ಸಿಎಂ ಒಪ್ಪಂದ ಆಗಿದೆ ಅಂತಾದ್ರೆ ನಾವೆಲ್ಲ ಯಾಕೆ ಇರಬೇಕು?: ಡಾ.ಜಿ. ಪರಮೇಶ್ವರ್ ಗರಂ

Update: 2024-12-05 08:52 GMT
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆಗಿರುವ ಫೋಟೊ

ಹಾಸನದಲ್ಲಿ ಜನಕಲ್ಯಾಣ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಕಾಂಗ್ರೆಸ್​ನಲ್ಲಿ ಪವರ್ ಪಾಲಿಟಿಕ್ಸ್ ಸ್ಫೋಟವಾಗಿದೆ.

'ಮುಖ್ಯಮಂತ್ರಿ ಬದಲಾವಣೆ' ವಿಚಾರವೀಗ ರಾಜ್ಯ ಕಾಂಗ್ರೆಸ್‌ನಲ್ಲಿ 'ಜನಕಲ್ಯಾಣ ಸಮಾವೇಶ'ಕ್ಕಿಂತ ಜೋರಾಗಿ ಸದ್ದಾಗತೊಡಗಿದೆ. ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಆ ಬಳಿಕ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ಮುಂದೆ ನಡೆದಿದೆ ಎನ್ನಲಾಗುತ್ತಿರುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರೂ ಆಗಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಇದೀಗ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಒಪ್ಪಂದವನ್ನು ಪ್ರಶ್ನೆ ಮಾಡುವುದರೊಂದಿಗೆ ಸಿಎಂ ರೇಸ್​ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. 

ಒಪ್ಪಂದ ಆಗಿದೆ ಅಂತಾದ್ರೆ ನಾವೆಲ್ಲ ಯಾಕೆ ಇರಬೇಕು?

ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಹಾಸನದಲ್ಲಿ ಮಾಧ್ಯಮಗಳಿಗೆ ಮಾತನಾಡಿರುವ ಗೃಹ ಸಚಿವರು, ಸಿಎಂ ಹಾಗೂ ಡಿಸಿಎಂ ಹೇಳಿಕೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಒಪ್ಪಂದ ಆಗಿದೆ ಅಂತಾದರೆ ನಾವೆಲ್ಲ ಯಾಕೆ ಇರಬೇಕು? ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಲಿ ಬಿಡಿ’ ಎಂದು ಗರಂ ಆಗಿದ್ದಾರೆ.

‘ಯಾವ ಒಪ್ಪಂದ ಆಗಿದ್ದು ನಮಗೆ ಗೊತ್ತಿಲ್ಲ. ನಾನು 2-3 ಜನರನ್ನು ದೆಹಲಿ ಒಳಗೂ, ಇಲ್ಲೂ ಕೇಳಿದ್ದೇನೆ. ಒಪ್ಪಂದ ಆಗಿದೆ ಎಂದೂ ಯಾರು ಹೇಳಿಲ್ಲ. ಶಿವಕುಮಾರ್‌ ಯಾವ ಅರ್ಥದಲ್ಲಿ ‌ಹೇಳಿದ್ರೋ ಗೊತ್ತಿಲ್ಲ. ಸಿದ್ದರಾಮಯ್ಯ ಯಾವುದೇ ಒಪ್ಪಂದ ಆಗಿಲ್ಲ ಅಂತಾನೂ ಸ್ಪಷ್ಟವಾಗಿ ಹೇಳಿದ್ದಾರೆ. ಅವರಿಬ್ಬರನ್ನು ಬಿಟ್ಟರೆ ಬೇರೆಯವರು ಇರೋದೇ ಬೇಡವಾ? ಆದೆಲ್ಲ ಆ ರೀತಿ ಆಗೋಕೆ ಸಾಧ್ಯವಿಲ್ಲ. ಹೈಕಮಾಂಡ್ ಬಿಟ್ಟು ನಾವು ಹೋಗುವವರಲ್ಲ. ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಒಪ್ಪಂದ ಎಲ್ಲ ಆಗಿರುವುದು ನಮಗೆ ಗೊತ್ತಿಲ್ಲ’ ಎಂದಿದ್ದಾರೆ.

ಸಹಜವಾಗಿಯೇ ಹಿರಿಯ ನಾಯಕರೂ ಆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಈ ಅಸಮಾಧಾನ ಪಕ್ಷದ ಒಳಗೆ ಸಾಕಷ್ಟು ಸಂಚಲನ ಮೂಡಿಸಿದೆ. ಪರಮೇಶ್ವರ್‌ ಅವರ ಅಸಮಾಧಾನ ಸ್ಫೋಟಗೊಂಡ ಕೆಲವೇ ಕ್ಷಣಗಳಲ್ಲಿ ಅದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ತಣ್ಣನೆಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ಪರಮೇಶ್ವರ್ ಹತ್ತಿರ ಮಾತನಾಡಿಲ್ಲ

ಪರಮೇಶ್ವರ್ ಹೇಳಿಕೆಗೆ ಜನಕಲ್ಯಾಣ ಸಮಾವೇಶಕ್ಕೆ ತೆರಳುವ ಮುನ್ನ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್, ‘ನಾನು ನಿಮ್ಮ ಹತ್ತಿರ ಏನೂ ‌ಮಾತನಾಡಿಲ್ಲ. ಪರಮೇಶ್ವರ್ ಹತ್ತಿರವೂ ಮಾತನಾಡಿಲ್ಲ. ಇಂಗ್ಲೀಷ್ ಚಾನಲ್‌ ಒಂದಕ್ಕೆ ಮಾತನಾಡಿದ್ದೆ. ಏನೋ ‌ಕೂತು ಮಾತನಾಡಿದ್ದೇವೆ ಅಂದಿದ್ದೆ. ನಿನ್ನೆ ಮುಖ್ಯಮಂತ್ರಿಗಳು ಹಾಗೆ ಏನೂ ಇಲ್ಲ ಅಂದಿದ್ದಾರೆ. ಡೋಂಟ್ ಎನಿಮೈಸ್ ಇನ್ ಪಾಲಿಟಿಕ್ಸ್. ಎಲ್ಲರೂ ಜೊತೆಗೂಡಿ ಕೆಲಸ ಮಾಡಿದ್ದೇವೆ. ಜೊತೆಗೂಡಿ ಪಕ್ಷವನ್ನು ಕಟ್ಟುತ್ತೇವೆ’ ಎಂದು ಉತ್ತರಿಸಿದ್ದಾರೆ. 

ಕುತೂಹಲ ಮೂಡಿಸಿದ ಡಿಕೆಶಿ ಹೇಳಿಕೆ

ಸಿಎಂ ಬದಲಾವಣೆ ಒಪ್ಪಂದದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊಟ್ಟಿರುವ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಸಂಘಟನಾತ್ಮಕ ಶಕ್ತಿ, ಅವರು ಪಕ್ಷ ಸಂಘಟನೆ ಮಾಡಿರುವ ವಿಷಯ ಕಾಂಗ್ರೆಸ್ ಹೈಕಮಾಂಡ್​​ಗೆ ಗೊತ್ತಿರದ ವಿಚಾರ ಏನಲ್ಲ. ಜೊತೆಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುಡಾ, ವಕ್ಫ್, ವಾಲ್ಮೀಕಿ ನಿಗಮ ಹಗರಣ ಹಾಗೂ ಒಳ ಮೀಸಲಾತಿ ಕುರಿತಂತೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಹಾಸನದಲ್ಲಿ ಕಾಂಗ್ರೆಸ್ ಜನಕಲ್ಯಾಣ ಸಮಾವೇಶ ನಡೆಯುತ್ತಿದೆ. ಅಧಿಕಾರ ಹಸ್ತಾಂತರದ ಚರ್ಚೆ ಬರೀ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರಲಿಕ್ಕಿಲ್ಲ ಎಂಬ ಗುಮಾನಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡುತ್ತಿದೆ. ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್ ಮೂಲಕ ತಡೆ ಹಾಕಿಸಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರದ ಚರ್ಚೆ ಕುತೂಹಲ ಮೂಡಿಸಿದೆ. 

Tags:    

Similar News