ಹಾಸನದಲ್ಲಿ ಸರಣಿ ಹೃದಯಾಘಾತ | 24 ಮೃತರ ಪೈಕಿ 21 ಮನೆಗಳಿಗೆ ಭೇಟಿ; ದಾಖಲೆ ತಪಾಸಣೆ

ಹಾಸನದ ಹೃದಯಾಘಾತಗಳ ಬಗ್ಗೆ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಪ್ರಸಾರ ಮಾಡಲಾಗುತ್ತಿದೆ. ಈ ಕುರಿತು ಯಾರೂ ಆತಂಕ ಪಡಬಾರದು. ಆರೋಗ್ಯಕರ ಜೀವನಶೈಲಿ ರೂಪಿಸಿಕೊಂಡರೆ ಯಾವ ತೊಂದರೆಯೂ ಇಲ್ಲ!;

Update: 2025-07-04 02:30 GMT

ಹಾಸನ ಜಿಲ್ಲೆಯಲ್ಲಿ ಯಾವುದೇ ಕಾಯಿಲೆಯಿಂದ ಮೃತಪಟ್ಟರೂ ಹೃದಯಾಘಾತ ಎಂದು ಬಿಂಬಿಸಲಾಗುತ್ತಿದೆ. ಈ ಕುರಿತು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

ಹಾಸನದಲ್ಲಿ ಘಟಿಸುತ್ತಿರುವ ಸರಣಿ ಹೃದಯಾಘಾತಗಳ ಕುರಿತು ʼದ ಫೆಡರಲ್‌ ಕರ್ನಾಟಕʼ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಹೃದಯಾಘಾತದಿಂದ ಮೃತಪಟ್ಟ 24 ಜನರ ಪೈಕಿ 21 ಮನೆಗೆಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರ ಆರೋಗ್ಯ ವಿವರ ಹಾಗೂ ಮೃತಪಟ್ಟವರ ಆರೋಗ್ಯ ಮತ್ತು ಜೀವನಶೈಲಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎಂದು ತಿಳಿಸಿದರು. 

ಹೃದಯಾಘಾತದ ಬಗ್ಗೆ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಪ್ರಸಾರ ಮಾಡಲಾಗುತ್ತಿದೆ. ಈ ಕುರಿತು ಯಾರೂ ಆತಂಕ ಪಡಬಾರದು. ವ್ಯಾಯಾಮ, ಆರೋಗ್ಯ ತಪಾಸಣೆ, ಉತ್ತಮ ಆಹಾರ ಸೇವಿಸುವುದರಿಂದ ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಬಹುದು. ಅಧಿಕ ಒತ್ತಡ, ಅತಿಯಾಗಿ ನಿದ್ರೆ ಮಾಡದಿರುವುದು, ಧೂಮಪಾನ ಹಾಗೂ ಮಧ್ಯಪಾನಗಳಂತಹ ದುಶ್ಚಟಗಳಿಗೆ ಬಲಿಯಾಗುವುದರಿಂದಲೂ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಹೃದಯಾಘಾತದ ಲಕ್ಷಣಗಳು

ಹೃದಯಾಘಾತವಾಗುವ ಮುನ್ನ ಎದೆ ನೋವು, ಬೆವರುವಿಕೆ, ಭುಜ ನೋವಿನಂತಹ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದೆ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನರು ಈಗ ಆಸ್ಪತ್ರೆಗಳಿಗೆ ತೆರಳಿ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಟೆಮಿ ಯೋಜನೆ 

ಜಿಲ್ಲೆಯ ಹಾಸನ, ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಹೃದಯಾಘಾತ ನಿರ್ವಹಣಾ ವ್ಯವಸ್ಥೆ(STEMI) ಸ್ಟೆಮಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ತಾಲೂಕು ಕೇಂದ್ರಗಳಲ್ಲಿ ನಡೆಸಿದ ಹೃದಯ ಪರೀಕ್ಷೆಗಳ ವರದಿಯನ್ನು (ಇಸಿಜಿ) ಜಯದೇವ ಆಸ್ಪತ್ರೆಯಲ್ಲಿನ ವೈದ್ಯರಿಗೆ ಕಳಿಸಿ ಅವರ ಸಲಹೆ ಮೇರೆಗೆ ಇಲ್ಲಿಯೇ ಚಿಕಿತ್ಸೆ ನೀಡುವ ಯೋಜನೆಯಾಗಿದೆ. ಇದರಿಂದ ರೋಗಿಗಳಿಗೆ ʼಗೋಲ್ಡನ್‌ ಅವರ್‌ʼನಲ್ಲಿ  ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ನಂತರ ಅಗತ್ಯವಿದ್ದರೆ ಜಯದೇವ ಆಸ್ಪತ್ರೆಗೆ ಕಳಿಸಬಹುದು. ಜಿಲ್ಲೆಯ ಎಂಟು ತಾಲೂಕಗಳಲ್ಲಿಯೂ ಹೃದಯಾಘಾತಕ್ಕೆ ಸಂಬಂಧಿಸಿದ ಅಗತ್ಯ ಔಷಧಿ ದಾಸ್ತಾನು ಇದ್ದು, ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿಯೂ ಇಸಿಜಿ ಸೌಲಭ್ಯವಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಕೆ 

ಜಿಲ್ಲೆಯಲ್ಲಿ ನಡೆಯುತ್ತಿರುವ ಹೃದಯಾಘಾತಕ್ಕೆ ಸಂಬಂಧಿಸಿದಂತೆ 24 ಮೃತರ ಕುಟುಂಬಗಳ ಪೈಕಿ 21 ಮನೆಗಳಿಗೆ ಭೇಟಿ ನೀಡಿ ಮೃತರ ಆರೋಗ್ಯ ವಿವರಗಳನ್ನು ಕಲೆ ಹಾಕಲಾಗಿದೆ. ಇತ್ತೀಚೆಗೆ ಮೃತಪಟ್ಟ ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬದವರ ಮನವೊಲಿಸಿದರೂ ಅವರು ಒಪ್ಪಿಕೊಳ್ಳಲಿಲ್ಲ. ಇದರಿಂದ ಅವರು ಯಾವ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಯಲು ಸಾಧ್ಯವಿಲ್ಲ. ಇತ್ತೀಚೆಗೆ ಯಾರೇ ಮೃಪಟ್ಟರು ಹೃದಯಾಘಾತ ಎಂದು ಬಿಂಬಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯೂ ಜಿಲ್ಲೆಯಲ್ಲಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು. 

ಜಾಗೃತಿ ಜಾಥಾ

ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಈಗಾಗಲೇ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎನ್‌ಜಿಒಗಳ ಸಹಕಾರದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮ್ಯಾರಥಾನ್‌ ಹಾಗೂ ಜಾಥಾ ಹಮ್ಮಿಕೊಳ್ಳಲಾಗುವುದು. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

 ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್‌ ಕುಮಾರ್‌ ಅವರ ಸವಿವರ ಸಂದರ್ಶನ ಇಲ್ಲಿದೆ.

Full View

Tags:    

Similar News