High court News | ಪಾಕ್ ಪ್ರಜೆಗಳಿಗೆ ವೀಸಾ ಅವಧಿ ವಿಸ್ತರಣೆಗೆ ನಿರ್ದೇಶಿಸಲು ಹೈಕೋರ್ಟ್ ನಕಾರ
ಪಹಲ್ಗಾಮ್‌ನಲ್ಲಿ ಭಾರತದ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿ ಬಳಿಕ ವೀಸಾ ಪಡೆದು ನೆಲೆಸಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ವೀಸಾ ಹಿಂದಿರುಗಿಸಬೇಕು. 2025ರ ಏಪ್ರಿಲ್ 30ರ ಅಂತ್ಯದೊಳಗಾಗಿ ಭಾರತ ತೊರೆಯಬೇಕು ಎಂದು ಕೇಂದ್ರ ಸರ್ಕಾರವು ಗಡುವು ವಿಧಿಸಿತ್ತು.;
ಪಹಲ್ಗಾಮ್ ಭಯೋತ್ಪಾದಕ ಕೃತ್ಯದ ನಂತರ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳು ದೇಶ ತೊರೆಯಬೇಕೆಂಬ ಕೇಂದ್ರ ಸರ್ಕಾರದ ನಿರ್ದೇಶನದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿದ ಮೂರು ಮಕ್ಕಳು ತಮಗೆ ಮಾನವೀಯತೆ ಮತ್ತು ಅನುಕಂಪದ ಆಧಾರದಲ್ಲಿ ಮೇ 15ರವರೆಗೆ ವೀಸಾ ವಿಸ್ತರಣೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಪಾಕ್ ಪ್ರಜೆಗಳಿಗೆ ನೀಡಿದ್ದ ವೀಸಾ ರದ್ದತಿ ಸೇರಿದಂತೆ ಹಲವು ನಿರ್ಧಾರಗಳನ್ನು ದೇಶದ ಹಿತಾಸಕ್ತಿಯಿಂದ ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ. ಪಾಕಿಸ್ತಾನದ ಬಲೂಚಿಸ್ತಾನದ 8 ವರ್ಷದ ಬಿ.ಬಿ. ಯಾಮಿನಾ, 4 ವರ್ಷದ ಮುಹಮ್ಮದ್ ಮುದಾಸ್ಸಿರ್ ಮತ್ತು 3 ವರ್ಷದ ಮೊಹಮ್ಮದ್ ಯೂಸಫ್ ಅವರು ತಮ್ಮ ವಿರುದ್ಧ ಮೇ 15ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ರಜಾಕಾಲದ ಏಕಸದಸ್ಯ ಪೀಠವು ವಜಾಗೊಳಿಸಿತು.
“2025ರ ಜ. 4ರಂದು ಅರ್ಜಿದಾರರು ತಾಯಿಯ ಜೊತೆ ಭಾರತಕ್ಕೆ ಬಂದಿದ್ದರು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ಕೃತ್ಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪಾಕಿಸ್ತಾನಿ ಪ್ರವಾಸಿಗರ ವೀಸಾ ರದ್ದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಏಪ್ರಿಲ್ 27ರ ಒಳಗೆ ದೇಶ ತೊರೆಯುವಂತೆ ಆದೇಶಿಸಿದೆ.
''ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಏ. 25ರಂದು ಆದೇಶ ಮಾಡಿದ್ದು, ಪಾಕಿಸ್ತಾನಿ ಪ್ರಜೆಗಳಿಗೆ ಮಂಜೂರು ಮಾಡಿದ್ದ ವೀಸಾ ರದ್ದುಪಡಿಸಿದ್ದಾರೆ. ಕೇಂದ್ರದ ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ದೇಶದ ಹಿತಾಸಕ್ತಿ ರಕ್ಷಿಸಲು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದೆ. ಹೀಗಾಗಿ, ಅರ್ಜಿದಾರರ ಪರವಾಗಿ ಆದೇಶ ಮಾಡಲು ನ್ಯಾಯಾಲಯವು ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣ ಹೊಂದಿಲ್ಲ” ಎಂದು ನ್ಯಾಯಾಲಯವು ಆದೇಶ ಮಾಡಿದೆ.
ಅರ್ಜಿದಾರರ ಪರ ವಕೀಲರು “ಕೇಂದ್ರ ಸರ್ಕಾರ ಆಕ್ಷೇಪಣೆ ಒದಗಿಸಿಲ್ಲ. ನಾವು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಿಲ್ಲ. ದೇಶ ತೊರೆಯಲು ಅರ್ಜಿದಾರ ಮಕ್ಕಳಿಗೆ 15 ದಿನ ಕಾಲಾವಕಾಶ ನೀಡಬೇಕು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇದೇ ಪರಿಸ್ಥಿತಿಯನ್ನು ಪರಿಗಣಿಸಿ ಕಾಲಾವಕಾಶ ನೀಡಿದೆ. ಏಪ್ರಿಲ್ 28ರಂದು ಭಾರತ ಸರ್ಕಾರದ ಆದೇಶದಂತೆ ಅರ್ಜಿದಾರರು ಅಟ್ಟಾರಿ ಗಡಿಗೆ ಹೋಗಿದ್ದರು. ಆದರೆ, ಅವರನ್ನು ವಾಪಸ್ ಕಳುಹಿಸಲಾಗಿದೆ” ಎಂದರು.
ಇದಕ್ಕೆ ಪೀಠವು ಮೌಖಿಕವಾಗಿ “ನಮ್ಮ ಮಾನವೀಯತೆಯ ಮೇಲೆ ದಾಳಿಯಾಗಿದೆ. ಕೇಂದ್ರ ಸರ್ಕಾರವು ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಂಡಿದ್ದು, ಈ ನ್ಯಾಯಾಲಯ ಅದರಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ” ಎಂದಿತು.
ಕೇಂದ್ರ ಸರ್ಕಾರದ ಪರ ವಕೀಲರು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ವಿವರಿಸಿ, ಅರ್ಜಿ ವಜಾ ಮಾಡಬೇಕು ಎಂದು ಕೋರಿದರು. ಅರ್ಜಿದಾರ ಮಕ್ಕಳ ತಾಯಿ ಮೈಸೂರಿನವರಾಗಿದ್ದು, ಷರಿಯತ್ ಕಾನೂನಿನ ಪ್ರಕಾರ ಪಾಕಿಸ್ತಾನದ ಪ್ರಜೆಯನ್ನು ವಿವಾಹವಾಗಿದ್ದಾರೆ. ಅದಾಗ್ಯೂ, ಪಾಕಿಸ್ತಾನದ ಪೌರತ್ವ ಪಡೆಯದೆ ಭಾರತದ ಪ್ರಜೆಯಾಗಿ ಮುಂದುವರೆದಿದ್ದಾರೆ. ಆದರೆ, ಅರ್ಜಿದಾರರ ಮಕ್ಕಳು ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿರುವುದರಿಂದ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಾಯಿಯೊಂದಿಗೆ 2025ರ ಜನವರಿ 4ರಂದು ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ಬಳಿಕ 2025ರ ಜೂನ್ 18ರವರೆಗೂ ವೀಸಾ ಅವಧಿ ವಿಸ್ತರಿಸಲಾಗಿದೆ.
ಈ ನಡುವೆ, ಪಹಲ್ಗಾಮ್‌ನಲ್ಲಿ ಭಾರತದ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ಬಳಿಕ ಭಾರತದಲ್ಲಿ ವೀಸಾ ಪಡೆದು ನೆಲೆಸಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ವೀಸಾ ಹಿಂದಿರುಗಿಸಬೇಕು. 2025ರ ಏಪ್ರಿಲ್ 30ರ ಅಂತ್ಯದೊಳಗಾಗಿ ಭಾರತ ತೊರೆಯಬೇಕು ಎಂದು ಕೇಂದ್ರ ಸರ್ಕಾರವು ಗಡುವು ವಿಧಿಸಿತ್ತು.
ಅರ್ಜಿದಾರರು 2025ರ ಏಪ್ರಿಲ್ 28ರಂದು ಪಾಕಿಸ್ತಾನಕ್ಕೆ ತೆರಳಲು ಅಟ್ಟಾರಿ ಗಡಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಕ್ಕಳ ತಂದೆ ಮೊಹಮ್ಮದ್ ಫಾರೂಖ್ ಮಕ್ಕಳನ್ನು ಕರೆದೊಯ್ಯಲು ಬಾರದೇ ಹೊಣೆಗಾರಿಕೆ ನಿರಾಕರಿಸಿದ್ದಾರೆ. ಬಳಿಕ ಭಾರತದ ವಲಸೆ ಅಧಿಕಾರಿಗಳು ಮಕ್ಕಳನ್ನು ಮತ್ತೆ ಮೈಸೂರಿಗೆ ಕಳುಹಿಸಿದ್ದರು. ತಮ್ಮ ಮೂವರು ಮಕ್ಕಳಿಗೆ ಮಾನವೀಯತೆಯ ಆಧಾರ ಮತ್ತು ಅನುಕಂಪದ ನೆಲೆಯಲ್ಲಿ ಹಾಗೂ ಪತಿಯಿಂದ ಪ್ರತ್ಯೇಕಗೊಂಡಿರುವ ಆಧಾರದಲ್ಲಿ ಎಲ್‌ಟಿವಿ/ವೀಸಾ ವಿಸ್ತರಣೆ ನೀಡಬೇಕು ಎಂದು ರಮ್ಸಾ ಜಹಾನ್ ಅವರು ಏಪ್ರಿಲ್ 29ರಂದು ಎಫ್‌ಆರ್‌ಒ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಗಣಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.