ರಾಜ್ಯದಲ್ಲಿ ಯುವಜನರ ಹಠಾತ್ ಹೃದಯಾಘಾತ ಹೆಚ್ಚಳ: ಕಾರಣಗಳನ್ನು ಬಿಚ್ಚಿಟ್ಟ ಸಚಿವ ದಿನೇಶ್ ಗುಂಡೂರಾವ್

ಮೂರು ವರ್ಷದಲ್ಲಿ ಜಯದೇವದಲ್ಲಿ 61,299 ಜನ ದಾಖಲಾಗಿದ್ದು, ಇವರಲ್ಲಿ 45 ವರ್ಷದೊಳಗಿನ 472 ಜನ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯನ್ನ ಆರೋಗ್ಯ ಸಚಿವರು ಸದನಕ್ಕೆ ನೀಡಿದ್ದಾರೆ.;

Update: 2025-08-18 08:47 GMT

ದಿನೇಶ್‌ ಗುಂಡೂರಾವ್‌ 

ರಾಜ್ಯದಲ್ಲಿ, ವಿಶೇಷವಾಗಿ 45 ವರ್ಷದೊಳಗಿನ ಯುವಜನರಲ್ಲಿ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಸೋಮವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಳೆದ ಮೂರು ವರ್ಷಗಳ ಆತಂಕಕಾರಿ ಅಂಕಿ-ಅಂಶಗಳನ್ನು ಸದನದ ಮುಂದಿಟ್ಟರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಈ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಯತ್ನಿಸಿದರು.

ಸದನದಲ್ಲಿ ಶಾಸಕ ಡಾ. ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಳೆದ ಮೂರು ವರ್ಷಗಳಲ್ಲಿ 45 ವರ್ಷದೊಳಗಿನ 1,004 ಜನರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ 61,299 ಮಂದಿ ಚಿಕಿತ್ಸೆಗೆ ದಾಖಲಾಗಿದ್ದು, ಅವರಲ್ಲಿ 45 ವರ್ಷದೊಳಗಿನ 472 ಮಂದಿ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಅವರು ಬಹಿರಂಗಪಡಿಸಿದರು. 2023-24ನೇ ಸಾಲಿನಲ್ಲಿ 229 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರು ಸೇರಿಸಿದರು.

ಅತಿಯಾದ ವಾಯುಮಾಲಿನ್ಯ, ಒತ್ತಡದ ಜೀವನಶೈಲಿ, ಮಾನಸಿಕ ಒತ್ತಡ, ವ್ಯಾಯಾಮದ ಕೊರತೆ, ಬೊಜ್ಜುತನ, ಅಧಿಕ ರಕ್ತದೊತ್ತಡ ಮತ್ತು ಆಹಾರದಲ್ಲಿನ ಕೀಟನಾಶಕಗಳ (ಪೆಸ್ಟಿಸೈಡ್) ಬಳಕೆ ಈ ದುರಂತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಸಚಿವರು ವಿವರಿಸಿದರು. ಅಧಿಕ ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ (ಶುಗರ್) ಇರುವವರಿಗೆ ಶಾಶ್ವತವಾಗಿ ಔಷಧಿಗಳನ್ನು ಒದಗಿಸಿ ಅವುಗಳನ್ನು ನಿಯಂತ್ರಿಸಿದರೆ, ಇತರೆ ಕಾಯಿಲೆಗಳನ್ನೂ ನಿಯಂತ್ರಣದಲ್ಲಿಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಶಾಸಕ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಯುವಕರಲ್ಲಿನ ಹೃದಯಾಘಾತ ಪ್ರಕರಣಗಳ ಬಗ್ಗೆ ಸರ್ಕಾರ ಕೂಲಂಕಷವಾಗಿ ಅಧ್ಯಯನ ನಡೆಸಿದೆ ಎಂದರು. ಇತ್ತೀಚಿನ ತಿಂಗಳುಗಳಲ್ಲಿ ಹೃದಯಾಘಾತದಿಂದ ಸಾವುಗಳು ಹೆಚ್ಚಾಗುತ್ತಿವೆ ಎಂಬುದು ಸರಿಯಾದ ಮಾಹಿತಿಯಲ್ಲ. ಕಳೆದ ಐದಾರು ವರ್ಷಗಳಿಂದ ಇರುವ ಪ್ರಮಾಣದಲ್ಲೇ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಜನರು ತಪ್ಪು ಗ್ರಹಿಕೆಯಿಂದ ಭಯಭೀತರಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Tags:    

Similar News