The Federal Special Series -4 | ರಾಜ್ ಅಪಹರಣದ 25ನೇ ವರ್ಷ: 20 ಕೋಟಿ ರೂ. ಸಂದಾಯದ ʼಸಂಗ್ರಾಮʼ ರಹಸ್ಯ!
ಡಾ. ರಾಜ್‌ಕುಮಾರ್ ಅಪಹರಣವಾದ ಕೆಲವೇ ದಿನಗಳಲ್ಲಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮನೆಗೆ ಕರೆದೊಯ್ದಿದ್ದರು ಎಂದು ಸಂಗ್ರಾಮ್ ಸಿಂಗ್ ಸಂದರ್ಶನದಲ್ಲಿ ವಿವರಿಸಿದ್ದಾರೆ.;
ವರನಟ ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ ಇಂದಿಗೆ 25 ವರ್ಷಗಳು ಪೂರ್ಣಗೊಂಡಿವೆ. ಈ ಕರಾಳ ದಿನದ ನೆನಪಿನಲ್ಲೇ, ಅಂದು ನಡೆದ ಘಟನಾವಳಿಗಳ ಕುರಿತು ಹಲವು ವರ್ಷಗಳಿಂದ ಇದ್ದ "ಹಣ ಸಂದಾಯ"ದ ಪ್ರಸಂಗವನ್ನು ಮತ್ತೊಮ್ಮೆ ಸ್ಮರಿಸಹುದು. ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ತಾವೇ ಖುದ್ದಾಗಿ ವೀರಪ್ಪನ್‌ಗೆ ಕೋಟ್ಯಂತರ ರೂಪಾಯಿ ತಲುಪಿಸಿದ್ದಾಗಿ ಹೇಳಿದ್ದಾರೆ.
ಡಾ. ರಾಜ್‌ಕುಮಾರ್ ಅಪಹರಣವಾದ ಕೆಲವೇ ದಿನಗಳಲ್ಲಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮನೆಗೆ ಕರೆದೊಯ್ದಿದ್ದರು ಎಂದು ಸಂಗ್ರಾಮ್ ಸಿಂಗ್ ಸಂದರ್ಶನದಲ್ಲಿ ವಿವರಿಸಿದ್ದಾರೆ. "ಅಲ್ಲಿ, ಸ್ವತಃ ಮುಖ್ಯಮಂತ್ರಿಗಳು ವೀರಪ್ಪನ್‌ಗೆ ಹಣ ತಲುಪಿಸುವ ಜವಾಬ್ದಾರಿಯನ್ನು ನನಗೆ ವಹಿಸಿದರು. ನಂತರ, ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ ಹೆಗಡೆ ಅವರು ಹಣ ತುಂಬಿದ್ದ ಕೊಠಡಿಗೆ ನನ್ನನ್ನು ಕರೆದೊಯ್ದರು," ಎಂದು ಸಿಂಗ್ ಹೇಳಿದ್ದಾರೆ.
ಚೆನ್ನೈಗೆ ಎರಡು ಬಾರಿ 10 ಕೋಟಿ ರೂಪಾಯಿ ರವಾನೆ
ಸಿದ್ದಾರ್ಥ ಹೆಗಡೆ ಅವರು ಹಣವಿದ್ದ ಬ್ಯಾಗ್‌ಗಳನ್ನು ಹೊರತಂದು ಕಾರಿನಲ್ಲಿ ಇರಿಸಿದರು ಎಂದು ಹೇಳಿದ ಸಂಗ್ರಾಮ್ ಸಿಂಗ್, "ಮೊದಲ ಕಂತಿನಲ್ಲಿ 10 ಕೋಟಿ ರೂಪಾಯಿ ಹಣವನ್ನು ಕಾರಿನಲ್ಲಿ ಚೆನ್ನೈಗೆ ತೆಗೆದುಕೊಂಡು ಹೋಗಿ, ಅಲ್ಲಿ ಒಂದು ನಿಗದಿತ ಜಾಗಕ್ಕೆ ತಲುಪಿಸಿ ಬೆಂಗಳೂರಿಗೆ ಮರಳಿದೆ. ಅದರ ನಂತರ, ಮತ್ತೊಮ್ಮೆ 10 ಕೋಟಿ ರೂಪಾಯಿ ಹಣವನ್ನು ಅದೇ ರೀತಿ ತಲುಪಿಸಲಾಯಿತು," ಎಂದು ಅವರು ವಿವರಿಸಿದ್ದಾರೆ. ಈ ಮೂಲಕ ಒಟ್ಟು 20 ಕೋಟಿ ರೂಪಾಯಿ ಹಣವನ್ನು ತಲುಪಿಸಿರುವುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ.
ಅಣ್ಣಾವ್ರ ಜೊತೆ ಹೆಲಿಕಾಪ್ಟರ್‌ನಲ್ಲಿ ವಾಪಸ್
ಡಾ. ರಾಜ್‌ಕುಮಾರ್ ಅವರ ಬಿಡುಗಡೆಯ ದಿನದಂದು ಅವರನ್ನು ಕಾಡಿನಿಂದ ವಾಪಸ್ ಕರೆತರುವ ಕಾರ್ಯಾಚರಣೆಯಲ್ಲೂ ತಾವೂ ಭಾಗಿಯಾಗಿದ್ದಾಗಿ ಸಂಗ್ರಾಮ್ ಸಿಂಗ್ ನೆನಪಿಸಿಕೊಂಡಿದ್ದಾರೆ. "ಅಂದು ಎರಡು ಹೆಲಿಕಾಪ್ಟರ್‌ಗಳು ಬಂದಿದ್ದವು. ನಾನು ಮತ್ತು ಡಾ. ರಾಜ್‌ಕುಮಾರ್ ಒಂದೇ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಹಿಂದಿರುಗಿದೆವು" ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಡಾ. ರಾಜ್‌ಕುಮಾರ್ ಬಿಡುಡಗೆ ಸಂಬಂಧ ಸರ್ಕಾರ ನಡೆಸಿದ ರಹಸ್ಯ ಕಾರ್ಯಾಚರಣೆ, ರಾಜ್ ಅವರನ್ನು ಬಿಡುಗಡೆ ಮಾಡಿದ ರೀತಿ, ಈ ಬಗ್ಗೆ ಪ್ರತ್ಯಕ್ಷದರ್ಶಿ ಹಾಗೂ ಅಂದಿನ ಹಿರಿಯ ಪೊಲೀಸ್ ಅಧಿಕಾರಿ ಟಿ.ಜಿ. ಸಂಗ್ರಾಮ್ ಸಿಂಗ್ ಅವರ ವಿವರಣೆ ಇಲ್ಲಿದೆ. ಕ್ಲಿಕ್ ಮಾಡಿ..