ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ; 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಭಾರೀ ಮಳೆಯಿಂದ ಜಲಾಶಯಗಳು ತುಂಬಿ ಹರಿಯುತ್ತಿವೆ. ಕೆ.ಆರ್.ಎಸ್. ಮತ್ತು ಕಬಿನಿ ಜಲಾಶಯಗಳು ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಅಪಾಯ ಮೀರಿದೆ.;
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆ ಸಾಧ್ಯತೆಯಿದ್ದು, 15ಕ್ಕೂ ಹೆಚ್ಚಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಮಲೆನಾಡು ಭಾಗದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಸನ, ಮಂಡ್ಯ, ಮೈಸೂರು, ಹಾವೇರಿ, ಧಾರವಾಡ ಸೇರಿ ಇತರೆ ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಪ್ರಮುಖ ಜಲಾಶಯಗಳು ಭರ್ತಿ
ಭಾರೀ ಮಳೆಯಿಂದ ಜಲಾಶಯಗಳು ತುಂಬಿ ಹರಿಯುತ್ತಿವೆ. ಕೆ.ಆರ್.ಎಸ್. ಮತ್ತು ಕಬಿನಿ ಜಲಾಶಯಗಳು ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಅಪಾಯ ಮೀರಿದೆ. ಅಲ್ಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ.ಮೈಸೂರಿನ ಹೆಚ್.ಡಿ ಕೋಟೆಯ ತಾರಕ ಜಲಾಶಯವು ತುಂಬಿ ಹರಿಯುತ್ತಿದೆ. ಮನೆ, ಜಮೀನುಗಳಿಗೆ ನೀರು ನುಗ್ಗಿದೆ. ಮನೆಯಿಂದ ಜನ ಹೊರಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ
ಮುಂದಿನ ಕೆಲವು ದಿನಗಳವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ತಿಳಿಸಿದೆ. ನಿರಂತರ ಮಳೆಯಿಂದಾಗಿ ನಗರದ ಹಲವಾರು ಭಾಗಗಳಲ್ಲಿ ನೀರು ನಿಲ್ಲುವುದು ಮತ್ತು ವಿದ್ಯುತ್ ಕಡಿತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.