ಪ್ರಜ್ವಲ್‌ನಿಂದ ತಪ್ಪಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ: ಎಚ್‌ಡಿಕೆ
ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಹೊರಟಿದ್ದೀರಲ್ಲ ನೀವು. ಇದ್ಯಾವ ನ್ಯಾಯ? ಸಿದ್ದರಾಮಯ್ಯನವರೇ.. ನಮ್ಮ ಪಕ್ಷದಲ್ಲಿದ್ದಾಗ ನಮ್ಮ ತಾಯಿ ಕೈಯ್ಯಿಂದ ಊಟ ತಿಂದು ಬೆಳೆದವರು ನೀವು. ಆ ತಾಯಿಯ ನೋವು ಏನು ಎನ್ನುವುದು ಗೊತ್ತಿದೆಯಾ ನಿಮಗೆ. ನಿಮಗೆ ಪ್ರಾಮಾಣಿಕತೆ ಎನ್ನುವುದು ಇದ್ದರೆ ಈ ಪ್ರಕರಣದ ತನಿಖೆ ಎಲ್ಲಿಂದ ನಡೆಯಬೇಕು ಎನ್ನುವುದನ್ನು ಗಮನಿಸಿ ಎಂದು ಕುಮಾರಸ್ವಾಮಿ ಭಾವುಕರಾಗಿ ಹೇಳಿದ್ದಾರೆ.
"ಮಾನಸಿಕ ಯಾತನೆ ಅನುಭವಿಸುತ್ತಿರುವ ಮಹಿಳೆಯರಲ್ಲಿ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ಹೇಳಲು ಬಯಸುತ್ತೇನೆ. ದಯಮಾಡಿ ಕುಗ್ಗಬೇಡಿ. ನಮ್ಮ ಕುಟುಂಬದಿಂದ, ಪ್ರಜ್ವಲ್ ನಿಂದ ತಪ್ಪಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮದ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಂಜಬೇಡಿ. ನಿಮ್ಮ ಜತೆ ನಾನಿದ್ದೇನೆ, ನಿಮ್ಮ ಪರ ಹೋರಾಡುತ್ತೇನೆ ಎಂದರು. ಪತ್ರಿಕೆಯೊಂದರ ವರದಿ ನೋಡಿ ಮನಸ್ಸಿಗೆ ಬಹಳ ನೋವಾಯಿತು. ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯ ಬಗ್ಗೆ ಬರೆದಿರುವ ವರದಿ ಅದಾಗಿತ್ತು. ದೀರ್ಘ ರಜೆ ತೆಗೆದುಕೊಳ್ಳುವುದಕ್ಕೆ ಮಹಿಳಾ ಸಿಬ್ಬಂದಿ ಹಿಂಜರಿಯುತ್ತಿದ್ದಾರೆ ಎನ್ನುವ ಆ ವರದಿ ನನ್ನ ಮನಸ್ಸಿಗೆ ಘಾಸಿ ಉಂಟು ಮಾಡಿದೆ ಎಂದರು.
ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ನಾಶ ಮಾಡುವುದಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿರುವ ʼಸೀಡಿ ಶಿವುʼ ಸಂಚು ರೂಪಿಸಿರುವುದು ದೃಢಪಟ್ಟಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನೇರ ಆರೋಪ ಮಾಡಿದರು.
ಇಡೀ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಯಿತಲ್ಲ, ಮೊಬೈಲ್ ಸಂಭಾಷಣೆಯಲ್ಲಿ ಎಲ್ಲವೂ ಬಯಲಾಗಿದೆ ಡಿ.ಕೆ.ಶಿವಕುಮಾರ್, ಎಲ್.ಆರ್.ಶಿವರಾಮೇಗೌಡ, ದೇವರಾಜೇಗೌಡ ನಡಿವಿನ ಸಂಭಾಷಣೆ ಆಡಿಯೋ ಲೀಕ್ ಆಗಿದೆ. ಸಂಚು ರೂಪಿಸಿರುವ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಮೇಲೆ ಕೂಡಲೇ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಿ ಎಂದು ಗೃಹ ಡಾ.ಜಿ.ಪರಮೇಶ್ವರ್ ಅವರನ್ನು ಅವರು ಒತ್ತಾಯ ಮಾಡಿದರು
"ಸೀಡಿ ಶಿವು ಅವರು ಪೆನ್ʼಡ್ರೈವುಗಳನ್ನು ಸೃಷ್ಟಿ ಮಾಡುವುದರಲ್ಲಿ ಎಕ್ಸ್ʼಪರ್ಟ್. ನಾನು ಬರೀ ಸಿನಿಮಾ ಹಂಚಿಕೆದಾರ. ಆದರೆ ಇವರ ಹಂಚಿಕೆಯೇ ಬೇರೆ. ಮೊದಲಿನಿಂದಲೂ ಅವರು ಅದನ್ನೇ ಮಾಡಿಕೊಂಡು ಬಂದರು. ಅವರ ಪಕ್ಷದ ಶಾಸಕನೊಬ್ಬ, ಪೆನ್ ಡ್ರೈವುಗಳ ಹಿಂದೆ ದೊಡ್ಡ ತಿಮಿಂಗಿಲ ಇದೆ ಎಂದು ಹೇಳಿದ್ದರಲ್ಲವೇ? ನಾನೆಲ್ಲಿ ಹೇಳಿದ್ದೆ ಪರಮೇಶ್ವರ್ ಅವರೇ. SIT ತನಿಖೆ ಪಾರದರ್ಶಕವಾಗಿದ್ದರೆ ಇವರಿಬ್ಬರ ಮೇಲೆ ಕೇಸ್ ಹಾಕಲಿ," ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ತಿಹಾರ್ ಜೈಲು ಸೇರಿದಾಗ ರಾಜಕೀಯ ಮಾಡಿಲ್ಲ
ಆವತ್ತು ಈ ʼಸೀಡಿ ಶಿವುʼ ತಿಹಾರ್ ಜೈಲಿನಲ್ಲಿ ಇದ್ದರು. ನಾನು ಅಂದು ರಾಜಕೀಯ ಮಾಡಲಿಲ್ಲ. ಅವರ ಕುಟುಂಬದ ಜತೆ ನಿಂತೆ ನಾನು. ಅವರ ಹೆತ್ತ ತಾಯಿಯನ್ನು ಭೇಟಿ ಮಾಡಿ ಧೈರ್ಯ ಹೇಳಿದೆ. ತಿಹಾರ್ ಜೈಲಿಗೂ ಹೋಗಿ ಈ ವ್ಯಕ್ತಿಯನ್ನು ಭೇಟಿಯಾಗಿ ಧೈರ್ಯ ಹೇಳಿ ಬಂದೆ. ಅದಾದ ಎರಡು ಮೂರು ದಿನಗಳಲ್ಲಿ ಇವರು ಜೈಲಿನಿಂದ ಬಿಡುಗಡೆಯಾದರು. ಕೃತಜ್ಞತೆ ಎನ್ನುವುದು ಇರಲಿ. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿ ತಿಹಾರ್ ಜೈಲಿಗೆ ಹೋಗಿದ್ದರಾ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ದೇವರಾಜೇಗೌಡ ಜತೆ ಮಾತನಾಡಿರುವ ಮಾಜಿ ಶಾಸಕ ಹೇಳುತ್ತಾನೆ; ಅವರ ಇಡೀ ಕುಟುಂಬವನ್ನು ಬಲಿ ಹಾಕಲು ಸರಕಾರ ತೀರ್ಮಾನ ಮಾಡಿಬಿಟ್ಟಿದೆ ಎಂದು. ಅಲ್ಲಿಗೆ ಸರಕಾರದ ಉದ್ದೇಶ ಏನು? ಈ ಪೆನ್ ಡ್ರೈವುಗಳ ಹಂಚಿಕೆಯಲ್ಲಿ ಯಾರ ಪಾತ್ರವಿದೆ ಎನ್ನುವುದು ಗೊತ್ತಾಯಿತಲ್ಲವೇ? ನರೇಂದ್ರ ಮೋದಿ ಹಾಗೂ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ನಾಲ್ವರು ಸಚಿವರ ಸಮಿತಿ ರಚನೆ ಮಾಡಿದ್ದಾರೆ ಎಂದು ಸ್ವತಃ ದೇವರಾಜೇಗೌಡ ಹೇಳಿದ್ದಾರೆ. ನಮ್ಮ ಕುಟುಂಬವನ್ನು ಮುಗಿಸುವುದಕ್ಕೆ ಇಂತಹ 10 ಮಿನಿ ಕ್ಯಾಬಿನೆಟ್ʼಗಳನ್ನು ರಚನೆ ಮಾಡಿಕೊಳ್ಳಲಿ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಗುಡುಗಿದರು.
ಭಾನುವಾರ ಈ ಸೀಡಿ ಶಿವು ಅವರು, ಅವರ ಚೇಲಾ ಮಾತನಾಡಿರುವ ಮೊಬೈಲ್ ಸಂಭಾಷಣೆಯ ಆಡಿಯೋ ಹೊರಗೆ ಬಂದು ವೈರಲ್ ಆಗಿದೆ. ಅದು ಬಂದ ಮೇಲೆ ಕಾಂಗ್ರೆಸ್ ನಾಯಕರ ಉಸಿರೇ ಇಲ್ಲ. ದಿನವೂ ಬಂದು ಪ್ರೆಸ್ʼಮೀಟ್ ಮಾಡಿದ್ದೇ ಮಾಡಿದ್ದು. ಈಗ ಯಾಕೆ ಯಾರೂ ಬಂದು ಮಾತನಾಡುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಾ?
ಆಡಿಯೋದಲ್ಲಿ ನಮ್ಮ ಕುಟುಂಬವನ್ನು ಬಲಿ ಹಾಕುವುದಕ್ಕೆ ತೀರ್ಮಾನ ಮಾಡಿದಲಾಗಿದೆ ಎನ್ನುತ್ತಾರೆ ನಿಮ್ಮ ಮಾಜಿ ಶಾಸಕ. ಅದಕ್ಕೆ ಉದ್ದೇಶ ಈಡೇರಿಕೆಗೆ ಅಮಾಯಕ ಹೆಣ್ಣುಮಕ್ಕಳ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಹಂಚಿದ್ದೀರಿ. ರಾಜಕೀಯ ಸ್ವಾರ್ಥಕ್ಕಾಗಿ ಎಂಥಾ ಕೀಳು ಮಟ್ಟಕ್ಕಾದರೂ ಇಳಿಯುತ್ತೀರಿ ನೀವು. ರಾತ್ರಿ ನಿದ್ದೆ ಬರುತ್ತದಾ ನಿಮಗೆ..? ಶಿವಕುಮಾರ್ ಅವರೇ.. ಇಂತಹ ರಾಜಕೀಯ ಬೇಕಾ ಡಿ.ಕೆ.ಶಿವಕುಮಾರ್ ಅವರೇ.. ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಾ? ಎಂದು ಪ್ರಶ್ನಿಸಿದರು.
ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಹೊರಟಿದ್ದೀರಲ್ಲ ನೀವು. ಇದ್ಯಾವ ನ್ಯಾಯ? ಸಿದ್ದರಾಮಯ್ಯನವರೇ.. ನಮ್ಮ ಪಕ್ಷದಲ್ಲಿದ್ದಾಗ ನಮ್ಮ ತಾಯಿ ಕೈಯ್ಯಿಂದ ಊಟ ತಿಂದು ಬೆಳೆದವರು ನೀವು. ಆ ತಾಯಿಯ ನೋವು ಏನು ಎನ್ನುವುದು ಗೊತ್ತಿದೆಯಾ ನಿಮಗೆ. ನಿಮಗೆ ಪ್ರಾಮಾಣಿಕತೆ ಎನ್ನುವುದು ಇದ್ದರೆ ಈ ಪ್ರಕರಣದ ತನಿಖೆ ಎಲ್ಲಿಂದ ನಡೆಯಬೇಕು ಎನ್ನುವುದನ್ನು ಗಮನಿಸಿ ಎಂದರು.
ಆಡಿಯೋ ರಿಲೀಸ್ ಆದ ಮೇಲೆ ಡಿ.ಕೆ.ಶಿವಕುಮಾರ್ ಅವರ ಸದ್ದೇ ಇಲ್ಲ. ಅವರ ಏನು ಎನ್ನುವುದು ಸ್ಪಷ್ಟವಾಯಿತು. ಸಂವಿಧಾನಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ ಈ ಉಪ ಮುಖ್ಯಮಂತ್ರಿಗೆ ಜವಾಬ್ದಾರಿ ಎನ್ನುವುದ್ದಿದ್ದರೆ ಪೆನ್ ಡ್ರೈವ್ ಕೈಗೆ ಸಿಕ್ಕಿದಾಗಲೇ ಕ್ರಮಕ್ಕೆ ಸೂಚನೆ ನೀಡಬೇಕಿತ್ತು. ಅದು ಬಿಟ್ಟು ಅದನ್ನು ಚುನಾವಣೆ ಸರಕು ಮಾಡಿಕೊಂಡರು. ಲೋಕಸಭೆ ಚುನಾವಣೆ ಬಂದಾಗ ಅದರ ಉಪಯೋಗ ಪಡೆಯಲು ಮುಂದಾದರು. ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಲು ಹೇಳಿದರು ಅಂತ ಹೇಳಿ ಎಂದು ಹೇಳಿಸಿದರು. ನಿಮ್ಮ ಮುಖವಾಡ ಏನು ಎನ್ನುವುದು ಕಳಚಿ ಬಿತ್ತಲ್ಲಾ ʼಸೀಡಿ ಶಿವು..ʼ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಅವರು ಹರಿಹಾಯ್ದರು.