ಗಂಧದಗುಡಿಯಲ್ಲಿ ಹೇಮಾ ವರದಿಯ ಪ್ರತಿಧ್ವನಿ | ಸೆ.16ಕ್ಕೆ ನಟಿಯರು, ಪ್ರಮುಖರ ಸಭೆ ಕರೆದ ವಾಣಿಜ್ಯ ಮಂಡಳಿ

Update: 2024-09-06 12:28 GMT

ನೆರೆಯ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ ನ್ಯಾಯಮೂರ್ತಿ ಹೇಮಾ ಆಯೋಗದ ವರದಿ ಇದೀಗ ರಾಜ್ಯದ ಸ್ಯಾಂಡಲ್‌ವುಡ್‌ನಲ್ಲೂ ಅಲೆ ಎಬ್ಬಿಸತೊಡಗಿದೆ.

ಹೇಮಾ ಕಮಿಟಿಯ ಮಾದರಿಯಲ್ಲೇ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ಶೋಷಣೆ ಮತ್ತಿತರ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಿತ್ರರಂಗದ ಮಹಿಳೆಯರ ಸುರಕ್ಷತೆ ಕುರಿತ ಸಂಘಟನೆ ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ(ಫೈರ್) ಒತ್ತಾಯಿಸಿದ ಬೆನ್ನಲ್ಲೇ ಇದೀಗ ರಾಜ್ಯ ಮಹಿಳಾ ಆಯೋಗ ಕೂಡ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಕೋರಿದ್ದಾರೆ.

ಮಹಿಳಾ ಆಯೋಗದ ಪತ್ರದ ಬೆನ್ನಲ್ಲೇ ಚಲನಚಿತ್ರ ವಾಣಿಜ್ಯ ಮಂಡಳಿ ಸೆ.16ರಂದು ಚಿತ್ರರಂಗದ ಕಲಾವಿದರು ಮತ್ತು ಚಿತ್ರರಂಗದ ಪ್ರಮುಖರ ಸಭೆ ಕರೆದಿದೆ.

ಸೆ.13ರ ಒಳಗಾಗಿ ಚಿತ್ರರಂಗದ ನಟಿಯರನ್ನು ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಮಹಿಳಾ ಆಯೋಗ ಸ್ಪಷ್ಟ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಶುಕ್ರವಾರ ತುರ್ತು ಸಭೆ ನಡೆಸಿದ ವಾಣಿಜ್ಯ ಮಂಡಳಿ, ಹಬ್ಬದ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ನೀಡಿದ ಗಡುವಿನ ಒಳಗೆ ಸಭೆ ನಡೆಸಲಾಗದು ಎಂದು ತೀರ್ಮಾನಿಸಿ, ಅಂತಿಮವಾಗಿ ಸೆ.16ರಂದು ನಟಿಯರು ಹಾಗೂ ಪ್ರಮುಖರ ಸಭೆ ನಡೆಸಿ ನ್ಯಾ. ಹೇಮಾ ಕಮಿಟಿ ಮಾದರಿಯ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಕುರಿತು ಚರ್ಚಿಸಲು ನಿರ್ಧರಿಸಿದೆ.

ಮಹಿಳಾ ಆಯೋಗ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಸೆ.13ರ ಒಳಗೆ ನಟಿಯರು ಮತ್ತು ಚಿತ್ರರಂಗದ ಪ್ರಮುಖರನ್ನು ಆಹ್ವಾನಿಸಿ ಸಭೆ ನಡೆಸಿ ಸಮಿತಿ ರಚಿಸಲು ಒತ್ತಾಯಿಸಿ ತೀರ್ಮಾನ ಕೈಗೊಳ್ಳಿ ಎಂದು ಮಹಿಳಾ ಆಯೋಗ ಒತ್ತಾಯಿಸಿತ್ತು. ಆದರೆ, ಹಬ್ಬ ಮತ್ತು ಖಾಸಗಿ ಪ್ರಶಸ್ತಿ ಪ್ರಧಾನ ಸಮಾರಂಭಗಳ ಹಿನ್ನೆಲೆಯಲ್ಲಿ ಬಹಳಷ್ಟು ಕಲಾವಿದರು ಈ ಅವಧಿಯಲ್ಲಿ ಲಭ್ಯವಿಲ್ಲ. ಆ ಹಿನ್ನೆಲೆಯಲ್ಲಿ ಸೆ.16ರಂದು ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲು ಇಂದು ನಡೆದ ಆಂತರಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಬಾ ಮಾ ಹರೀಶ್ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅವರು, ಚಿತ್ರರಂಗದ ಪ್ರಮುಖರನ್ನೆಲ್ಲಾ ಕರೆದು ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಜೊತೆಗೆ ನಗರದ ಪ್ರಮುಖ ಪಬ್ಗಳಲ್ಲಿ ನಟ-ನಟಿಯರು ಭಾಗಿಯಾಗಿ ಪಾರ್ಟಿ ಮಾಡುವುದು ವಾಡಿಕೆಯಾಗಿದೆ. ಸರ್ಕಾರ ಮೊದಲು ಅದಕ್ಕೆ ಕಡಿವಾಣ ಹಾಕಬೇಕು. ಆ ಬಗ್ಗೆಯೂ ಅಂದಿನ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಕಲಾವಿದೆಯ ಹಿತ ಕಾಯಲು ವಾಣಿಜ್ಯ ಮಂಡಳಿ ಸದಾ ಬದ್ಧ ಎಂದೂ ಹೇಳಿದ್ದಾರೆ.

Tags:    

Similar News