ಸಿನಿಮಾ ಟಿಕೆಟ್‌ಗೆ ಗರಿಷ್ಠ 200 ರೂ. ನಿಗದಿ: ತಡೆ ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, "ಇದು ಸಿನಿಮಾ ವೀಕ್ಷಕರು ಮತ್ತು ಪ್ರದರ್ಶಕರ ಆಯ್ಕೆಯ ಹಕ್ಕಿನ ಪ್ರಶ್ನೆಯಾಗಿದೆ. ಈ ಹಿಂದೆ, 2017ರಲ್ಲಿ ಇದೇ ರೀತಿಯ ಆದೇಶವನ್ನು ಸರ್ಕಾರ ಹೊರಡಿಸಿ, ನಂತರ ಹಿಂಪಡೆದಿತ್ತು.;

Update: 2025-09-16 15:27 GMT

ಸಾಂದರ್ಭಿಕ ಚಿತ್ರ

Click the Play button to listen to article

ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ, ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮಕ್ಕೆ ತಡೆ ನೀಡಬೇಕೆಂಬ ಮಧ್ಯಂತರ ಮನವಿಯ ಕುರಿತ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್​ 23ಕ್ಕೆ ಕಾಯ್ದಿರಿಸಿದೆ.

ಸೆಪ್ಟೆಂಬರ್ 12 ರಿಂದ ಜಾರಿಗೆ ಬಂದಿರುವ 'ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025' ಅನ್ನು ಪ್ರಶ್ನಿಸಿ, ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರರು ಮತ್ತು ಇತರ ಚಿತ್ರ ನಿರ್ಮಾಣ ಸಂಸ್ಥೆಗಳು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ, ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿತು.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, "ಇದು ಸಿನಿಮಾ ವೀಕ್ಷಕರು ಮತ್ತು ಪ್ರದರ್ಶಕರ ಆಯ್ಕೆಯ ಹಕ್ಕಿನ ಪ್ರಶ್ನೆಯಾಗಿದೆ. ಈ ಹಿಂದೆ, 2017ರಲ್ಲಿ ಇದೇ ರೀತಿಯ ಆದೇಶವನ್ನು ಸರ್ಕಾರ ಹೊರಡಿಸಿ, ನಂತರ ಹಿಂಪಡೆದಿತ್ತು. ಈಗ ಮತ್ತೆ ಅದೇ ನಿಯಮವನ್ನು ಜಾರಿಗೊಳಿಸಲಾಗಿದೆ," ಎಂದು ಹೇಳಿದರು. "ಚಿತ್ರಮಂದಿರಗಳನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ. ಹೀಗಿರುವಾಗ, ಸರ್ಕಾರವು ಏಕರೂಪವಾಗಿ 200 ರೂಪಾಯಿ ದರ ನಿಗದಿಪಡಿಸುವುದು ಕಾನೂನುಬಾಹಿರ ಮತ್ತು ಸಂವಿಧಾನದ 14 ಮತ್ತು 19(1)(g) ವಿಧಿಗಳ ಉಲ್ಲಂಘನೆಯಾಗಿದೆ," ಎಂದು ಅವರು ವಾದಿಸಿದರು.

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಜಬೀವುಲ್ಲಾ, "ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಬಜೆಟ್‌ನಲ್ಲಿ ಘೋಷಿಸಿದಂತೆ ಈ ದರ ನಿಗದಿ ಮಾಡಲಾಗಿದೆ. ಸಂವಿಧಾನದ ಅಡಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ಆದ್ದರಿಂದ, ಈ ನಿಯಮಕ್ಕೆ ತಡೆ ನೀಡಬಾರದು," ಎಂದು ಮನವಿ ಮಾಡಿದರು.

ವಾದ-ವಿವಾದಗಳನ್ನು ಆಲಿಸಿದ ನ್ಯಾಯಪೀಠವು, ಸರ್ಕಾರದ ನಿಯಮಕ್ಕೆ ತಡೆ ನೀಡಬೇಕೆಂಬ ಮಧ್ಯಂತರ ಮನವಿಯ ಕುರಿತ ತನ್ನ ಆದೇಶವನ್ನು ಸೆಪ್ಟೆಂಬರ್ 23ಕ್ಕೆ ಕಾಯ್ದಿರಿಸಿದೆ.

Tags:    

Similar News