ರಮ್ಯಾಗೆ ಬೆಂಬಲಕ್ಕೆ ರಾಜ್ ಕುಟುಂಬ ; ದೊಡ್ಮನೆ ನಡೆಗೆ ವ್ಯಂಗ್ಯವಾಡಿದ ಶ್ರೀದೇವಿ ಬೈರಪ್ಪ
ರಾಜ್ ಕುಟುಂಬದ ಈ ನಡೆಯನ್ನು ಗಮನಿಸಿದ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.;
ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿದ ಹಿನ್ನೆಲೆ ರಮ್ಯಾ ಬೆಂಬಲಕ್ಕೆ ರಾಜ್‌ಕುಮಾರ್ ಕುಟುಂಬ ನಿಂತಿದೆ. ಆದರೆ, ಕುಟುಂಬದ ನಡೆಗೆ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ವ್ಯಂಗ್ಯವಾಡಿದ್ದಾರೆ.
ಕೊಲೆ ಬೆದರಿಕೆ ಹಾಕಿದ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ರಮ್ಯಾ ದೂರು ನೀಡಿದ ಬೆನ್ನಲ್ಲೇ ಅವರ ಪರವಾಗಿ ದೊಡ್ಮನೆಯಿಂದ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಬೆಂಬಲ ಸೂಚಿಸಿದ್ದಾರೆ. ನಟಿಗೆ ನೀಡಿದ ಕಿರುಕುಳ ಹಾಗೂ ನಿಂದನೆಯನ್ನು ಖಂಡಿಸಿದ್ದಾರೆ. ರಾಜ್ ಕುಟುಂಬದ ಈ ನಡೆಯನ್ನು ಗಮನಿಸಿದ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
‘ತಮ್ಮ ಮನೆಯಲ್ಲೇ ಇದೆಲ್ಲಾ ನಡೆಯುವಾಗ ನಿದ್ದೆ ಮಾಡ್ತಿದ್ರಾ?’ ಎಂದು ಶಿವರಾಜ್‌ಕುಮಾರ್ ಉದ್ದೇಶಿಸಿ ಪ್ರಶ್ನಿಸಿದ್ದಾರೆ. ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಮಧ್ಯೆ ವೈವಾಹಿಕ ಬಿರುಕು ಉಂಟಾಗಿದ್ದು, ಸದ್ಯ ವಿಚ್ಛೇಧನ ಪ್ರಕರಣ ನ್ಯಾಯಾಲಯದಲ್ಲಿದೆ.
ಏಳು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರು 2019ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, 2024ರಲ್ಲಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ವಿಚ್ಛೇದನ ಕೋರಿ ಯುವ ರಾಜ್‌ಕುಮಾರ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಶ್ರೀದೇವಿ ಭೈರಪ್ಪ ವಿರುದ್ಧ ಯುವ ರಾಜ್‌ಕುಮಾರ್ ಕೆಲವು ಆರೋಪಗಳನ್ನು ಮಾಡಿದ್ದರು.
ಡಾ ರಾಜ್‌ಕುಮಾರ್ ಕುಟುಂಬದಲ್ಲಿ ಮೊದಲ ವಿಚ್ಛೇದನ ಪ್ರಕರಣ ಇದಾಗಿದೆ. ಸಾಂಸಾರಿಕ ಪ್ರಕರಣ ಗಂಭೀರವಾಗಿದ್ದರೂ ಯಾರೂ ಸಮಸ್ಯೆ ಬಗೆಹರಿಸಿರಲಿಲ್ಲ ಎಂಬುದು ಶ್ರೀದೇವಿ ಭೈರಪ್ಪ ಅವರು ಆರೋಪವಾಗಿದೆ.
ರಮ್ಯಾಗೆ ಶಿವಣ್ಣ ಬೆಂಬಲ
'ಸಾಮಾಜಿಕ ಮಾಧ್ಯಮ ತುಂಬಾ ಬಲಿಷ್ಠವಾದ ಅಸ್ತ್ರ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ ಅಸೂಯೆ ಬಿತ್ತಲು ಬಳಸಬಾರದು. ರಮ್ಯಾ ನಿಲುವು ಸರಿಯಿದೆ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ ಎಂದು ಹೇಳುವ ಮೂಲಕ ಶಿವರಾಜ್‌ಕುಮಾರ್ ಅವರು ರಮ್ಯಾ ಬೆಂಬಲಕ್ಕೆ ನಿಂತಿದ್ದಾರೆ.
ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣೋ ಪ್ರಪಂಚ ಬೆಳವಣಿಗೆಗೂ ಮುನ್ನ ನಾಶವಾಗಬೇಕು ಎಂದು ವಿನಯ್ ರಾಜ್‌ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಶಿವರಾಜಕುಮಾರ್-ಗೀತಾ ದಂಪತಿ ಕೂಡ, 'ರಮ್ಯಾ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ಮುಖ್ಯ' ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.