ಜಮೀರ್ ಆತ್ಮೀಯತೆ ಕೇವಲ ರಾಜಕೀಯಕ್ಕೆ ಸೀಮಿತ: ಎಚ್ ಡಿ ಕುಮಾರಸ್ವಾಮಿ

Update: 2024-11-15 08:20 GMT

ತಮ್ಮ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ʼಕರಿಯಾʼ ಎಂದು ನಿಂದಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಜಮೀರ್ ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನನ್ನ ಜಮೀರ್ ಆತ್ಮೀಯತೆ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಬಗ್ಗೆ ಕರಿಯಾ ಎನ್ನುವ ಪದ ಬಳಕೆ ಮಾಡಿದ್ದ ಜಮೀರ್ ವಿರುದ್ಧ ಕಿಡಿಕಾರಿದ್ದಾರೆ.

“ಬಸವರಾಜ ಹೊರಟ್ಟಿ ಒಮ್ಮೆ ನನ್ನನ್ನು ಆತ್ಮೀಯತೆಯಿಂದ ‘ಏ ಕುಮಾರ’ ಎಂದು ಕರೆದಾಗ ಇದೇ ಜಮೀರ್ ಅವರನ್ನು ಹೊಡೆಯಲು ಹೋಗಿದ್ದರು” ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಜಮೀರ್ ಅವರನ್ನು ಕುಳ್ಳ ಎಂದು ಕರೆದಿಲ್ಲ

ನಾನು ಜಮೀರ್ ಅಹ್ಮದ್ ಅವರನ್ನು ಎಂದೂ ಕುಳ್ಳ ಎಂದು ಕರೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ ಅವರು, ತಾಯಿ ಚಾಮುಂಡೇಶ್ವರಿ ಮುಂದೆ ನಿಂತಿದ್ದೇನೆ. ಸತ್ಯವನ್ನೇ ಹೇಳುತ್ತಿದ್ದೇನೆ ಎಂದರು.

ಕುಮಾರಸ್ವಾಮಿಗೆ ಪ್ರೀತಿಯಿಂದ ಕರಿಯ ಅಂತೇನೆ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕುರಿತು ಚನ್ನಪಟ್ಟಣ ಉಪ ಚುನಾವಣೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ‘ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ)’ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉಪ ಚುನಾವಣೆ ಹೊಸ್ತಿಲಲ್ಲಿ ಹೊಸ ವಿವಾದ ಹುಟ್ಟು ಹಾಕಿತ್ತು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ಜಮೀರ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

‘ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಡೇಂಜರ್’ ಎಂದು ಉರ್ದುವಿನಲ್ಲಿ ಟೀಕಿಸಿದ್ದರು.

ತಮ್ಮ ಹೇಳಿಕೆಯ ಕುರಿತ ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಜಮೀರ್ ಅಹಮದ್, ಮೊದಲಿನಿಂದಲೂ ಕುಮಾರಸ್ವಾಮಿಯವರು ನನ್ನನ್ನು ಕುಳ್ಳ ಅನ್ನುತ್ತಾರೆ. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತೇನೆ. ಕುಮಾರಸ್ವಾಮಿಯನ್ನು ನಾನು ಪ್ರೀತಿಯಿಂದ ಹಾಗೆ ಕರೆಯುತ್ತೇನೆಯೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ನಾವು ಬೇರೆ, ಬೇರೆ ಪಕ್ಷದಲ್ಲಿ ಇರಬಹುದು. ಆದರೆ, ಹಳೆಯ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡಿದ್ದರು.

Tags:    

Similar News