ಪ್ರಜ್ವಲ್‌ ಎಲ್ಲಿದ್ದೀಯಪ್ಪಾ.. ಬೇಗ ಬಾರಪ್ಪಾ: ಚಿಕ್ಕಪ್ಪ ಎಚ್‌ಡಿಕೆ ಮನವಿ

Update: 2024-05-20 14:11 GMT

"ಪ್ರಜ್ವಲ್‌, ನೀನು ಎಲ್ಲೇ ಇದ್ದರೂ ಕೂಡಲೇ ವಾಪಸ್‌ ಬಾ.. ತನಿಖಾ ತಂಡಕ್ಕೆ ಸಹಕಾರ ನೀಡು...!"

ಹೀಗೆಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರಜ್ವಲ್‌ ಚಿಕ್ಕಪ್ಪ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಧ್ಯಮದ ಮೂಲಕ ಪ್ರಜ್ವಲ್‌ ರೇವಣ್ಣ ಅವರಿಗೆ ಸಂದೇಶ ನೀಡಿದ್ದಾರೆ.

ಪೆನ್‌ಡ್ರೈವ್‌ ಲೈಂಗಿಕ ಹಗರಣ ಹಾಗೂ ಅತ್ಯಾಚಾರ ಆರೋಪಿ ಹಾಗೂ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಹಗರಣ ಬೆಳಕಿಗೆ ಬಂದ ಬಳಿಕ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದು, ಎಸ್ಐಟಿ ಈಗಾಗಲೇ ಇಂಟರ್‌ಪೋಲ್‌ ಮೂಲಕ ಬ್ಲೂ-ಕಾರ್ನರ್‌ ನೊಟೀಸ್‌ ಹೊರಡಿಸಿದೆ. ಈಗಾಗಲೇ ಸ್ಥಳೀಯ ನ್ಯಾಯಾಲಯವೂ ಪ್ರಜ್ವಲ್‌ ಬಂಧನಕ್ಕೆ ವಾರೆಂಟ್‌ ಹೊರಡಿಸಿದೆ.

ಈ ಸರಕಾರಕ್ಕೆ ಪ್ರಜ್ವಲ್ ಕರೆಸುವ ಶಕ್ತಿ ಇದ್ದಂತಿಲ್ಲ. ಅದಕ್ಕೆ ನಾನೇ ಕರೆ ಕೊಡುತ್ತಿದ್ದೇನೆ. ಮಾಧ್ಯಮಗಳ ಮೂಲಕ ಹೇಳುತ್ತಿದ್ದೇನೆ. ಕೂಡಲೇ ವಾಪಸ್‌ ಬಾ.. ದೊಡ್ಡವರು (ದೇವೇಗೌಡರು) ಮತ್ತು ಪಕ್ಷದ ಕಾರ್ಯಕರ್ತರಿಗೆ ಗೌರವ ಕೊಟ್ಟು ತಕ್ಷಣ ವಾಪಸ್‌ ಬಾ.. ತನಿಖಾ ತಂಡಕ್ಕೆ ಸಹಕರಿಸು. ಕಾನೂನು ಪ್ರಕಾರ ಪ್ರಕರಣವನ್ನು ಎದುರಿಸುವ ಎಂದು ಕರೆ ನೀಡಿದ್ದಾರೆ.

ನಮ್ಮ ತಂದೆಯವರ ನೋವು ನೋಡಲಾಗದೆ ಈ ಮಾತನ್ನು ಹೇಳುತ್ತಿದ್ದೇನೆ. ಇತರೆ ಯಾರೂ ನಮ್ಮಿಂದ ನೋವಿಗೆ ತುತ್ತಾಗಬಾರದು. ನಾನೇ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ ಎಂದು ತಂದೆಯವರು ಹೇಳಿದರು. ನಮ್ಮ ತಂದೆ ಆವರಿಗೆ ನಾನು ಹೇಳಿದ್ದೇನೆ. ನಾನೇ ವಾಪಸ್‌ ಬರುವಂತೆ ಸಂದೇಶ ಕೊಡುತ್ತೇನೆ ಎಂದು ನಿಮ್ಮಗಳ (ಮಾಧ್ಯಮಗಳು) ಮೂಲಕ ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದರು.

ನಾನು ದಿನವೂ ಪದ್ಮನಾಭ ನಗರಕ್ಕೆ ಹೋಗುತ್ತೇನೆ. ಪ್ರಜ್ವಲ್ ರಕ್ಷಣೆ ಹೇಗೆ ಮಾಡಬೇಕು ಎಂದು ಚರ್ಚೆ ಮಾಡುವುದಕ್ಕೆ ನಾನು ಅಲ್ಲಿಗೆ ಹೋಗುತ್ತಿಲ್ಲ. ನಮ್ಮ ತಂದೆ-ತಾಯಿ ಅವರ ಜೀವಕ್ಕೆ ತೊಂದರೆ ಆಗಬಾರದು ಎಂದು ಅವರಿಗೆ ಧೈರ್ಯ ತುಂಬಲು ಹೋಗುತ್ತಿದ್ದೇನೆ. ಆದರೆ, ಇದನ್ನೇ ಬೇರೆಯವರು ಕಥೆ ಕಟ್ಟಿ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಫೋನ್ ಕದ್ದಾಲಿಕೆ

ನನ್ನ ಮತ್ತು ನನ್ನ ಕುಟುಂಬದವರ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ. ಕುಟುಂಬದ ಸದಸ್ಯರ ಮತ್ತು ನನ್ನ ಸುತ್ತಲಿರುವ ನಲವತ್ತೈದು ಮಂದಿಯ ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

Tags:    

Similar News