HMT Land Issue | ಎಚ್‌ಎಂಟಿ ಅರಣ್ಯ ಭೂಮಿ ಒತ್ತುವರಿ ತೆರವು

ಜೆಸಿಬಿ ಯಂತ್ರಗಳ ಜೊತೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸರ್ವೇ ನಂ 1ರಲ್ಲಿ ಐದು ಎಕರೆ ಒತ್ತುವರಿ ಜಾಗವನ್ನು ತೆರವು ಮಾಡಿ, ಅರಣ್ಯ ಇಲಾಖೆಯ ಸ್ವತ್ತು ಎಂಬ ನಾಮಫಲಕ ಅಳವಡಿಸಿದರು.

Update: 2024-10-26 08:07 GMT

ಎಚ್ಎಂಟಿ ಕಾರ್ಖಾನೆ ಸ್ವಾಧೀನದಲ್ಲಿರುವ ಪೀಣ್ಯ ಪ್ಲಾಂಟೇಷನ್ನಿನ 599 ಎಕರೆ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ಮೊದಲ ಹೆಜ್ಜೆ ಇರಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಎಚ್ಎಂಟಿ ಕಾರ್ಖಾನೆ ಆವರಣದ ಐದು ಎಕರೆ ಒತ್ತುವರಿ ಜಾಗವನ್ನು ತೆರವು ಮಾಡಿ, ಮರು ವಶಕ್ಕೆ ಪಡೆದರು.

ಜೆಸಿಬಿ ಯಂತ್ರಗಳ ಜೊತೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸರ್ವೇ ನಂ 1ರಲ್ಲಿ ಐದು ಎಕರೆ ಒತ್ತುವರಿ ಜಾಗವನ್ನು ತೆರವು ಮಾಡಿ, ಅರಣ್ಯ ಇಲಾಖೆಯ ಸ್ವತ್ತು ಎಂಬ ನಾಮಫಲಕ ಅಳವಡಿಸಿದರು.

ಎಚ್ಎಂಟಿ ಕಾರ್ಖಾನೆ ಪುನಶ್ಚೇತನ ಕುರಿತ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯ ನಂತರ ಪೀಣ್ಯ-ಜಾಲಹಳ್ಳಿಯಲ್ಲಿರುವ ಎಚ್ಎಂಟಿ ಕಾರ್ಖಾನೆ ಜಾಗದ ಕುರಿತ ಅರಣ್ಯ ಇಲಾಖೆ ಮತ್ತು ಕಂಪನಿ ನಡುವಿನ ವಿವಾದ ಮುನ್ನೆಲೆಗೆ ಬಂದಿದೆ.

ಎಚ್ಎಂಟಿ ಕಾರ್ಖಾನೆ ಸ್ವಾಧೀನದ ಜಾಗ ಕೇಂದ್ರ ಸರ್ಕಾರದ ಸ್ವತ್ತು ಎಂಬ ಬಿಜೆಪಿ ನಾಯಕರ ವಾದಕ್ಕೆ ತಿರುಗೇಟು ನೀಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಇದು ಅರಣ್ಯ ಜಾಗ. ಮೈಸೂರು ಮಹಾರಾಜ ಕಾಲದಲ್ಲೇ ಅಧಿಸೂಚಿತ ಅರಣ್ಯ ಎಂದು ಘೋಷಿಸಲಾಗಿದೆ. ಎಚ್ಎಂಟಿ ವಶದಲ್ಲಿರುವ 599 ಎಕರೆ ಭೂಮಿಯ ಪೈಕಿ ಅರಣ್ಯ ಸ್ವರೂಪದ ಮತ್ತು ಖಾಲಿ ಜಮೀನನ್ನು ಹಂತ ಹಂತವಾಗಿ ವಶಕ್ಕೆ ಪಡೆದು ಲಾಲ್‌ಬಾಗ್  ಅಥವಾ ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನ ನಿರ್ಮಿಸಲಾಗುವುದು ಎಂದು ಹೇಳಿದ್ದರು.

1896ರ ಮೇ 29ರ ಸರ್ಕಾರ ಅಧಿಸೂಚನೆ ಸಂಖ್ಯೆ 10407, ಎಫ್.ಟಿ.ಎಫ್. 153-95 ಮತ್ತು 1901ರ ಜನವರಿ 7ರ ಅಧಿಸೂಚನೆ ಸಂಖ್ಯೆ 422-ಎಫ್.ಟಿ.ಎಫ್.15-1900ರ ರೀತ್ಯ ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್‌ನ 599 ಎಕರೆ ಜಮೀನು ಅರಣ್ಯವಾಗಿದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿರಲಿದೆ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು.

ಅಲ್ಲದೇ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು ನಿಯಮಬಾಹಿರವಾಗಿ ಸಲ್ಲಿಸಿದ್ದ ಇಂಟರ್ ಲೊಕೇಟರಿ ಅಪ್ಲಿಕೇಶನ್ (ಐಎ) ಹಿಂಪಡೆಯಲು ಸಚಿವರು ಸೂಚಿಸಿದ್ದರು.

Tags:    

Similar News