Health Alert | ಹೋಳಿಗೆಗೆ ತೊಗರಿಬೇಳೆ ಖರೀದಿಸುವ ಮುನ್ನ ಇರಲಿ ಎಚ್ಚರ: ಆರೋಗ್ಯ ಇಲಾಖೆ ಹೇಳಿದ್ದೇನು?

ಯುಗಾದಿ ಹಬ್ಬದ ಹೋಳಿಗೆಗಾಗಿ ತೊಗರಿ ಬೇಳೆ ಖರೀದಿಸುವ ಮುನ್ನ ನೀವು ಈ ಸುದ್ದಿ ಓದಲೇಬೇಕು. ಆರೋಗ್ಯ ಇಲಾಖೆ ನೀಡಿರುವ ಎಚ್ಚರಿಕೆಯನ್ನು ಗಮನಿಸಿ..;

Update: 2025-03-16 05:21 GMT

ಯುಗಾದಿ ಸಮೀಪಿಸುತ್ತಿದೆ. ಹಬ್ಬದ ಹೋಳಿಗೆಗಾಗಿ ತೊಗರಿ ಬೇಳೆ ಖರೀದಿಯ ಮುನ್ನ ತುಸು ಯೋಚಿಸಬೇಕಾದ ಸಂಗತಿ ಇದೀಗ ಹೊರಬಿದ್ದಿದೆ. ನೀವು ಖರೀದಿಸುವ ತೊಗರಿ ಬೇಳೆಯಲ್ಲಿ ಕ್ಯಾನ್ಸರ್ಕಾರಕ ರಾಸಾಯನಿಕ ಬೆರೆತಿರಬಹುದು ಗಮನಿಸಿ ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

ಹಾಗಾಗಿ ಯುಗಾದಿ ಖರೀದಿಯ ಮುನ್ನ ಈ ಸುದ್ದಿಯನ್ನು ಓದುವುದು ಕ್ಷೇಮ; ನಿಮಗೂ, ನಿಮ್ಮ ಮನೆಮಂದಿಗೂ..

ತೊಗರಿ ಬೇಳೆಯೊಂದಿಗೆ ರಾಸಾಯನಿಕ ಬಣ್ಣ ಹಾಕಿರುವ ಕೇಸರಿ ಬೇಳೆಯನ್ನು ಮಿಶ್ರಣ ಮಾಡಿ ಗ್ರಾಹಕರನ್ನು ಯಾಮಾರಿಸಲಾಗುತ್ತಿದೆ. ಈ ಕೇಸರಿ ಬೇಳೆಗೆ ಬಳಸುವ ರಾಸಾಯನಿಕ ಬಣ್ಣ ಕ್ಯಾನ್ಸರ್ಕಾರಕ ಎಂದು ಆಹಾರ ಇಲಾಖೆ ಹೇಳಿದೆ.

ಈ ಕೇಸರಿ ಬೇಳೆ ಮಿಶ್ರಿತ ತೊಗರಿ ಬೇಳೆಯನ್ನು ಆಹಾರದಲ್ಲಿ ಬಳಸುವುದರಿಂದ ಕ್ಯಾನ್ಸರ್ ಮಾತ್ರವಲ್ಲದೆ, ಪಾರ್ಶ್ವವಾಯು, ಅಂಗವೈಕಲ್ಯದಂತಹ ಗಂಭೀರ ನರರೋಗಗಳೂ ಬರಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ತೊಗರಿ ಬೇಳೆ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದೆ.

ಕೇಸರಿ ಬೇಳೆ ಬಣ್ಣ, ಆಕಾರದಲ್ಲಿ ತೊಗರಿ ಬೇಳೆಯನ್ನೇ ಹೋಲುತ್ತದೆ. ಕೇಸರಿ ಬೇಳೆ ಒಂದು ಕಳೆಯ ಬೆಳೆಯಾಗಿದ್ದು, ಕಾಡಿನಲ್ಲಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶದಲ್ಲಿ ಕೇಸರಿ ಬೇಳೆ ಬೆಳೆಯಲಾಗುತ್ತದೆ. ಕೇಸರಿ ಬೇಳೆ ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ಹಾಗಾಗಿ ಆ ಬೇಳೆಯನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಲೆಥರಿಸಂ ಕಾಯಿಲೆಗೆ ತುತ್ತಾಗುತ್ತಾನೆ. ಎರಡೂ ಕಾಲುಗಳ ನರ ಹಾಗೂ ಮಾಂಸಖಂಡಗಳು ಸರಿಪಡಿಸಲಾಗದ ನ್ಯೂನತೆಗೆ ಒಳಗಾಗುತ್ತವೆ. ಶಾಶ್ವತ ಅಂಗವೈಕಲ್ಯ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಅದರ ಪರಿಣಾಮ ಹೆಚ್ಚಾದಾಗ ಪಾರ್ಶ್ವವಾಯು ಸಹ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Tags:    

Similar News