H D Kumaraswamy | ಕಾರಿಗಾಗಿ ಎಚ್‌ಡಿಕೆ ಕಿರಿಕಿರಿ; ಕಾರು ಕೊಟ್ಟು ತಿರುಗೇಟು ನೀಡಿದ ಕಾಂಗ್ರೆಸ್
ಹಳೆಯ ಇನ್ನೊವಾ ಕ್ರಿಸ್ಟಾ ಕಾರು ಒಲ್ಲದ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಹೊಸ ಇನ್ನೋವಾ ಹೈಕ್ರಾಸ್ ಕಾರು ಖರೀದಿಸಿ ಕೊಡಲು ಹೋದರೆ ಧನುರ್ಮಾಸದ ಕಾರಣ ಹೇಳಿ ಮುಂದೂಡಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.;
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ಕಾರು ಗಲಾಟೆ ತಾರಕಕ್ಕೇರಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ತಮಗೆ ವಾಹನ ನೀಡದೇ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಮಾಜಿ ಸಂಸದೆ ಸುಮಲತಾ ಅಂಬರೀಷ್ ಉಪಯೋಗಿಸಿದ್ದರೆಂಬ ಕಾರಣಕ್ಕೆ ಇನ್ನೋವಾ ಕ್ರಿಸ್ಟಾ ಕಾರು ಬಳಸಲು ಒಪ್ಪಲಿಲ್ಲ. ಈಗ ಅವರ ಆಪೇಕ್ಷೆಯಂತೆ ಹೊಸ ಇನ್ನೋವಾ ಹೈಕ್ರಾಸ್ ಕಾರು ಖರೀದಿಸಿದ್ದರೂ ಧನುರ್ಮಾಸದ ಕಾರಣ ಹೇಳಿ ಮುಂದೂಡಿದ್ದಾರೆ. ಸುಖಾಸುಮ್ಮನೆ ಸರ್ಕಾರದ ಮೇಲೆ ವೃಥಾರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.
ಏನಿದು ಕಾರು ಗಲಾಟೆ?
ಮಂಡ್ಯದಲ್ಲಿ ದಿಶಾ ಸಭೆಗಾಗಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಅವರಿಗೆ ರಾಜ್ಯ ಸರ್ಕಾರ ವಾಹನ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಸ್ವತಃ ಕುಮಾರಸ್ವಾಮಿ ಅವರೇ ಸರ್ಕಾರದ ವಿರುದ್ಧ ಹರಿಹಾಯ್ದು, ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ದೂರಿದ್ದರು.
ರಾಜ್ಯ ಸರ್ಕಾರ ವಾಹನ ನೀಡದ ಕಾರಣ ಕೇಂದ್ರ ಸರ್ಕಾರದ ವಾಹನದಲ್ಲೇ ಮಂಡ್ಯ, ಮೈಸೂರು ಜಿಲ್ಲೆ ಪ್ರವಾಸ ಮಾಡಿದ್ದೇನೆ. ಸಚಿವರಾಗಿ ಆರು ತಿಂಗಳು ಕಳೆದರೂ ರಾಜ್ಯ ಸರ್ಕಾರ ಕಾರು ಕೊಟ್ಟಿಲ್ಲ. ಬೃಹತ್ ಕೈಗಾರಿಕಾ ಇಲಾಖೆಯ ವಾಹನದಲ್ಲಿ ಓಡಾಡುತ್ತಿದ್ದೇನೆ ಎಂದು ಹೇಳಿದ್ದರು.
ಕೇಂದ್ರ ಸಚಿವರ ಈ ಆರೋಪ ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ಸಣ್ಣ ಪುಟ್ಟ ವಿಚಾರಗಳನ್ನು ಬೇಕೆಂತಲೇ ದೊಡ್ಡದು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಚಲುವರಾಯಸ್ವಾಮಿ ಹೇಳಿದ್ದೇನು?
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಹೊಸ ಸಂಸದರಿಗೆ ಹಳೆಯ ಕಾರು ನೀಡುವುದು ವಾಡಿಕೆ. ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಉಪಯೋಗಿಸುತ್ತಿದ್ದ ಕಾರು ಬಳಸುವುದಿಲ್ಲ ಎಂದು ನಿರಾಕರಿಸಿದ್ದು ಏಕೆ ಎಂದು ಪ್ರಶ್ನಿಸಿದ್ದರು.
ಈ ಹಿಂದೆ ನನಗೂ ಕೂಡ ಅಂಬರೀಶ್ ಅವರು ಬಳಸುತ್ತಿದ್ದ ಕಾರನ್ನೇ ನೀಡಲಾಗಿತ್ತು. ಸಚಿವರಾದ ಮೇಲೂ 6 ತಿಂಗಳು ಹಳೆಯ ಕಾರನ್ನೇ ಬಳಸಿದ್ದೇನೆ. ವಾಹನ ನೀಡಿಲ್ಲ ಎಂಬ ನೆಪದಲ್ಲಿ ಸಣ್ಣತನದ ಹೇಳಿಕೆ, ಆರೋಪ ಮಾಡುವುದು ಕೇಂದ್ರ ಸಚಿವರ ಘನತೆಗೆ ತರವಲ್ಲ ಎಂದು ಕಿಡಿಕಾರಿದ್ದರು.
ಎಚ್‌ಡಿಕೆ ವಿರುದ್ಧ ರಮೇಶಬಾಬು ಕಿಡಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಿಗದಿತ ಸಮಯದಲ್ಲಿ ಹೊಸ ಕಾರು ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರ ಸಂಪುಟ ದರ್ಜೆಯ ಸಚಿವರಾಗಿ ಆರು ತಿಂಗಳು ಕಳೆದರೂ ಇಲ್ಲಿಯವರೆಗೆ ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ ಬಾಬು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಣ್ಣ ಸಣ್ಣ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೊಸ ಕಾರು ಪಡೆಯಲು ಧನುರ್ಮಾಸ ಅಡ್ಡಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಅಪೇಕ್ಷೆಯಂತೆ ರಾಜ್ಯ ಸರ್ಕಾರ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ವಾಹನ ಹಂಚಿಕೆ ಮಾಡಿದೆ. ಹೊಸ ಕಾರು ಪಡೆಯುವಂತೆ ಮಂಡ್ಯ ಜಿಲ್ಲಾಧಿಕಾರಿ ಕೋರಿದ್ದು, ಧನುರ್ಮಾಸದ ಕಾರಣ ನೀಡಿ ಸಂಕ್ರಾಂತಿಯ ನಂತರ ಪಡೆಯುವುದಾಗಿ ಸ್ವತಃ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಹೀಗಿದ್ದರೂ ಹೋದಲ್ಲಿ ಬಂದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ದೂರುತ್ತಿರುವುದು ಎಷ್ಟು ಸರಿ ಎಂದು ರಮೇಶಬಾಬು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2024 ನ.4 ರಂದು ಹೊಸ ವಾಹನ ಖರೀದಿಗೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯದ 6 ಸಂಸದರಿಗೆ ಆರ್ಥಿಕ ಮಿತಿಯೊಳಗೆ ವಾಹನ ಖರೀದಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿತ್ತು. ಅದರಂತೆ ವಾಹನ ಖರೀದಿ ಮಾಡಿ ಮಾಹಿತಿ ನೀಡಲಾಗಿದೆ.
KA 59 G 0099 ಸಂಖ್ಯೆಯ ಹೊಸ ಇನ್ನೋವಾ ಹೈಕ್ರಾಸ್ ಕಾರು ಹಂಚಿಕೆ ಮಾಡಲಾಗಿದೆ. ಜೊತೆಗೆ ಕೆಲವು ಸಿಬ್ಬಂದಿಯನ್ನು ಎರವಲು ಸೇವೆಯ ಮೇಲೆ ಪಡೆದಿದ್ದಾರೆ. ಆದರೆ, ಇಂತಹ ಸಣ್ಣ ವಿಚಾರ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ಅವರನ್ನು ಟೀಕಿಸುತ್ತಿರುವ ಕುಮಾರಸ್ವಾಮಿ ಅವರು ತಮ್ಮ ಹೆಸರಿಗೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹತಾಶೆ ಬಿಟ್ಟು ಅಭಿವೃದ್ಧಿಗೆ ಮುಂದಾಗಲಿ
ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶರಾಗಿ ಪದೇ ಪದೇ ವ್ಯಕ್ತಿಗತ ಟೀಕೆ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಈ ರೀತಿ ವರ್ತಿಸುವುದು ಶೋಭೆ ತರುವುದಿಲ್ಲ. ಕೇಂದ್ರ ಸಚಿವರಾಗಿ ದೊರೆತಿರುವ ಅವಕಾಶ ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ. ಪ್ರಾಮುಖ್ಯತೆ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಗುವ ಬದಲು, ಆರೋಗ್ಯಕರ ಚರ್ಚೆಗಳಿಗೆ ಒತ್ತು ನೀಡಲಿ ಎಂದು ರಮೇಶಬಾಬು ಕುಟುಕಿದ್ದಾರೆ.