ಭಾರಿ ಮಳೆ ಮುನ್ಸೂಚನೆ | ವರ್ಕ್ ಫ್ರಂ ಹೋಮ್ ನೀಡುವಂತೆ ಕಂಪನಿಗಳಿಗೆ ಪೊಲೀಸರ ಮನವಿ!
ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನ ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಔಟರ್ ರಿಂಗ್ ರಸ್ತೆಯ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅವಕಾಶ ನೀಡುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇರುವ ಕಾರಣ ಔಟರ್ ರಿಂಗ್ ರಸ್ತೆಯ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅವಕಾಶ ನೀಡುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಮಳೆಯಿಂದ ಆಗಬಹುದಾದ ಅವಾಂತರ ತಪ್ಪಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಬುಧವಾರ(ಆ.14) ಸಿಬ್ಬಂದಿಗೆ ವರ್ಕ್ ಫ್ರಮ್ ಹೊಮ್ ನೀಡುವಂತೆ ಸಂಚಾರಿ ಜಂಟಿ ಆಯುಕ್ತ ಎಂಎನ್ ಅನುಚೇತ್ ಮನವಿ ಮಾಡಿದ್ದಾರೆ. ದೀರ್ಘ ವಾರಾಂತ್ಯದ ಜೊತೆಗೆ ನಿರೀಕ್ಷಿತ ಭಾರೀ ಮಳೆ ಸಾಧ್ಯತೆ ಇದೆ. ಹೀಗಾಗಿ ಆ.14ರಂದು ಭಾರೀ ಸಂಚಾರ ದಟ್ಟಣೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“ಮುಂಬರುವ ದೀರ್ಘ ವಾರಾಂತ್ಯದ ಜೊತೆಗೆ ನಿರೀಕ್ಷಿತ ಭಾರೀ ಮಳೆಯಿಂದಾಗಿ ಬುಧವಾರ ಭಾರೀ ಟ್ರಾಫಿಕ್ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಅಡೆತಡೆಗಳನ್ನು ಕಡಿಮೆ ಮಾಡಲು ಅನಗತ್ಯ ವಿಳಂಬಗಳನ್ನು ತಪ್ಪಿಸಲು, ಅಂದು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು (WFH) ಅನುಮತಿಸಿ ಎಂದು ಅನುಚೇತ್ ಮನವಿ ಮಾಡಿದ್ದಾರೆ.
ಹೀಗೆ ಮಾಡುವುದರಿಂದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ರಯಾಣಿಸಬೇಕಾದ ಎಲ್ಲರಿಗೂ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ. ಈ ವಿಷಯದಲ್ಲಿ ನಿಮ್ಮ ಸಹಕಾರವನ್ನು ನಾವು ಪ್ರಶಂಸಿಸುತ್ತೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಿಸುವಲ್ಲಿ ನಿಮ್ಮ ಬೆಂಬಲ ಅಗತ್ಯ ಎಂದು ಪತ್ರ ಮೂಲಕ ಅನುಚೇತ್ ಮನವಿ ಮಾಡಿದ್ದಾರೆ.
ಔಟರ್ ರಿಂಗ್ ರಸ್ತೆಯಲ್ಲಿ ಕೆಲ ದಿನಗಳಿಂದ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಸೋಮವಾರ, ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರಿನಿಂದ ತುಂಬಿದ ರಸ್ತೆಗಳು ಸಂಚಾರಕ್ಕೆ ಅಡ್ಡಿಪಡಿಸಿದವು ಮತ್ತು ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ತಲುಪಲು ದೀರ್ಘ ಕಾಲ ಟ್ರಾಫಿಕ್ನಲ್ಲಿ ಕಾಯಬೇಕಾಯಿತು. ಕೆಲವರು 3ರಿಂದ 4 ಗಂಟೆ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತ್ತು.