Land Encroachment | ಎಚ್‌ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ; ಸರ್ವೇ ಆರಂಭಿಸಿದ ಕಂದಾಯ ಇಲಾಖೆ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಬಂಧಿಕರು ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಆರಂಭಿಸಲಾಗಿದೆ.;

Update: 2025-02-18 07:32 GMT
ಬಿಡದಿಯ ಕೇತಗಾನಹಳ್ಳಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಭೂ ಒತ್ತುವರಿ ಆರೋಪದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದರು

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಕಂದಾಯ ಹಾಗೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ರಾಮನಗರ ಜಿಲ್ಲೆಯ ಬಿಡದಿ ಸಮೀಪವಿರುವ ಕೇತಗಾನಹಳ್ಳಿ ಗ್ರಾಮದಲ್ಲಿ ಸರ್ವೇ ಕಾರ್ಯ ನಡೆಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಬಂಧಿಗಳಾದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಅನಸೂಯ ಮಂಜುನಾಥ್ ಹಾಗೂ ಇತರರು ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಆರಂಭಿಸಲಾಗಿದೆ.


ಹೈಕೋರ್ಟ್‌ ಆದೇಶ ಪಾಲಿಸದ ಕಂದಾಯ ಇಲಾಖೆ ವಿರುದ್ಧ ಎಸ್‌.ಆರ್‌. ಹಿರೇಮಠ್‌ ನೇತೃತ್ವದ ʼಸಮಾಜ ಪರಿವರ್ತನಾ ಸಮುದಾಯʼ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಜ. 29 ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ, 'ಭೂ ಒತ್ತುವರಿ ತೆರವಿಗೆ ಕ್ರಮ ವಹಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೀರಿ' ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

'ಕುಮಾರಸ್ವಾಮಿ ಅವರು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ನೀವು ಏನೂ ಮಾಡುತ್ತಿಲ್ಲ. ನಿಮ್ಮನ್ನು 15 ದಿನ ಜೈಲಿಗೆ ಕಳುಹಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಎಚ್ಚರಿಕೆ ನೀಡಿ, ತಕ್ಷಣ ಸರ್ವೇ ನಡೆಸಿ ಒತ್ತುವರಿ ತೆರವಿಗೆ ಸೂಚಿಸಿತ್ತು.

ನ್ಯಾಯಾಲಯದ ಎಚ್ಚರಿಕೆ ಹಿನ್ನೆಲೆಯಲ್ಲಿ ಒತ್ತುವರಿ ಜಮೀನು ತೆರವಿಗೆ ರಾಜ್ಯ ಸರ್ಕಾರವು ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ಅಮ್ಹಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್ಐಟಿ ರಚಿಸಿತ್ತು. ಎಸ್ಐಟಿ ತನಿಖೆಯ ಭಾಗವಾಗಿ ಕಂದಾಯ ಇಲಾಖೆ ಹಾಗೂ ಎಸ್ಐಟಿ ಅಧಿಕಾರಿಗಳು ಜಮೀನಿನ ಸರ್ವೇ ಕೆಲಸ ಆರಂಭಿಸಿದ್ದಾರೆ.

ಫೆ. 21ರೊಳಗೆ ಎಸ್ಐಟಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇತ್ತೀಚೆಗೆ ಹೇಳಿದ್ದರು.

ಪ್ರಕರಣದ ಹಿನ್ನೆಲೆ ಏನು?

2014ರಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಕುರಿತಂತೆ ಮಾಜಿ ಸಂಸದ ಮಾದೇಗೌಡ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆರೋಪ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಕಂದಾಯ ಇಲಾಖೆಗೆ ಲೋಕಾಯುಕ್ತರು ಆದೇಶಿಸಿದ್ದರು. ಲೋಕಾಯುಕ್ತ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಲೋಕಾಯುಕ್ತರ ಆದೇಶವನ್ನು ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶವನ್ನು ಕಂದಾಯ ಇಲಾಖೆ ಪಾಲಿಸಿಲ್ಲ ಎಂದು ದೂರಿ ಎಸ್.ಆರ್. ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಕೇತಗಾನಗಳ್ಳಿಯಲ್ಲಿ ಮೊದಲಿಗೆ ಡಿ.ಸಿ. ತಮ್ಮಣ್ಣ ಅವರಿಗೆ ಸೇರಿದ ಜಮೀನಿನ ಸರ್ವೇ ಮಾಡಲಾಗುತ್ತಿದೆ. ನಂತರ, ಕುಮಾರಸ್ವಾಮಿ ಹಾಗೂ ಇತರರ ಜಮೀನಿನ ಸರ್ವೇ ನಡೆಯಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಜಮೀನು ಲಪಟಾಯಿಸಲು ಸರ್ಕಾರ ಸಂಚು

ನಾನು ಸಿನಿಮಾ ಹಂಚಿಕೆದಾರನಾಗಿದ್ದಾಗ 1985ರಲ್ಲಿ ಕಷ್ಟಪಟ್ಟು ಬಿಡದಿಯ ಬಳಿ ಖರೀದಿಸಿದ 45 ಎಕರೆ ಜಮೀನನ್ನು ಲಪಟಾಯಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊಂಚು ಹಾಕುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.

ಕೇತಗಾನಹಳ್ಳಿಯ ಭೂಮಿಯನ್ನು ನಾನು ಕಷ್ಟಪಟ್ಟು ಸಂಪಾದಿಸಿದ್ದೇನೆ. ಅದರಲ್ಲಿ ಒತ್ತುವರಿ ಆಗಿದೆ ಎಂದು ಸಿದ್ದರಾಮಯ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ನನ್ನ ಮೇಲೆ ದಾಳಿಗೆ ಬಿಟ್ಟಿದೆ ಎಂದು ಹಾಸನದಲ್ಲಿ ಆರೋಪಿಸಿದ್ದರು.

ಸರ್ವೇ ಮಾಡಿಕೊಂಡು ಒತ್ತುವರಿ ಆಗಿದ್ದರೆ ಆ ಭೂಮಿ ವಾಪಸ್ ಪಡೆದುಕೊಳ್ಳಲು ನನ್ನದೇನೂ ತಕರಾರು ಇಲ್ಲ. ಆದರೆ ಈ ದೇಶದಲ್ಲಿ ಕಾನೂನು, ಸಂವಿಧಾನ ಎನ್ನುವುದು ಇದೆ. ಅದು ಎಲ್ಲರಿಗೂ ಸಮಾನ ಅಲ್ಲವೇ? ಅಂತಹ ಸಾಂವಿಧಾನಿಕ ವ್ಯವಸ್ಥೆಗಳಿಗೆ ನನ್ನ ಮನವಿ ಇಷ್ಟೇ. ನೀವು ಕೆಲ ಅಭಿಪ್ರಾಯಗಳನ್ನು ವ್ಯಕ್ತ ಮಾಡುವ ಸಂದರ್ಭದಲ್ಲಿ ಸತ್ಯಾತ್ಯತೆ ಗಮನಿಸಿ. ದಾಖಲೆಗಳನ್ನು ನೋಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Tags:    

Similar News