Toxic Movie | ‘ಟಾಕ್ಸಿಕ್‍’ ಚಿತ್ರದ ನಟನೆ ಅದ್ಭುತ ಅನುಭವ ಎಂದ ಹಾಲಿವುಡ್‍ ನಟ ಕೈಲ್‍ ಪಾಲ್‍

ಹಾಲಿವುಡ್‍ ನಟ ಕೈಲ್‍ ಪಾಲ್‍ ಅವರು ಯಶ್ ಅಭಿನಯದ ‘ಟಾಕ್ಸಿಕ್’ ನಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಚಿತ್ರದಲ್ಲಿ ನಟಿಸಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.;

Update: 2025-03-22 11:48 GMT

ಕಳೆದ ವರ್ಷ ಬಿಡುಗಡೆಯಾದ ‘ಮೈ ಹೀರೋ’ ಎಂಬ ಚಿತ್ರದಲ್ಲಿ ಹಾಲಿವುಡ್‍ನ ಜನಪ್ರಿಯ ನಟ ಎರಿಕ್‍ ರಾಬರ್ಟ್ಸ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರದಲ್ಲಿ ಮತ್ತೊಬ್ಬ ನಟ ನಟಿಸಿದ್ದು, ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕೈಲ್‍ ಪಾಲ್‍, ಹಾಲಿವುಡ್‍ ಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಜನಪ್ರಿಯ ನಟ. ಇದೀಗ ಅವರು ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಚಿತ್ರದಲ್ಲಿ ನಟಿಸಿರುವ ಅನುಭವದ ಬಗ್ಗೆ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ವೈರಲ್‍ ಆಗಿದೆ.

‘‘ಟಾಕ್ಸಿಕ್’ ಸಿನಿಮಾದಲ್ಲಿ ಹಲವು ಎಮೋಷನಲ್ ಸನ್ನಿವೇಶಗಳಿವೆ. ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದ್ದೇನೆ. ಇಂತಹ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ರಾತ್ರಿ ಸುಮಾರು ಮೂರರ ಹೊತ್ತಿಗೆ ಚಿತ್ರೀಕರಣ ನಡೆಯುತ್ತಿತ್ತು. ನನಗೆ ಕನ್ನಡ ಮಾತಾಡಲು ಕಷ್ಟವಾಗುತ್ತಿತ್ತು. ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿರಲಿಲ್ಲ. ನಿರ್ದೇಶಕಿ ಗೀತು ಅವರು ನಟಿಸಲು ಬಹಳ ಸಹಕಾರ ನೀಡಿದರು. ಸಮಯ ತೆಗೆದುಕೊಂಡು ನಟಿಸಲು ಹೇಳುತ್ತಿದ್ದರು. ಸದಾ ಹುರಿದುಂಬಿಸುತ್ತಿದ್ದರು. ಚಿತ್ರತಂಡದ ಜೊತೆ ಕೆಲಸ ಮಾಡಿದ ಅನುಭವ ನಿಜಕ್ಕೂ ಅದ್ಭುತವಾಗಿತ್ತು’ ಎಂದು ಕೈಲ್ ಪೌಲ್ ಕೊಂಡಾಡಿದ್ದಾರೆ.

ʻಟಾಕ್ಸಿಕ್’ ಚಿತ್ರವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದ ಆಕ್ಷನ್ ದೃಶ್ಯಗಳನ್ನು ಹಾಲಿವುಡ್‌ನ ಜನಪ್ರಿಯ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಸಂಯೋಜಿಸಿದ್ದಾರೆ.

‘ಟಾಕ್ಸಿಕ್’ ಚಿತ್ರವನ್ನು ವೆಂಕಟ್ ಕೆ. ನಾರಾಯಣ ಸಾರಥ್ಯದ ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಅವರ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ ಜೊತೆಯಾಗಿ ನಿರ್ಮಾಣ ಮಾಡುತ್ತಿವೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಮಲಯಾಳಂ ನಿರ್ದೇಶಕಿ ಗೀತು ಮೋಹನದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಈ ಚಿತ್ರದಲ್ಲಿ ಯಶ್‍, ಕಿಯಾರಾ ಅಡ್ವಾಣಿ, ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್‍, ಅನಿಲ್‍ ಕಪೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Tags:    

Similar News