲೀಡರ್' ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್ ಮೇಲೆ ಸತತ ಒತ್ತಡ ಹೇರಲು ಆರಂಭಿಸಿದ್ದಾರೆ.;
ಕರ್ನಾಟಕ ರಾಜಕೀಯದಲ್ಲಿ 'ಹನಿಟ್ರ್ಯಾಪ್' ವಿವಾದ ದಿನೇ ದಿನೇ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು 48 ರಾಜಕಾರಣಿಗಳು, ಕೇಂದ್ರ ನಾಯಕರು ಮತ್ತು ನ್ಯಾಯಾಧೀಶರು ಹನಿಟ್ರ್ಯಾಪ್‌ಗೆ ಬಲಿಯಾಗಿದ್ದಾರೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ಸಂಚಲನ ಮೂಡಿಸಿದ್ದರು.
ಈಗ ಈ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು. ಹನಿಟ್ರ್ಯಾಪ್‌ಗೆ ಯತ್ನಿಸಿದ ಒಬ್ಬ ಪ್ರಭಾವಿ 'ಲೀಡರ್' ಫೋನ್ ಕದ್ದಾಲಿಕೆಯಲ್ಲೂ ತೊಡಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಒಳಗಿನ ಗೊಂದಲ ಹೆಚ್ಚಿಸಿದ್ದು, ರಾಜಕೀಯ ವಲಯದಲ್ಲಿ ಸುನಾಮಿ ಸೃಷ್ಟಿಸಲಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಈ ವಿವಾದದಲ್ಲಿ ತೊಡಗಿರುವ ಆ 'ನಾಯಕನ' ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್ ಮೇಲೆ ಸತತ ಒತ್ತಡ ಹೇರಲು ಆರಂಭಿಸಿದ್ದಾರೆ. "ಈ ಲೀಡರ್ ನಮ್ಮ ಚಲನವಲನಗಳನ್ನು ದಾಖಲಿಸುವುದರ ಜತೆಗೆ, ನಮ್ಮ ಮಾತುಕತೆಗಳನ್ನು ರಹಸ್ಯವಾಗಿ ಸಂಗ್ರಹಿಸಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಒಳಸಂಚುಗಳು ಈ ಎಲ್ಲಾ ಗೊಂದಲಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಸ್ವಪಕ್ಷೀಯರ ವಿರುದ್ಧವೇ ಹನಿಟ್ರ್ಯಾಪ್ ಸಂಚು ರೂಪಿಸಿರುವುದು, ಫೋನ್ ಕದ್ದಾಲಿಕೆ ಮಾಡಿಸಿರುವುದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಮತ್ತು ಸರ್ಕಾರಿ ಯೋಜನೆಗಳಲ್ಲಿ ಪಕ್ಷಪಾತ ತೋರಿರುವುದು ಎಂಬ ಆರೋಪಗಳು ಕೇಳಿಬಂದಿವೆ.
ಖರ್ಗೆ ಭೇಟಿ ವೇಳೆ ಬಹಿರಂಗ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಭೇಟಿಯಾದ ಸಂದರ್ಭದಲ್ಲಿ ಈ ಫೋನ್ ಕದ್ದಾಲಿಕೆ ವಿಷಯವೂ ಪ್ರಸ್ತಾಪವಾಗಿದೆ ಎಂದು ತಿಳಿದುಬಂದಿದೆ. ಈ ಭೇಟಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಅಸಹಾಯಕತೆಯನ್ನು ಖರ್ಗೆ ಅವರ ಎದುರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
"ಕೆಲವು ನಾಯಕರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸ್ವಪಕ್ಷೀಯರು ಮತ್ತು ಕೇಂದ್ರದ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಇದು ನಮಗೆ ಧರ್ಮಸಂಕಟ ಉಂಟುಮಾಡಿದೆ," ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯ ಗಂಭೀರವಾಗಿರುವುದರಿಂದ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್, ಸಿಎಂಗೆ ಸಲಹೆ ನೀಡಿದೆ ಎನ್ನಲಾಗಿದೆ. "ನಿಯಮ ಬಾಹಿರ ಕೃತ್ಯಗಳನ್ನು ಯಾರೇ ಮಾಡಿದರೂ ಅದನ್ನು ಸಹಿಸಲಾಗದು. ಅಂತಹವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.
ಪಕ್ಷದ ಒಡಲೊಳಗೆ ಮತ್ತೊಂದು ಬೆಂಕಿ
ಹನಿಟ್ರ್ಯಾಪ್ ವಿವಾದ ಕಾಂಗ್ರೆಸ್ ಪಕ್ಷದೊಳಗೆ ವಿವಿಧ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಒಂದು ಬಣ ಒಳಗೊಳಗೇ ಒಳಗೊಳಗೆ ಕುದಿಯಲಾರಂಭಿಸಿದ್ದು, ಈ ನಡುವೆ ಫೋನ್ ಕದ್ದಾಲಿಕೆ ಅದಕ್ಕೆ ತುಪ್ಪ ಸುರಿದಿದೆ.
ಈ ಆರೋಪಗಳು ಸಾಬೀತಾದರೆ, ಕರ್ನಾಟಕದ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ಇದೆ. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಾಗಿದ್ದು, ಸಿಬಿಐ ಅಥವಾ ಎಸ್‌ಐಟಿ ಮೂಲಕ ಸ್ವತಂತ್ರ ತನಿಖೆಗೆ ಆಗ್ರಹಿಸಲಾಗಿದೆ. ಈ ಪ್ರಕರಣದಲ್ಲಿ ಒಬ್ಬ ಪ್ರಭಾವಿ ನಾಯಕನ ಮೇಲೆ ಗುರುತಿಸಲಾದ ಆರೋಪಗಳು ಸತ್ಯವೆಂದು ದೃಢಪಟ್ಟರೆ, ಅದು ಕಾಂಗ್ರೆಸ್ ಪಕ್ಷದ ಒಳಗಿನ ಶಕ್ತಿ ಸಂಗ್ರಾಮವನ್ನು ಮತ್ತಷ್ಟು ತೀವ್ರಗೊಳಿಸಲಿದೆ.
ಮುಂದೇನು?
ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ವಿವಾದವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಒಂದು ವೇಳೆ ಫೋನ್ ಕದ್ದಾಲಿಕೆ ಮತ್ತು ಹನಿಟ್ರ್ಯಾಪ್ ಆರೋಪಗಳಿಗೆ ಸಾಕ್ಷ್ಯ ಸಿಕ್ಕರೆ, ಆರೋಪಿತ 'ಲೀಡರ್' ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ವಿಪಕ್ಷ ನಾಯಕ ಅಶೋಕ್ ಟೀಕೆ
ಸರ್ಕಾರ ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ಇದನ್ನು ಹೇಳಿದ್ದಾರೆ. ವಿರೋಧಿಗಳನ್ನು ಬಗ್ಗು ಬಡಿಯಬೇಕೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಇದರಲ್ಲಿ ಅನುಮಾನವೇ ಬೇಡ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಸಚಿವ ರಾಜಣ್ಣ ಹಾಗೂ ಅವರ ಮಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಮತಿ ಪಡೆದು ಹನಿಟ್ರ್ಯಾಪ್ ಬಗ್ಗೆ ಮಾತಾಡಿದ್ದಾರೆ. ಈ ಮೂಲಕ ಇದರ ಸೂತ್ರದಾರರು ಯಾರೆಂದು ತಿಳಿದುಬಂದಿದೆ. ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆಯವರೇ ಬಂದು ಚರ್ಚೆ ನಡೆಸುವ ಸ್ಥಿತಿ ಬಂದಿದೆ. ಇಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.