ಜೈಲಲ್ಲಿ ಕೈದಿಗಳ ಮೋಜು; ಕಾರಾಗೃಹಗಳ ಪರಿಶೀಲನೆಗೆ ಹೈ ಪವರ್ ಕಮಿಟಿ
ಕೈದಿಗಳು ಮೋಜು ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದ್ದು, ಒಬ್ಬರ ವರ್ಗಾವಣೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಇಬ್ಬರು ಸೂಪರಿಡೆಂಟ್ ಹಾಗೂ ಸಹಾಯಕ ಸೂಪರಿಡೆಂಟ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾಹಿತಿ ನೀಡಿದ್ದಾರೆ.
ಕಾರಾಗೃಹಗಳ ಪ್ರಧಾನ ಕಚೇರಿಯಲ್ಲಿ 'ರಾಜ್ಯದ ಕಾರಾಗೃಹಗಳಲ್ಲಿ ಆಡಳಿತ ಮತ್ತು ಭದ್ರತೆ' ಕುರಿತು ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ, ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ತಕ್ಷಣದ ಶಿಸ್ತು ಕ್ರಮ
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಘಟನೆಯ ಜವಾಬ್ದಾರಿಯನ್ನು ಮೂವರು ಅಧಿಕಾರಿಗಳ ಮೇಲೆ ಹೊರಿಸಲಾಗಿದೆ. ಚೀಫ್ ಸೂಪರಿಡೆಂಟ್ ಕೆ. ಸುರೇಶ್ ಅವರನ್ನು ಕೂಡಲೇ ವರ್ಗಾವಣೆ ಮಾಡಲಾಗಿದೆ. ಇಮ್ಮಿಡಿಯಟ್ ಸೂಪರಿಡೆಂಟ್ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ.
"ಚೀಫ್ ಸೂಪರಿಡೆಂಟ್ ಹುದ್ದೆಗೆ, ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು. ಇನ್ನು ಮುಂದೆ ಪರಪ್ಪನ ಅಗ್ರಹಾರದ ಚೀಫ್ ಸೂಪರಿಡೆಂಟ್ ಹುದ್ದೆಯನ್ನು ಐಪಿಎಸ್ ಅಧಿಕಾರಿಯೇ ನಿರ್ವಹಿಸಲಿದ್ದಾರೆ," ಎಂದು ಅವರು ಸ್ಪಷ್ಟಪಡಿಸಿದರು.
"ರಾಜ್ಯದಲ್ಲಿನ ಕಾರಾಗೃಹಗಳ ಈವರೆಗಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಿದ್ದೇನೆ. ವೈರಲ್ ಆಗಿರುವ ಕೆಲವು ವೀಡಿಯೋಗಳು 2023ರಲ್ಲಿ ನಡೆದಿದ್ದು. ಅವು ನಿನ್ನೆ, ಮೊನ್ನೆ ನಡೆದ ವೀಡಿಯೋಗಳಲ್ಲ. ಒಂದೆರಡು ವೀಡಿಯೋಗಳು ಮಾತ್ರ ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ನಡೆದಿರುವುದು. 2023ರಲ್ಲಿ ಯಾರು ಕರ್ತವ್ಯದಲ್ಲಿದ್ದರು, 2024ರಲ್ಲಿ ಯಾರು ಇದ್ದರು ಮತ್ತು ಈಗ ಯಾರು ಇದ್ದಾರೆ, ಅವರೆಲ್ಲರಿಂದ ಚರ್ಚಿಸಿ ಉತ್ತರ ಪಡೆದುಕೊಂಡಿದ್ದೇವೆ," ಎಂದರು.
ಹೈ ಪವರ್ ಕಮಿಟಿ ರಚನೆ
"ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 5,000 ಕೈದಿಗಳಿದ್ದಾರೆ. ವಿಚಾರಣಾಧೀನ ಮತ್ತು ಸಜಾ ಕೈದಿಗಳು ಬೇರೆಬೇರೆ ಬ್ಯಾರಕ್‌ಗಳಲ್ಲಿ ಇದ್ದಾರೆ. ಈ ಕಾರಾಗೃಹದ ಮೇಲೆ ಹೆಚ್ಚಿನ ಗಮನವಿರುತ್ತದೆ. ಇಲ್ಲಿನ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೈಪವರ್ ಸಮಿತಿ ರಚನೆ ಮಾಡಿದ್ದೇವೆ," ಎಂದು ಸಚಿವರು ತಿಳಿಸಿದರು.
"ಈ ಸಮಿತಿಯು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮಾತ್ರವಲ್ಲದೆ, ರಾಜ್ಯದ ಎಲ್ಲಾ ಕಾರಾಗೃಹಗಳನ್ನು ಪರಿಶೀಲಿಸಿ ಸಮಗ್ರ ವರದಿಯನ್ನು ನೀಡಬೇಕು. ಇದಕ್ಕಾಗಿ 'ಟರ್ಮ್ಸ್ ಆಫ್ ರೆಫರೆನ್ಸ್' ನೀಡಲಾಗುವುದು. ಇಂತಹ ಘಟನೆಗಳು ನಡೆಯುವುದು ಒಂದು ಭಾಗವಾದರೆ, ಸಿಸಿಟಿವಿ ಕೆಲಸ ಮಾಡದಿರುವುದು ಸೇರಿದಂತೆ ಎಲ್ಲಾ ರೀತಿಯ ಲೋಪಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸುವಂತೆ ಸಮಿತಿಗೆ ತಿಳಿಸಲಾಗುವುದು," ಎಂದರು.
ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಐಜಿಪಿ ಸಂದೀಪ್ ಪಾಟೀಲ್, ಎಸ್‌ಪಿ ಅಮರನಾಥ್ ರೆಡ್ಡಿ, ಮತ್ತು ಎಸ್‌ಪಿ ರಿಷ್ಯಾಂತ್ ಅವರಿಗೂ ಜವಾಬ್ದಾರಿ ನೀಡಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ಸಮಿತಿಯ ಸಹ ಸದಸ್ಯರಾಗಿರುತ್ತಾರೆ.
"ಹೈ ಪವರ್ ಕಮಿಟಿ ನೀಡುವ ವರದಿ ಆಧರಿಸಿ, ಘಟನೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ ಅವರನ್ನು ಸೇವೆಯಿಂದ ವಜಾಗೊಳಿಸುವ ಅಥವಾ ಅಮಾನತುಗೊಳಿಸುವ ಕ್ರಮ ತೆಗೆದುಕೊಳ್ಳಲಾಗುವುದು. ಒಂದು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸದ್ಯ, ಪ್ರಾಥಮಿಕ ಮಾಹಿತಿ ಆಧರಿಸಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ," ಎಂದು ವಿವರಿಸಿದರು.
ತಾಂತ್ರಿಕ ಸುಧಾರಣೆಗಳಿಗೆ ಆದ್ಯತೆ
ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿನ ಚಟುವಟಿಕೆಗಳನ್ನು ಕಾರಾಗೃಹ ಪ್ರಧಾನ ಕಚೇರಿಯಿಂದಲೇ ನಿಗಾವಹಿಸಲು 'ಕಮಾಂಡ್ ಸೆಂಟರ್' ಸ್ಥಾಪಿಸಲಾಗುವುದು. ಇದಕ್ಕೆ 15 ದಿನಗಳ ಗಡುವು ನೀಡಲಾಗಿದೆ. ಎಲ್ಲಾ ಕಾರಾಗೃಹಗಳಲ್ಲಿನ ಸಿಸಿಟಿವಿ ಸೇರಿದಂತೆ ಇತರೆ ತಂತ್ರಜ್ಞಾನಗಳ ಕುರಿತು ಟೆಕ್ನಿಕಲ್ ಆಡಿಟ್ ಮಾಡಿಸಲಾಗುವುದು ಕಾರಾಗೃಹಗಳಲ್ಲಿ ಅಳವಡಿಸಿರುವ ಜಾಮರ್‌ಗಳಿಂದ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಲು, 'ಶಾಡೋ ಏರಿಯಾ'ಗಳಲ್ಲಿ (ಕಾರಾಗೃಹದೊಳಗೆ ಸಿಗ್ನಲ್ ಬರುವ ಸ್ಥಳ) ಸಿಗ್ನಲ್ ಬಾರದಂತೆ ಕ್ರಮ ವಹಿಸಲು ಟೆಕ್ನಿಕಲ್ ಟೀಮ್ ರಚಿಸಲಾಗುವುದು. ಕಾರಾಗೃಹಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಸೇರಿದಂತೆ ಎಲ್ಲಾ ರೀತಿಯ ತಾಂತ್ರಿಕ ಉಪಕರಣಗಳನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸಿಸಿಟಿವಿ ಅಳವಡಿಸಲು 2 ಕೋಟಿ ರೂಪಾಯಿ ಮತ್ತು ಹತ್ತು ಟವರ್‌ಗಳನ್ನು ನಿರ್ಮಿಸಲು 15 ಕೋಟಿ ರೂಪಾಯಿಗಳನ್ನು ಸಂಪುಟ ಸಭೆಯಲ್ಲಿ ಮಂಜೂರು ಮಾಡಲಾಗಿದ್ದು, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಸಿಬ್ಬಂದಿ ನೇಮಕಾತಿ ಮತ್ತು ವರ್ಗಾವಣೆ
"ಒಂದೇ ಕಡೆ ಐದು ವರ್ಷ ಕಾರ್ಯನಿರ್ವಹಿಸಿದ ಕಾರಾಗೃಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಲಾಗುವುದು. ಸಿಬ್ಬಂದಿ ಕೊರತೆಯ ಸಬೂಬು ಹೇಳುವಂತಿಲ್ಲ. 197 ವಾರ್ಡರ್, 22 ಇನ್‌ಸ್ಟ್ರಕ್ಟರ್, 3 ಅಸಿಸ್ಟೆಂಟ್ ಸೂಪರಿಡೆಂಟ್ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. 983 ವಾರ್ಡರ್ ಮತ್ತು 17 ಜೈಲರ್‌ಗಳ ನೇಮಕಾತಿಗೆ ಪ್ರಸ್ತಾವನೆ ಬಂದಿದ್ದು, ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಮಾಹಿತಿ ನೀಡಿದರು.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ
ಎಲ್ಲಾ ಕಾರಾಗೃಹಗಳ ಸೂಪರಿಡೆಂಟ್ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. "ಇಂತಹ ಘಟನೆಗಳು ಮರುಕಳಿಸಿದರೆ ಮತ್ತಷ್ಟು ಕಠಿಣ ಕ್ರಮ ಜರುಗಿಸಲಾಗುವುದು. ಘಟನೆ ಹಳೆಯದು, ಹೊಸದು ಎಂಬ ಸಬೂಬು ಹೇಳುವಂತಿಲ್ಲ. ನಿಷೇಧಿತ ವಸ್ತು ಯಾವಾಗ ಕಾರಾಗೃಹದೊಳಗೆ ಹೋಗಿತ್ತು, ಆಗ ಯಾವ ಅಧಿಕಾರಿ ಕರ್ತವ್ಯದಲ್ಲಿದ್ದರು, ಅವರನ್ನೇ ಹೊಣೆ ಮಾಡಲಾಗುವುದು. ಕೆಳ ಹಂತದ ಸಿಬ್ಬಂದಿ ಮೇಲೆ ನಿಗಾವಹಿಸುವುದು ಮೇಲಾಧಿಕಾರಿಗಳ ಜವಾಬ್ದಾರಿ, ಹೀಗಾಗಿ ಅವರನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ," ಎಂದು ಎಚ್ಚರಿಸಿದರು.
ಎಲ್ಲಾ ಕಾರಾಗೃಹಗಳ ಅಧಿಕಾರಿಗಳು ಪ್ರಧಾನ ಕಚೇರಿಯೊಂದಿಗೆ ನೇರ ಸಂಪರ್ಕದಲ್ಲಿರಬೇಕು. ಹಿರಿಯ ಅಧಿಕಾರಿಗಳು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕಡ್ಡಾಯವಾಗಿ ಕಾರಾಗೃಹಗಳಿಗೆ ಭೇಟಿ ನೀಡಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಕಾರಾಗೃಹಗಳಿಗೆ ಭೇಟಿ ನೀಡಿ, ವರದಿ ನೀಡಬೇಕು ಎಂದು ಸೂಚಿಸಲಾಗಿದೆ.
"ಎನ್‌ಐಎ ವರದಿಯನ್ನು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಕೂಡ ಹೈಪವರ್ ಕಮಿಟಿ ವರದಿಯಲ್ಲಿ ಸೇರಲಿದೆ. ವರದಿಯನ್ನು ಬಹಿರಂಗಪಡಿಸುತ್ತೇನೆ, ಎಲ್ಲರಿಗೂ ಸತ್ಯ ಗೊತ್ತಾಗಲಿ. ಸದ್ಯಕ್ಕೆ ಎಸ್‌ಪಿ ದರ್ಜೆಯ ಅಧಿಕಾರಿಯನ್ನು ಚೀಫ್ ಸೂಪರಿಡೆಂಟ್ ಹುದ್ದೆಗೆ ನೇಮಿಸುತ್ತೇವೆ, ಮುಂದಿನ ದಿನಗಳಲ್ಲಿ ಡಿಐಜಿ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಲಾಗುವುದು," ಎಂದರು.
ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಐಎಸ್‌ಡಿ ವಿಭಾಗದ ಎಡಿಜಿಪಿ ಚಂದ್ರಶೇಖರ್ ಉಪಸ್ಥಿತರಿದ್ದರು.