Highcourt | ಸಿಎಂ ಸಿದ್ದರಾಮಯ್ಯ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್
ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ್ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.;
ಪ್ರಾತಿನಿಧಿಕ ಚಿತ್ರ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ್ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಸಿದ್ದರಾಮಯ್ಯ ಪರ ವಕೀಲರು “ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ 11 ಆರೋಪಗಳನ್ನು ಮಾಡಲಾಗಿದೆ. ಈ ಪೈಕಿ ಚುನಾವಣಾ ವೆಚ್ಚದ ಬಗ್ಗೆ ಪ್ರಮುಖ ಆರೋಪ ಮಾಡಲಾಗಿದೆ. ಚುನಾವಣಾಧಿಕಾರಿ ಅಥವಾ ಚುನಾವಣಾ ಆಯೋಗಕ್ಕೆ ನಾನು ಚುನಾವಣಾ ವೆಚ್ಚದ ಮಿತಿ ಮೀರಿದ್ದೇನೆ ಎಂಬುದಕ್ಕೆ ಸಂಬಂಧಿಸಿದಂತೆ ದೂರು ನೀಡಿಲ್ಲ. ನಾನು ಸಿಎಂ ಆದ ಬಳಿಕ ಆರೋಪಗಳನ್ನು ಸೃಷ್ಟಿ ಮಾಡಲಾಗಿದೆ.
ಅರ್ಜಿದಾರರು ನ್ಯಾಯಾಲಯವನ್ನು ಮಾತ್ರ ದಾರಿ ತಪ್ಪಿಸುತ್ತಿಲ್ಲ. ಇಡೀ ಜಗತ್ತನ್ನು ದಾರಿ ತಪ್ಪಿಸಿದ್ದಾರೆ. ನಾನು ಎಷ್ಟು ವೆಚ್ಚ ಮಾಡಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಅದನ್ನು ಉಲ್ಲೇಖಿಸಿಲ್ಲ. ಗ್ಯಾರಂಟಿಗಳನ್ನು ಒಳಗೊಂಡ ಪ್ರಣಾಳಿಕೆ ಪಕ್ಷಕ್ಕೆ ಸೇರಿದ್ದು, ಇದನ್ನು ನನ್ನ ವೆಚ್ಚಕ್ಕೆ ಸೇರಿಸಬಹುದೇ? ಗ್ಯಾರಂಟಿ ಯೋಜನೆ ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಇದು ನನ್ನ ಚುನಾವಣಾ ವೆಚ್ಚಕ್ಕೆ ಸೇರುತ್ತದೆಯೇ, ನಾನು ಮುಖ್ಯಮಂತ್ರಿಯಾದ ಮೇಲೆ ಇದು ಅನ್ವಯಿಸುವುದೇ?” ಎಂದು ಪ್ರಶ್ನಿಸಿದ್ದರು.
“ಚುನಾವಣೆಗೆ ಎಷ್ಟು ಹಣ ವೆಚ್ಚ ಮಾಡಿದ್ದೇನೆ. ಯಾವಾಗ, ಹೇಗೆ, ಎಲ್ಲಿ ವೆಚ್ಚ ಮಾಡಿದ್ದೇನೆ ಎಂಬ ಗುಸುಗುಸು ಸಹ ಅರ್ಜಿಯಲ್ಲಿಲ್ಲ. ನನ್ನ ವಾಹನಗಳಿಗೆ ವೆಚ್ಚ ಮಾಡಿದ್ದೇನೆಯೇ? ಕಾರಿಗೆ, ಭಿತ್ತಿಪತ್ರ, ಪೋಸ್ಟರ್‌ಗಾಗಿ ವೆಚ್ಚ ಮಾಡಿದ್ದೇನೆಯೇ? ಯಾವಾಗ ಮಾಡಿದ್ದೇನೆ? ನನ್ನ ಕ್ಷೇತ್ರದಲ್ಲಿ ನೂರಾರು ಗ್ರಾಮಗಳಿವೆ. ಯಾವ ಹಳ್ಳಿಯಲ್ಲಿ ವೆಚ್ಚ ಮಾಡಿದ್ದೇನೆ. ಮೈಸೂರು ನಗರ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನಗರದಲ್ಲಿ ನಾನು ವೆಚ್ಚ ಮಾಡಿದ್ದೇನೆಯೇ ಅಥವಾ ಹಳ್ಳಿಗಳಲ್ಲಿ ವೆಚ್ಚ ಮಾಡಿದ್ದೇನೆಯೇ? ಈ ಕುರಿತು ಯಾವುದೇ ವಿಚಾರ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ಇಡೀ ಚುನಾವಣಾ ವೆಚ್ಚದ ಹಣವನ್ನು ನಾನು ಒಂದೇ ದಿನ ವೆಚ್ಚ ಮಾಡದಿರಬಹುದು. ಉಮೇದುವಾರಿಕೆ ಸಲ್ಲಿಸಿದ ಬಳಿಕ ವೆಚ್ಚ ಮಾಡಿರಬಹುದು. ಎರಡು ವಾರಗಳ ನಂತರ ಮಾಡಿರಬಹುದು. ನಾನು 40 ಲಕ್ಷ ರೂಪಾಯಿಯಿಂದ 20 ಕೋಟಿ ರೂಪಾಯಿ ಹಣ ವೆಚ್ಚ ಮಾಡಿದ್ದೇನೆ ಎಂಬುದು ಅರ್ಜಿದಾರರ ವಾದವಾಗಿದ್ದರೆ ಇದಕ್ಕೆ ಪೂರಕವಾಗಿ ಚುನಾವಣಾ ವೆಚ್ಚ ಮಿತಿ ಮೀರಿದ್ದೇನೆ ಎಂಬುದಕ್ಕೆ ದತ್ತಾಂಶ ಸಲ್ಲಿಸಬೇಕಿತ್ತು” ಎಂದಿದ್ದರು.
“ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ದುರುದ್ದೇಶಪೂರಿತವಾದ ಆರೋಪ ಮಾಡಲಾಗಿದೆ. ಇದು ದ್ವೇಷದಿಂದ ಕೂಡಿದ ಆರೋಪವಾಗಿದೆ. ಸೂಕ್ತ ಮತ್ತು ನಿರ್ದಿಷ್ಟ ವಿಚಾರ ಒಳಗೊಂಡಿರದ ಇದನ್ನು ಚುನಾವಣಾ ಅರ್ಜಿ ಎನ್ನಬಹುದೇ? ಯಾವುದೇ ಪರಿಶೀಲನೆ ಇಲ್ಲ. ಅಫಿಡವಿಟ್ ಇಲ್ಲ. ವಾಸ್ತವಿಕ ಅಂಶಗಳನ್ನು ಅಡಕಗೊಳಿಸಬೇಕಿತ್ತು. ಆದರೆ, ಸುಳ್ಳುಗಳನ್ನು ಅರ್ಜಿಯಲ್ಲಿ ತುಂಬಿದ್ದಾರೆ” ಎಂದು ಟೀಕಿಸಿದ್ದರು.
“ಚುನಾವಣಾ ತಕರಾರು ಅರ್ಜಿಗಳು ನಕಲು ಮಾಡುವಂತಹ ಅರ್ಜಿಗಳಲ್ಲ. ಅವುಗಳನ್ನು ರೂಪಿಸಲು ಗಂಭೀರ ಸಿದ್ದತೆ ಮಾಡಬೇಕು. ಆದರೆ, ಶಾಸಕರಾದ ರಿಜ್ವಾನ್ ಅರ್ಷದ್, ಸಚಿವ ಪ್ರಿಯಾಂಕ್ ಖರ್ಗೆ ಅಸಿಂಧು ಕೋರಿರುವ ಅರ್ಜಿಗಳಿಂದ ಸಂಪೂರ್ಣ ನಕಲು ಮಾಡಲಾಗಿದೆ. ಮತ್ತೊಂದು ಅರ್ಜಿಯಲ್ಲಿರುವ ಅಲ್ಪ ವಿರಾಮ, ಪೂರ್ಣವಿರಾಮ ಮತ್ತು ವ್ಯಾಕರಣ ದೋಷಗಳು ಈ ಅರ್ಜಿಯಲ್ಲಿಯೂ ಯಥಾವತ್ತಾಗಿದೆ. ಇದಕ್ಕಾಗಿ ಅರ್ಜಿದಾರರ ವಿರುದ್ದ ಕ್ರಮವಾಗಬೇಕು. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಉಲ್ಲೇಖಿಸುವ ಅಂಶಗಳು ಭವಿಷ್ಯದಲ್ಲಿ ರಚನೆಯಾಗುವ ಸರ್ಕಾರದ ಭರವಸೆಗಳೇ ವಿನಾ ಅಭ್ಯರ್ಥಿಯ ವೈಯಕ್ತಿಕ ಭರವಸೆಗಳಲ್ಲ. ಪ್ರಣಾಳಿಕೆಯಲ್ಲಿನ ಭರವಸೆಗಳು ಚುನಾವಣಾ ಅಕ್ರಮ ಎನ್ನಲಾಗದು” ಎಂದು ವಾದಿಸಿದ್ದರು.
ಅರ್ಜಿದಾರರ ಪರ ವಕೀಲರು “ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕುಗಳು ಮತ್ತು ಸಂವಿಧಾನದ ನಿರ್ದೇಶಕ ತತ್ವಗಳಿಗೆ ವಿರುದ್ಧವಾಗಿವೆ. ಆ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯು ನೋಂದಾಯಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಪ್ರಣಾಳಿಕೆ ಅಲ್ಲ. ಅದು ಕೆಪಿಸಿಸಿಯ ಪ್ರಣಾಳಿಕೆಯಾಗಿದೆ. ಕೆಪಿಸಿಸಿಯು ನೋಂದಾಯಿತ ಪಕ್ಷವಲ್ಲ. ಹೀಗಾಗಿ, ಅದರ ಹೆಸರಿನಲ್ಲಿ ರೂಪಿಸಿರುವ ಪ್ರಣಾಳಿಕೆಯು ಭ್ರಷ್ಟಾಚಾರಕ್ಕೆ ಸಮ. ಗ್ಯಾರಂಟಿ ಯೋಜನೆಗಳ ಕಾರ್ಡ್‌ಗೆ ಸಹಿ ಮಾಡಿರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ಪ್ರಣಾಳಿಕೆ ರೂಪಿಸಿ, ಪ್ರಚಾರ ಮಾಡಿದ್ದಾರೆ. ಆ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಹೀಗಾಗಿ, ಅವರ ಆಯ್ಕೆ ಅನೂರ್ಜಿತಗೊಳಿಸಬೇಕು. ಭ್ರಷ್ಟಾಚಾರದ ಮೂಲಕ ಚುನಾವಣೆ ಜಯಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು” ಎಂದು ಕೋರಿದ್ದರು.
“ಕ್ರೋಢೀಕೃತ ನಿಧಿಯನ್ನು ಉಚಿತ ಯೋಜನೆಗೆ ಬಳಸಲಾಗದು. ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ನಾನು ಹೇಳುವುದಿಲ್ಲ, ಆದರೆ ವಿಶೇಷ ಮಸೂದೆಯನ್ನು ಹಣಕಾಸು ಮಸೂದೆಯ ಪ್ರಕಾರ ಅಂಗೀಕರಿಸಬೇಕು. ಹಾಲಿ ಪ್ರಕರಣದಲ್ಲಿ ಯಾವುದೇ ಹಣಕಾಸು ಮಸೂದೆಯನ್ನು ಅಂಗೀಕರಿಸಲಾಗಿಲ್ಲ, ಇದು ತೆರಿಗೆದಾರರ ಹಣದ ದುರ್ಬಳಕೆಯಾಗಲಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಅಪರಾಧಿಯಾಗಿದ್ದಾರೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು. ನ್ಯಾಯಾಲಯವು ಉಚಿತ ಯೋಜನೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಪ್ರಣಾಳಿಕೆ ಮತ್ತು ಅದರಲ್ಲಿನ ಅಂಶಗಳನ್ನು ಒಪ್ಪಿದರೆ ಅದನ್ನು ಕೆಪಿಸಿಸಿ ರೂಪಿಸಬಹುದೇ ಎನ್ನುವ ಪ್ರಶ್ನೆಯಿದೆ. ಹಾಗೆ ಮಾಡುವುದು ಭ್ರಷ್ಟಾಚಾರವಾಗುತ್ತದೆಯೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು” ಎಂದು ಕೋರಿದ್ದರು.
“ಇನ್ನು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವ ಸೇವೆಯನ್ನು ಪುರುಷರಿಗೆ ವಿಸ್ತರಿಸದಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅಗತ್ಯವಿರುವವರಿಗೆ ನೀಡಬಹುದಿತ್ತು. ಅದನ್ನು ಎಲ್ಲರಿಗೂ ವಿಸ್ತರಿಸಲಾಗದು. ಇಲ್ಲಿ ಕರ್ನಾಟಕದ ಮತದಾರರನ್ನು ಲಘುವಾಗಿ ಪರಿಗಣಿಸಲಾಗಿದೆ” ಎಂದು ಆಕ್ಷೇಪಿಸಿದ್ದರು.