ಅರಣ್ಯ ಜಮೀನು ಒತ್ತುವರಿ | ಜ.15 ರೊಳಗೆ ಸರ್ವೆ ಮುಗಿಸಲು ಹೈಕೋರ್ಟ್ ಆದೇಶ
ಅರಣ್ಯ ಹಾಗೂ ಕಂದಾಯ ಇಲಾಖೆಗೆ ಜಂಟಿ ಸರ್ವೆ ಮಾಡಿ ಒತ್ತುವರಿಯಾಗಿದ್ದಲ್ಲಿ ತೆರವು ಮಾಡಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ಕಾರಣ ನೀಡಿ ಮೂರು ಬಾರಿ ಜಂಟಿ ಸರ್ವೆ ಕಾರ್ಯ ಮುಂದೂಡಿತ್ತು.;
ಅರಣ್ಯ ಭೂಮಿ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ರಕ್ಷಣೆಗೆ ತೆರೆಮರೆ ಪ್ರಯತ್ನ ಮಾಡುತ್ತಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದ್ದು, ಜನವರಿ 15ರೊಳಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ವೆ ಕಾರ್ಯ ಮುಗಿಸಿ ಜನವರಿ 30 ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ಹೈಕೋರ್ಟ್ ಸೂಚನೆ ನೀಡಿದೆ.
30 ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಜಿಂಗಾಲಕುಂಟೆ ಅರಣ್ಯ ಪ್ರದೇಶದಲ್ಲಿನ ಹೊಸಹುಡ್ಯ ಗ್ರಾಮದ ಸರ್ವೆ ನಂ-1 ಮತ್ತು 2 ರಲ್ಲಿ 61.39 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪವಿದೆ.
ಕಳೆದ ಎರಡು ದಶಕಗಳಿಂದ ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ವಾದ, ಪ್ರತಿವಾದಗಳು ನಡೆಯುತ್ತಲೇ ಇವೆ. ಅರಣ್ಯ ಹಾಗೂ ಕಂದಾಯ ಇಲಾಖೆಗೆ ಜಂಟಿ ಸರ್ವೆ ಮಾಡಿ ಒತ್ತುವರಿಯಾಗಿದ್ದಲ್ಲಿ ತೆರವು ಮಾಡಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ಕಾರಣ ನೀಡಿ ಮೂರು ಬಾರಿ ಜಂಟಿ ಸರ್ವೆ ಕಾರ್ಯ ಮುಂದೂಡಿತ್ತು. ರಮೇಶ್ ಕುಮಾರ್ ಕಾಂಗ್ರೆಸ್ನ ಪ್ರಭಾವಿ ಮುಖಂಡ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಅತ್ಯಾಪ್ತರಾಗಿದ್ದಾರೆ. ಹೀಗಾಗಿ ಅವರ ರಕ್ಷಣೆಗೆ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಈ ಬಗ್ಗೆ ಜನವರಿ 15ರೊಳಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ವೆ ಕಾರ್ಯ ಮುಗಿಸಿ ಜನವರಿ 30 ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮೇಲ್ಮನವಿಗೆ ಅವಕಾಶವಿಲ್ಲ
ಇದಲ್ಲದೆ ಮೇಲ್ಮನವಿ ಸಲ್ಲಿಸಲು ರಮೇಶ್ ಕುಮಾರ್‌ಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಸರ್ಕಾರ, ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರಿಂದ ಮಾಡಿದ್ದ ಎಲ್ಲಾ ಆದೇಶಗಳನ್ನು ವಜಾ ಮಾಡಿದೆ.
ಏನಿದು ಪ್ರಕರಣ ?
ಶ್ರೀನಿವಾಸಪುರ ಜಿಂಗಾಲಕುಂಟೆ ಅರಣ್ಯ ಪ್ರದೇಶದ ಹೊಸಹುಡ್ಯ ಸರ್ವೆ ಸಂಖ್ಯೆ 1 ಹಾಗೂ 2ರಲ್ಲಿ61.39 ಎಕರೆ ಜಮೀನು ಮಾಲೀಕತ್ವಕ್ಕಾಗಿ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ಕಂದಾಯ ಇಲಾಖೆ ಪ್ರವೇಶದಿಂದಾಗಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ತೋಟ ಇರುವ ಪ್ರದೇಶ ಅರಣ್ಯ ಜಾಗ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆ ಕಾರ್ಯದ ಕುರಿತ ಪ್ರಯತ್ನಗಳು ನಡೆಯುತ್ತಲೇ ಇದೆ. ಶುಕ್ರವಾರ ನಡೆಯಬೇಕಿದ್ದ ಜಂಟಿ ಸರ್ವೇ ಕಾರ್ಯವನ್ನು ಜನವರಿ 2ಕ್ಕೆ ಮುಂದೂಡಲಾಗಿತ್ತು.