ಮುಡಾ ಹಗರಣ: ಎಂ ಸಿದ್ದರಾಮಯ್ಯ, ಪತ್ನಿಗೆ ಹ್ಯಾಂಡ್‌ ಸಮನ್ಸ್‌ ನೀಡಲು ಹೈಕೋರ್ಟ್ ನಿರ್ದೇಶನ

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಮತ್ತು ಬಾಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ಹ್ಯಾಂಡ್ ಸಮನ್ಸ್ ನೀಡಲು ಅರ್ಜಿದಾರ ಸ್ನೇಹಮಯಿ ಕೃಷ್ಣ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

Update: 2024-12-11 04:37 GMT
ಕರ್ನಾಟಕ ಹೈಕೋರ್ಟ್‌

ಮುಡಾ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಮತ್ತು ಬಾಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ಹ್ಯಾಂಡ್ ಸಮನ್ಸ್ ನೀಡಲು ಅರ್ಜಿದಾರ ಸ್ನೇಹಮಯಿ ಕೃಷ್ಣ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಅಲ್ಲದೆ, ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿ ಮಾಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ರಾಜ್ಯ ಸರಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿದೆ.

ಹೈಕೋರ್ಟ್‌ನ ಹಿಂದಿನ ಸೂಚನೆಯಂತೆ ಪ್ರಕರಣದ ಕುರಿತು ಡಿ.9 ರವರೆಗೆ ನಡೆಸಿರುವ ತನಿಖೆಯ ಕುರಿತ ವಸ್ತುಸ್ಥಿತಿ ವರದಿಯನ್ನು ಲೋಕಾಯುಕ್ತ ಪೊಲೀಸರು ನ್ಯಾಯಪೀಠಕ್ಕೆ ಸಲ್ಲಿಸಿದರು.  ಪ್ರಕರಣದ ಕೇಸ್‌ ಡೈರಿ ಮತ್ತು ಸಾಕ್ಷಿಗಳ ಹೇಳಿಕೆ ಒಳಗೊಂಡ ಮತ್ತೊಂದು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಸಲ್ಲಿಸಿದ ಲೋಕಾಯುಕ್ತ ಪರ ವಕೀಲರು, 'ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಪ್ರಕರಣವು ಡಿ.24ರಂದು ವಿಚಾರಣೆಗೆ ಬರಲಿದೆ' ಎಂದು ತಿಳಿಸಿದರು. ಈ ವಸ್ತುಸ್ಥಿತಿ ವರದಿ ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆಯ ವೇಳೆಯೂ ತನಿಖೆಯ ವಿವರ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಡಿ.19ಕ್ಕೆ ಮುಂದೂಡಿತು.

ಮುಡಾ ಪ್ರಕರಣದ ಬಗ್ಗೆ ಇಡಿ ಹಾಗೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಮುಡಾದಿಂದ ಪರಿಹಾರ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆಯ ನ್ಯಾಯಸಮ್ಮತವಾಗಿಲ್ಲ ಎಂದಿರುವ ಸ್ನೇಹಮಯಿ ಕೃಷ್ಣ, ಪ್ರಕರಣದ ಕುರಿತು ಕೇಂದ್ರೀಯ ತನಿಖಾ ದಳ(ಸಿಬಿಐ)ದಿಂದ ತನಿಖೆ ನಡೆಸಬೇಕೆಂದು ಅರ್ಜಿ ಸಲ್ಲಿದ್ದರು. ಲೋಕಾಯುಕ್ತ ಪೊಲೀಸರ ಮೇಲೆ ತಮಗೆ ನಂಬಿಕೆ ಇಲ್ಲ ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.

ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಜಮೀನಿನ ಪರಿಹಾರವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇತ್ತೀಚೆಗೆ ಮುಡಾ ಕಚೇರಿ ಸೇರಿದಂತೆ ಬೆಂಗಳೂರು ಮತ್ತು ಮೈಸೂರಿನ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ. ಈ ಆರೋಪವನ್ನು ಸಿಎಂ ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಈ ತಿಂಗಳ ಆರಂಭದಲ್ಲಿ ಲೋಕಾಯುಕ್ತರು ಮುಖ್ಯಮಂತ್ರಿಯನ್ನು ವಿಚಾರಣೆಗೆ ಕರೆದಿದ್ದರು.

Tags:    

Similar News