Hasanamba Darshana | ಬಾಗಿಲು ತೆರೆದ ಹಾಸನಾಂಬಾ ದೇಗುಲ; ಏನಿದು ವಿಶೇಷ, ಐತಿಹ್ಯ ಏನು?
ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ಅವಕಾಶ ಸಿಗುವ ಹಾಸನದ ಹಾಸನಾಂಬಾ ದೇವಿಯ ದರ್ಶನ ಗುರುವಾರದಿಂದ ಆರಂಭವಾಗಿದ್ದು, ಜನದಟ್ಟಣೆ ನಿಯಂತ್ರಿಸಲು ಈ ಬಾರಿ ದಿನದ 24 ಗಂಟೆಯೂ ದರ್ಶನ ಅವಕಾಶ ನೀಡಲಾಗಿದೆ.
ಹಾಸನ ಜಿಲ್ಲೆಯ ಶಕ್ತಿದೇವತೆಯಾದ ಹಾಸನಾಂಬಾ ದೇವಾಲಯದ ಬಾಗಿಲು ತೆರೆಯಲಾಗಿದೆ. ಅ.24 ರಂದು ಗುರುವಾರ ದೇವಾಲಯದ ಬಾಗಿಲು ತೆರೆದಿದ್ದು, ಇಂದಿನಿಂದ (ಅ.25) ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ. ನ.3ರವರೆಗೆ ದಿನದ 24 ಗಂಟೆಯೂ ಹಾಸನಾಂಬಾ ದರ್ಶನ ಪಡೆಯಬಹುದಾಗಿದೆ.
ಹಾಸನಾಂಬ ವಿಶೇಷತೆ ಏನು?
ಸಿಂಹಾಸನಪುರಿ ಹೆಸರಿನ ನಗರದಲ್ಲಿ ಹಾಸನಾಂಬಾ ನೆಲೆ ನಿಂತ ನಂತರ ಹಾಸನ ಎಂದು ಹೆಸರು ಬದಲಾಯಿತು ಎಂಬ ಐತಿಹ್ಯ ಇದೆ. ನಗರ ಹಾಸನಾಂಬಾ ದೇವಿ. ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು, ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಶಾಸಕರ ಸಮ್ಮುಖದಲ್ಲಿ ದೇವಾಲಯ ತೆರೆಯಲಾಗುತ್ತದೆ. ಜಿಲ್ಲಾ ಖಜಾನೆಯಿಂದ ಆಭರಣಗಳನ್ನು ಮೆರವಣಿಗೆಯಲ್ಲಿ ತಂದು ಹುತ್ತದ ರೂಪದಲ್ಲಿರುವ ದೇವಿಗೆ ಅಲಂಕಾರ ಮಾಡಲಾಗುತ್ತದೆ. ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವಾಗಲೂ ಇವರ ಸಮ್ಮುಖದಲ್ಲಿ ದೇವಿಗೆ ದೀಪ, ಅಕ್ಕಿ ನೈವೇದ್ಯ ಇರಿಸಿ ಮುಚ್ಚಲಾಗುತ್ತದೆ. ಅಂದು ಹಚ್ಚಿಡುವ ದೀಪ ಮುಂದಿನ ವರ್ಷದ ದರ್ಶನದವರೆಗೂ ಉರಿಯುತ್ತಿರುತ್ತದೆ ಎಂಬುದು ಇಲ್ಲಿನ ನಂಬಿಕೆ.
ಯಾರೆಲ್ಲಾ ದರ್ಶನ ಪಡೆದರು?
ಗರ್ಭಗುಡಿ ಎದುರು ಬಾಳೆ ಕಂದು ಕಡಿದು ಬಾಗಿಲು ತೆರೆಯುತ್ತಿದ್ದಂತೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಮೈಸೂರು ರಾಜಮಾತೆ ಪ್ರಮೋದಾದೇವಿ, ಶಾಸಕ ಸ್ವರೂಪ್ ಪ್ರಕಾಶ್, ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಸೇರಿದಂತೆ ಹಲವು ಗಣ್ಯರು ಮೊದಲ ದಿನ ಹಾಸನಾಂಬೆಯ ದರ್ಶನ ಪಡೆದರು.
ದೇವಾಲಯ ತೆರೆಯುವ ಮೊದಲ ದಿನ ಗಣ್ಯರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಉಳಿದ ದಿನಗಳಲ್ಲಿ ಗಣ್ಯರು ಭೇಟಿ ನೀಡುವುದರಿಂದ ಅರ್ಧ ಗಂಟೆಯ ಕಾಲ ಸಾರ್ವಜನಿಕರ ದರ್ಶನ ನಿಲ್ಲಿಸಲಾಗುತ್ತಿತ್ತು. ಇದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ರೀತಿಯ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಮೊದಲ ಹಾಗೂ ಕೊನೆಯ ದಿನದಂದು ರಾಜಕೀಯ ನಾಯಕರು ಹಾಗೂ ಗಣ್ಯರ ದರ್ಶನಕ್ಕೆ ಮೀಸಲಿಟ್ಟಿದೆ.
ಹಾಸನಾಂಬೆ ಕುರಿತ ನಂಬಿಕೆಗಳೇನು?
ಹಾಸನಾಂಬೆ ದೇಗುಲದ ಬಾಗಿಲು ಮುಚ್ಚುವಾಗ ದೇವಿಗೆ ಅಲಂಕಾರ ಮಾಡಿ, ನೈವೇದ್ಯ ಇರಿಸಿ ದೀಪ ಹಚ್ಚಿಡಲಾಗುತ್ತದೆ. ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ದೀಪ ಆರಿರುವುದಿಲ್ಲ. ನೈವೇದ್ಯ ಹಳಸಿರುವುದಿಲ್ಲ. ಹೂವು ಬಾಡಿರುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.
ಜಾತ್ರಾ ಮಹೋತ್ಸವ ಆಚರಣೆ
ಇದೇ ಸಂದರ್ಭದಲ್ಲಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೂ ಚಾಲನೆ ದೊರೆಯಲಿದೆ. 11 ದಿನಗಳ ಕಾಲ ನಡೆಯುವ ಹಾಸನಾಂಬೆ ದರ್ಶನ ಹಾಗೂ ಜಾತ್ರಾ ಮಹೋತ್ಸವಕ್ಕೆ ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ. ಕೆಲ ಕುಟುಂಬಗಳು ಇಲ್ಲಿಯೇ ಒಕ್ಕಲು ಸೇವೆ ಮಾಡಲಿವೆ. ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಅಂದಾಜು 20 ಲಕ್ಷ ಜನರು ಬರಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಹಾಗಾಗಿ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕೈಗೊಂಡಿದೆ.
ಹಾಸನಾಂಬೆ ಐತಿಹ್ಯ ಏನು?
12 ನೇ ಶತಮಾನದಲ್ಲಿ ಪಾಳೆಗಾರ ಕೃಷ್ಣಪ್ಪನಾಯಕ ಪ್ರಯಾಣ ಬೆಳೆಸಿದಾಗ ಮೊಲವೊಂದು ಅಡ್ಡ ಬಂದಿತು. ಇದು ಅಪಶಕುನವೆಂದು ಭಾವಿಸಿದಾಗ ಆದಿಶಕ್ತಿ ಸ್ವರೂಪಿಣಿ ಪ್ರತ್ಯಕ್ಷಳಾಗಿ ಈ ಸ್ಥಳದಲ್ಲಿ ದೇಗುಲ ನಿರ್ಮಿಸು. ನಾನು ಹಾಸನಾಂಬೆಯಾಗಿ ನೆಲೆಸುತ್ತೇನೆ ಎಂದು ಹೇಳಿದರೆಂಬ ಉಲ್ಲೇಖ ಕ್ರಿ.ಶ.1140 ರಲ್ಲಿ ಹಾಸನ ತಾಲೂಕಿನ ಕುದುರುಗಂಡಿಯಲ್ಲಿ ದೊರೆತ ವೀರಗಲ್ಲು ಶಾಸನದಲ್ಲಿದೆ. ಹಾಸನಾಂಬೆ ಕ್ಷೇತ್ರದಿಂದಾಗಿ ಜಿಲ್ಲೆಗೆ ಹಾಸನ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ. ಇನ್ನು ಸಪ್ತ ಮಾತೃಕೆಯರು ಲೋಕಸಂಚಾರ ಕೈಗೊಂಡಿದ್ದಾಗ ಮಲೆನಾಡಿನ ಈ ಪರಿಸರಕ್ಕೆ ಮಾರು ಹೋದರು. ವೈಷ್ಣವಿ, ವಾರಾಹಿ ಮತ್ತು ಇಂದ್ರಾಣಿ ಈ ಮೂವರು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆಯ ದೇಗುಲ ಎಂಬ ಕತೆಯೂ ಇದೆ.
ಕೈಗೊಂಡಿರುವ ಸೌಲಭ್ಯಗಳೇನು?
ಹಾಸನಾಂಬ ದೇಗುಲದ ಆವರಣದಲ್ಲಿ ಭಕ್ತರು ಫೋಟೊ ತೆಗೆಸಿಕೊಳ್ಳಲು ಸೆಲ್ಫಿಸ್ಟ್ಯಾಂಡ್ ಮಾಡಲಾಗಿದೆ. ದೇಗುಲದ ಹೊರಭಾಗದಲ್ಲಿ ಆಕರ್ಷಣೀಯವಾದ ಪ್ರವೇಶದ್ವಾರ ನಿರ್ಮಿಸಲಾಗಿದೆ. ಅತಿ ಗಣ್ಯರು ಸಂತೆಪೇಟೆ, ತೋಟಗಾರಿಕೆ ಇಲಾಖೆ ಮುಂಭಾಗದ ರಸ್ತೆಯಲ್ಲಿ ಬಂದು ಅದೇ ರಸ್ತೆಯಲ್ಲಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಮೈಸೂರಿನ ಅಗರ್‌ಬತ್ತಿ ಕಂಪನಿಯೊಂದು ದೇಗುಲ ಆವರಣದ ಎಲ್ಲೆಡೆ ಸುಗಂದ ಪರಿಮಳದ ಕಂಪು ಸೂಸುವ ವ್ಯವಸ್ಥೆ ಕಲ್ಪಿಸಿದೆ. ದೇಗುಲದ ಸುತ್ತಲಿನ ಬ್ರಾಹ್ಮಣರ ಬೀದಿ, ಚೌಡೇಶ್ವರಿ ರಸ್ತೆ, ದೇವಾಂಗ ಬೀದಿಯಲ್ಲಿರುವ ನಿವಾಸಿಗಳು ಮನೆಗೆ ಓಡಾಡಲು ಇದೇ ಮೊದಲ ಬಾರಿಗೆ ಪಾಸ್ ವಿತರಿಸಲಾಗಿದೆ. ಆನ್ ಲೈನ್ ಟಿಕೆಟ್ ಖರೀದಿ, ಸರದಿ ಸಾಲಿನಲ್ಲಿ ಬರುವವರಿಗೆ ಕ್ಯುಆರ್ ಕೋಡ್ ಪಾಸ್ ಲಭ್ಯ ಕೂಡ ಲಭ್ಯವಿದೆ.