ʼಮುದುಕಪ್ಪನಿಗೆ ಸ್ವಾಭಿಮಾನ ಇದೆʼ: ಚೆಲುವರಾಯಸ್ವಾಮಿ, ಸಿದ್ದರಾಮಯ್ಯಗೆ ಹೆಚ್‌ಡಿಡಿ ತಿರುಗೇಟು
"ಮುದುಕಪ್ಪನಿಗೆ ಸ್ವಾಭಿಮಾನ ಇದೆ. ಈ ಪಕ್ಷ ಉಳಿಸೋದು ಕಾವೇರಿ ನೀರಿಗಾಗಿ, ನಿಮಗೆ ಮಾತಾಡೋ ಯೋಗ್ಯತೆ ಇಲ್ಲ. ಹೇಮಾವತಿ ಕಟ್ಟಿದವನು, ಹಾರಂಗಿ ಕಟ್ಟಿರೋನು ನಿಮ್ಮ ಮುಂದೆ ಇದ್ದೇನೆ" ಹೆಚ್‌ಡಿ ದೇವೇಗೌಡ
ಬೆಂಗಳೂರು: ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಂದಿನ ಚುನಾವಣೆಯಲ್ಲಿ ಅವರಿಗೆ ಉತ್ತರ ಸಿಗುತ್ತದೆ ಎಂದು ಹೇಳಿದ್ದಾರೆ.
ಪಕ್ಷದ ರಾಜ್ಯ ಕಛೇರಿ ಜೆ ಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಂದಿನ ಜನ್ಮವಿದ್ದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದ ದೇವೇಗೌಡರು, ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಕುಮಾರಸ್ವಾಮಿ ಅವರ ಸರಕಾರವನ್ನು ತೆಗೆದಿದ್ದು ಯಾರು? ಯಾವ ಕಾರಣಕ್ಕೆ ಸರ್ಕಾರವನ್ನು ತೆಗೆದಿದ್ದಾರೆ?” ಎಂದು ಪ್ರಶ್ನಿಸಿದರು.
ಮುದಕಪ್ಪನಿಗೆ ಸ್ವಾಭಿಮಾನ ಇದೆ ಎಂದು ಸಚಿವ ಚೆಲುವರಾಯಸ್ವಾಮಿಗೆ ತಿರುಗೇಟು ನೀಡಿದ ದೇವೇಗೌಡ ಅವರು, “ಮಂಡ್ಯದ ನಾಯಕರೊಬ್ಬರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ತುಂಬಾ ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಅ ಮುದುಕಪ್ಪನನ್ನ ಕಟ್ಟಿಕೊಂಡು ಏನೇನೋ ಮಾಡೋಕೆ ಹೋಗ್ತಿದ್ದಾರೆ ಅಂತಾರೆ. ಆ ಮುದುಕಪ್ಪನಿಗೆ ಸ್ವಾಭಿಮಾನ ಇದೆ. ಈ ಪಕ್ಷ ಉಳಿಸೋದು ಕಾವೇರಿ ನೀರಿಗಾಗಿ, ನಿಮಗೆ ಮಾತಾಡೋ ಯೋಗ್ಯತೆ ಇಲ್ಲ. ಹೇಮಾವತಿ ಕಟ್ಟಿದವನು, ಹಾರಂಗಿ ಕಟ್ಟಿರೋನು ನಿಮ್ಮ ಮುಂದೆ ಇದ್ದೇನೆ" ಎಂದು ಹೇಳಿದರು.
ಬಿಜೆಪಿ ಜತೆ ಜೆಡಿಎಸ್ ವಿಲೀನ ಅಂತ ಸಿದ್ದರಾಮಯ್ಯನವರೇ ತೀರ್ಮಾನ ಮಾಡಿಬಿಟ್ಟರು. ಮೋದಿಗೆ ಪೈಪೋಟಿ ನೀಡುವ ಸಮರ್ಥ ನಾಯಕ ಸಿದ್ದರಾಮಯ್ಯ ಎಂದಿದ್ದ ಮಂಡ್ಯದ ನಾಯಕರೊಬ್ಬರು ಹೇಳಿದ್ದರು. ಜಾತ್ಯತೀತ ಎಂಬ ಪದ ಬಳಕೆ ಮಾಡುವ ನೈತಿಕತೆ ಜೆಡಿಎಸ್ ಗೆ ಇಲ್ಲ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಹಾಗಾದರೆ, ಮುಸ್ಲಿಮರಿಗೆ ನಾನು ಕೊಟ್ಟಿದ್ದ 4% ಮೀಸಲಾತಿಯನ್ನು ಇವರು ಮತ್ತೆ ಕೊಡಲಿ ನೋಡೋಣ ಎಂದು ದೇವೇಗೌಡ ಅವರು ಸವಾಲು ಹಾಕಿದರು.
ಬಿಜೆಪಿ ಜತೆ ಕುಮಾರಸ್ವಾಮಿ ಸರಕಾರ ಮಾಡಿದಾಗ ಈ ಮಂಡ್ಯದ ನಾಯಕ ಸಾರಿಗೆ ಮಂತ್ರಿ ಆಗಿದ್ದರು. ಅದು ಮರೆತು ಹೋಯ್ತಾ ಇವರಿಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಆಡಳಿತ ವೈಖರಿಗೆ ಕಿಡಿ
ಸಿದ್ದರಾಮಯ್ಯ ಅವರೇ ನನ್ನ ಜತೆ ಹಣಕಾಸು ಮಂತ್ರಿ ಅಗಿದ್ದರು. ಒಂದೂವರೆ ವರ್ಷದಲ್ಲಿ ಒಂದು ನಿಗಮ ಮಂಡಳಿಗೂ ನಾನು ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ. ಆಗ ನಮಗೆ 113 ಸ್ಥಾನ ಇತ್ತು. ಈಗ ನಿಮಗೆ 136 ಸ್ಥಾನ ಕೊಟ್ಟು ಜನ ತೀರ್ಪು ನೀಡಿದ್ದಾರೆ. 5 ಗ್ಯಾರಂಟಿ ಜನರಿಗೆ ತಲುಪಿದೆಯಾ ಇಲ್ಲವೇ ಎಂದು ನೋಡುವುದಕ್ಕೆ 5 ಮಾಜಿ ಮಂತ್ರಿಗಳನ್ನು ನೇಮಕ ಮಾಡಿದ್ದೀರಿ. ಜಿಲ್ಲಾ ಮಟ್ಟದಲ್ಲೂ ಸಮಿತಿ ನೇಮಕ ಮಾಡುತ್ತಿದ್ದೀರಿ. 136 ಶಾಸಕರು, 20-25 ಎಂಎಲ್ಸಿಗಳು, 95 ಜನ ಬೋರ್ಡ್ ಅಧ್ಯಕ್ಷರು, ಅವರಿಗೆ ಸಂಪುಟ ದರ್ಜೆ, ಸಲಹೆಗಾರರಿಗೂ ಸಂಪುಟ ದರ್ಜೆ. ಈಗ ಪಕ್ಷದ ಕಾರ್ಯಕರ್ತರು, ಮುಖಂಡರ ನೇಮಕ ಆಗಿದೆ. ಇದು ಇವರ ಅಡಳಿತದ ವೈಖರಿ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರದಿಂದ ನಮಗೆ ಹಣ ಬಂದಿಲ್ಲ ಅಂತಾರೆ ಇವರು. ಈ ದೇವೇಗೌಡ ಸಿಎಂ ಆಗಿದ್ದಾಗ ಕೇಂದ್ರದವರು ರೈತರ ಸಾಲಮನ್ನಾ ನಾವೇ ಮಾಡುತ್ತೇವೆ ಅಂದರು. ಕೊನೆಪಕ್ಷ ನಾವು ಬಡ್ಡಿ ಮನ್ನಾ ಮಾಡುತ್ತೇವೆ, ಒಪ್ಪಿಗೆ ಕೊಡಿ ಎಂದರೂ ಅವರು ಒಪ್ಪಿಗೆ ಕೊಡಲಿಲ್ಲ. ಅವತ್ತು ಸಿದ್ದರಾಮಯ್ಯ ನನ್ನ ಸಂಪುಟದಲ್ಲಿ ಹಣಕಾಸು ಮಂತ್ರಿ ಆಗಿದ್ದರು. ನಿಮಗೆ ಪ್ರಾಮಾಣಿಕತೆ ಇದ್ದರೆ ಅವತ್ತು ಏನ್ ನಡೀತು ಹೇಳಿ. ಈಗ ಯಾಕೆ ಮೋದಿ ಬಗ್ಗೆ ಮಾತಾಡ್ತೀರಾ? ಎಂದು ಮಾಜಿ ಪ್ರಧಾನಿಗಳು ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದರು.
ಮೋದಿ ಬಗ್ಗೆ ಮಾತನಾಡಲು ನೀವು ಯಾರು?
ಬೆಳಗ್ಗೆ ಎದ್ದರೆ ಮೋದಿ ಮೋದಿ ಅಂತಾರೆ. ಹಿಂದೆ ಮನಮೋಹನ್ ಸಿಂಗ್ ಅವರು ಏನು ಕೊಟ್ಟಿದ್ದರು? ಅದನ್ನು ಇವರು ಹೇಳಬೇಕು. ಅದಕ್ಕೂ ಮೊದಲು ವಾಜಪೇಯಿ ಅವರು ಏನು ಕೊಟ್ಡಿದ್ದಾರೆ ಹೇಳಿ. ಸಿದ್ದರಾಮಯ್ಯನವರೇ ಸತ್ಯ ಹೇಳಿ. ಮೋದಿ ಈ ದೇಶದಲ್ಲಿರುವ ಸಮರ್ಥ ನಾಯಕ ಅನ್ನುವುದನ್ನು ಇಲ್ಲ ಎನ್ನುವುದಕ್ಕೆ ಇವರು ಯಾರು? WHO IS HE? ಮೋದಿ ಅವರನ್ನು ಇಡೀ ವಿಶ್ವ ಒಪ್ಪಿದೆ. ಮಾತಾಡೋಕು ಇತಿಮಿತಿ ಇರಬೇಕು ಎಂದು ಅವರು ಹೇಳಿದರು.