ಮುಂಗಾರು ಮಳೆ ಮತ್ತೆ ಚುರುಕು| ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ʻಯೆಲ್ಲೋ ಅಲರ್ಟ್ʼ ಘೋಷಿಸಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆಯಾಗಲಿದೆ.;
ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆದುಕೊಂಡಿದ್ದು, ಜೂನ್ 23ರಿಂದ ಮುಂದಿನ ಮೂರು ದಿನಗಳವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಈ ಬಾರಿ ಕಳೆದ ವರ್ಷದಿಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ʻಯೆಲ್ಲೋ ಅಲರ್ಟ್ʼ ಘೋಷಿಸಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆಯಾಗಲಿದೆ.
ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆ
ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ, ಕೊಪ್ಪಳ, ಧಾರವಾಡ, ವಿಜಯಪುರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
ಬೆಂಗಳೂರಿನಲ್ಲಿ ಭಾನುವಾರ ಸಂಜೆ ಭಾರೀ ಮಳೆಯಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ಬೆಂಗಳೂರು ಸೇರಿದಂತೆ ಶೃಂಗೇರಿ, ಕಳಸ, ಭಾಗಮಂಡಲ, ಗುಬ್ಬಿ, ಕಮ್ಮರಡಿ, ಮಾಣಿ, ಉಪ್ಪಿನಂಗಡಿ, ಮಂಗಳೂರು, ಯಲ್ಲಾಪುರ, ಗೇರುಸೊಪ್ಪ, ಸುಳ್ಯ, ಪುತ್ತೂರು, ಮಂಕಿ, ಬಂಟವಾಳ, ಕುಂದಾಪುರ, ಕ್ಯಾಸಲ್ರಾಕ್, ಸಿದ್ದಾಪುರ, ಮೂಡುಬಿದಿರೆ, ಕೊಪ್ಪ, ಜೋಯ್ಡಾ ಹಾಗೂ ಅಂಕೋಲಾದಲ್ಲಿ ಹೆಚ್ಚಿನ ಮಳೆಯಾಗಿದೆ.
ಕೆಆರ್ ಎಸ್ ಜಲಾಶಯ ಭರ್ತಿಗೆ ಇನ್ನು 4 ಅಡಿ ಮಾತ್ರ ಬಾಕಿ
ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಈ ಮಧ್ಯೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ 124 ಅಡಿಯಿರವ ಕೆಆರ್ ಎಸ್ ಜಲಾಶಯ ಈಗಾಗಲೇ 120 ಅಡಿ ಭರ್ತಿಯಾಗಿದೆ. ಪೂರ್ತಿ ಭರ್ತಿಯಾಗಲು ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ. ಇದು ಕೂಡ ಒಂದು ವಾರದಲ್ಲಿ ಭರ್ತಿಯಾಗುವ ಸಾಧ್ಯತೆ ಇದ್ದು ಈ ಮೂಲಕ ಇದೇ ಮೊದಲ ಬಾರಿಗೆ ಕೆಆರ್ ಎಸ್ ಜಲಾಶಯ ಜೂನ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತಾಗುತ್ತದೆ. ಕೆಆರ್ ಎಸ್ ಜಲಾಶಯದ ನೀರಿನ ಸಂಗ್ರಹ ಮಟ್ಟ 43 ಟಿಎಂಸಿ ಆಗಿದೆ.