Heavy Rain| ಬೆಂಗಳೂರಿನಲ್ಲಿ ಸೋಮವಾರ ಭಾರೀ ಮಳೆ; ಇಂದೂ ಮಳೆ ಸಾಧ್ಯತೆ

ಸಂಜೆ ಹೊತ್ತಿನಲ್ಲಿ ಸುರಿದ ಮಳೆಯಿಂದಾಗಿ ಕಚೇರಿಯಿಂದ ಮನೆಗೆ ಹೊರಟವರಿಗೆ ತೊಂದರೆ ಉಂಟಾಯಿತು. ಕೆಲವು ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡು ಟ್ರಾಫಿಕ್‌ ಹೆಚ್ಚಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.;

Update: 2025-05-13 06:26 GMT

ಮಂಗಳವಾರವೂ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಮೇ 12) ಸಂಜೆ ಭಾರೀ ಮಳೆಯಾಗಿದ್ದು, ನಗರದ ಹಲವು ಭಾಗಗಳಲ್ಲಿ ತಂಪಾದ ವಾತಾವರಣ ಉಂಟಾಯಿತು. ಬನಶಂಕರಿ, ಜಯನಗರ, ಬಸವನಗುಡಿ, ಜೆಪಿ ನಗರ, ಕನಕಪುರ ರಸ್ತೆ, ಸಾರಕ್ಕಿ, ವಿಜಯನಗರ, ಚಂದ್ರಾಲೇಔಟ್, ಮಾಗಡಿ ರಸ್ತೆ, ದೀಪಾಂಜಲಿ ನಗರ, ಮೈಸೂರು ರೋಡ್, ನಾಗರಭಾವಿ, ಮೂಡಲಪಾಳ್ಯ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ ಮತ್ತು ರಾಜರಾಜೇಶ್ವರಿ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

ಗಾಳಿ ಸಹಿತ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ಮರಗಳು ಮತ್ತು ಮರದ ಕೊಂಬೆಗಳು ರಸ್ತೆ ಹಾಗೂ ವಾಹನಗಳ ಮೇಲೆ ಬಿದ್ದಿವೆ. ವಿದ್ಯುತ್ ತಂತಿಗಳ ಮೇಲೆ ಕೊಂಬೆಗಳು ಬಿದ್ದಿದ್ದರಿಂದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸಂಜೆ ಕಚೇರಿಯಿಂದ ಮನೆಗೆ ಹೊರಟಿದ್ದವರಿಗೆ ಮಳೆಯಿಂದ ತೊಂದರೆಯಾಯಿತು. ಅಲ್ಲದೆ, ಕೆಲವು ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಇಂದು 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಮಂಗಳವಾರವೂ (ಮೇ 13) ಬೆಂಗಳೂರು ಸೇರಿದಂತೆ ಕರ್ನಾಟಕದ 21 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ

ಮಂಗಳೂರು, ಉಡುಪಿ ಮತ್ತು ಕಾರವಾರ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲೂ ಭಾರೀ ಮಳೆ

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ವಿಜಯಪುರ ಮತ್ತು ಬಾಗಲಕೋಟೆಯಂತಹ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಕಡೆಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಬೆಂಗಳೂರು, ಮೈಸೂರು ಮತ್ತು ಸುತ್ತಮುತ್ತಲಿನ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆಯನ್ನು ನೀಡಲಾಗಿದೆ.

Tags:    

Similar News