ಭಯೋತ್ಪಾದಕ ದಾಳಿಗೆ ಸಂಚು | ಯುಎಪಿಎ ಆರೋಪದಿಂದ ಮೂವರು ಆರೋಪಿಗಳು ಖುಲಾಸೆ
ರಾಜ್ಯ ಸರ್ಕಾರ ನೀಡಿದ್ದ ಪ್ರಾಸಿಕ್ಯೂಷನ್ ದೋಷಪೂರಿತವಾಗಿತ್ತು ಎಂದು ಬೊಟ್ಟು ಮಾಡಿರುವ ಹೈಕೋರ್ಟ್ ನ್ಯಾಯಪೀಠ, ಮೂವರು ಅಪರಾಧಿಗಳನ್ನು ಉಗ್ರ ಚಟುವಟಿಕೆ ಆರೋಪದಿಂದ ಕೈ ಬಿಟ್ಟಿದೆ.;
ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಂಚು ರೂಪಿಸಿದ್ದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನಿ ಪ್ರಜೆ ಸೇರಿ ಮೂವರನ್ನು ಯುಎಪಿಎ ಆರೋಪದಿಂದ (ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಖುಲಾಸೆಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ರಾಜ್ಯ ಸರ್ಕಾರ ನೀಡಿದ್ದ ಪ್ರಾಸಿಕ್ಯೂಷನ್ ದೋಷಪೂರಿತವಾಗಿತ್ತು ಎಂದು ಬೊಟ್ಟು ಮಾಡಿರುವ ಹೈಕೋರ್ಟ್ ನ್ಯಾಯಪೀಠ, ಮೂವರು ಅಪರಾಧಿಗಳನ್ನು ಉಗ್ರ ಚಟುವಟಿಕೆ ಆರೋಪದಿಂದ ಕೈ ಬಿಟ್ಟಿದೆ.
ಬೆಂಗಳೂರಿನ ಸೈಯದ್ ಅಬ್ದುಲ್ ರೆಹಮಾನ್, ಕೋಲಾರ ಜಿಲ್ಲೆಯ ಚಿಂತಾಮಣಿಯ ಅಫ್ಸರ್ ಪಾಷಾ ಹಾಗೂ ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ್ ಫಹಾದ್ ಖೋಯಾ ಅವರನ್ನು 2012 ರಲ್ಲಿ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಬಂಧಿಸಲಾಗಿತ್ತು.
2023 ರಲ್ಲಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಅಫ್ಸರ್ ಪಾಷಾ ಮತ್ತು ಮೊಹಮ್ಮದ್ ಫಹಾದ್ ಖೋಯಾ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ.ಎಂ ಖಾಜಿ ಅವರನ್ನು ಒಳಗೊಂಡ ಪೀಠ, ಉಗ್ರ ಚಟುವಟಿಕೆ ಆರೋಪಗಳಿಂದ ಮೂವರು ಅಪರಾಧಿಗಳನ್ನು ಖುಲಾಸೆ ಮಾಡಿದೆ.
ಆದರೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಅಬ್ದುಲ್ ರೆಹಮಾನ್ ಮೇಲಿನ ಅಪರಾಧವನ್ನು ಎತ್ತಿಹಿಡಿದು, ಶಿಕ್ಷೆ ಪ್ರಮಾಣವನ್ನು ಪರಿಷ್ಕರಿಸಿತು.
ಯುಎಪಿಎ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವೇಳೆ ಸ್ವತಂತ್ರ ಪರಿಶೀಲನಾ ಸಮಿತಿ ಒಪ್ಪಿಗೆ ಪಡೆದಿದ್ದ ಬಗ್ಗೆ ಅಂದಿನ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್ ಔರಾದ್ಕರ್ ಸಮರ್ಪಕ ಉತ್ತರ ನೀಡಿಲ್ಲ. ಆದ್ದರಿಂದ ಪ್ರಾಸಿಕ್ಯೂಷನ್ ಆದೇಶ ಅಸಿಂಧು ಎಂದು ಪರಿಗಣಿಸಿ ಆರೋಪಿಗಳನ್ನು ಯುಎಪಿಎ ಆರೋಪಗಳಿಂದ ಖುಲಾಸೆ ಮಾಡಿದೆ.
ಯುಎಪಿಎ ಸೆಕ್ಷನ್ 45(2)ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲು ಪರಿಶೀಲನಾ ಸಮಿತಿಯ ವರದಿ ಪರಿಗಣಿಸುವುದು ಕಡ್ಡಾಯ. ಆರೋಪಿಗಳಲ್ಲಿ ಇಬ್ಬರಾದ ಅಫ್ಸರ್ ಪಾಷಾ ಮತ್ತು ಮೊಹಮ್ಮದ್ ಫಹಾದ್ ಖೋಯಾ ಬೇರೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದಿದ್ದರೆ ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿತು. ಪಾಕಿಸ್ತಾನ ಪ್ರಜೆಯನ್ನು ಗಡಿಪಾರು ಮಾಡಲು ಸೂಚಿಸಿತು.