ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ; ಸ್ಥಳ ಪರಿಶೀಲನೆ ಬಳಿಕ ಕ್ರಮ- ಡಿ.ಕೆ. ಸುರೇಶ್
ಹೊರ ರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡುವ ಪ್ರಸ್ತಾವನೆ ಸಲ್ಲಿಸಿವೆ. ಹೀಗಾಗಿ ಮೆಟ್ರೋ ಅಧಿಕಾರಿಗಳು ನಮ್ಮಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷೆ ಮಾಡಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.;
ಸಾಂದರ್ಭಿಕ ಚಿತ್ರ
ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಾರಾಟ ಮಳಿಗೆ ಸ್ಥಾಪಿಸುವ ಸಂಬಂಧ ಶೀಘ್ರವೇ ಸ್ಥಳ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳಲ್ಲಿ ಮಾರಾಟ ಮಳಿಗೆ ಸ್ಥಾಪಿಸುವ ವಿಚಾರದಲ್ಲಿ ಅಮುಲ್ ಹಾಗೂ ನಂದಿನಿ ನಡುವೆ ಏರ್ಪಟ್ಟಿದ್ದ ಸ್ಪರ್ಧೆ ಹಿನ್ನೆಲೆಯಲ್ಲಿ ತ್ವರಿತ ಕ್ರಮಕ್ಕೆ ಕೆಎಂಎಫ್ ಮುಂದಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಮಳಿಗೆ ತೆರೆಯಲು ಸ್ಥಳ ಪರೀಶಿಲನೆ ನಡೆಸಲಾಗುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಜತೆ ಒಪ್ಪಂದ ಮಾಡಿಕೊಂಡು ನಂದಿನಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.
ಚನ್ನಪಟ್ಟಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಂದಿನಿ ಮಳಿಗೆ ಆರಂಭಿಸಲು ಈಗಾಗಲೇ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಬಳಿಕ ಮೆಟ್ರೋ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಹೊರ ರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡುವ ಪ್ರಸ್ತಾವ ಸಲ್ಲಿಸಿರುವುದರಿಂದ ಮೆಟ್ರೋ ಅಧಿಕಾರಿಗಳು ನಮ್ಮಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷಿಸುತ್ತಿದ್ದಾರೆ. ಇದು ರೈತರ ಸಂಸ್ಥೆ ಆಗಿರುವುದರಿಂದ ಕಡಿಮೆ ಬಾಡಿಗೆಗೆ ಜಾಗ ನೀಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ಸ್ಥಳ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
11ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪಿಸಲು ಟೆಂಡರ್ ಪಡೆದಿದ್ದು, ಟೆಂಡರ್‌ನಲ್ಲಿ ಭಾಗವಹಿಸದ ಕೆಎಂಎಫ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಿಗರ ಒತ್ತಾಯದ ಬಳಿಕ ಎಂಟು ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿತ್ತು.
ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಮಾರುಕಟ್ಟೆಗೆ
ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಅನ್ನು ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗದಲ್ಲಿ ಬಳಸಲು ಸೂಚಿಸಲಾಗಿದೆ. ಪಾಕೆಟ್ ತಯಾರಿಕಾ ವೆಚ್ಚ ಹೆಚ್ಚಾಗಿದ್ದು, ರಾಜ್ಯಮಟ್ಟದಲ್ಲಿ ಚರ್ಚೆ ಮಾಡಬೇಕಿದೆ. ಬಮುಲ್ ಮಾರುಕಟ್ಟೆ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ಯಾವ ಸ್ಥಳ ಸೂಕ್ತ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಬೆಂಗಳೂರಿನ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಪರಿಸರ ಸ್ನೇಹಿ ಪಾಕೆಟ್ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಹಾಲಿನ ಪ್ಯಾಕೆಟ್‌ನಿಂದ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ
"ಪರಿಸರ ಸ್ನೇಹಿ ಪಾಕೆಟ್ ತಯಾರಿಕೆ ದುಬಾರಿಯಾದರೂ ಪರಿಸರ ರಕ್ಷಣೆಯತ್ತ ದೊಡ್ಡ ಹೆಜ್ಜೆ ಇಡಲಾಗುವುದು. ರಾಜ್ಯದಲ್ಲಿ ಅತಿಹೆಚ್ಚು ಹಾಲಿನ ಪ್ಯಾಕೆಟ್ ಗಳಿಂದಲೇ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ನಿತ್ಯ ಕೋಟ್ಯಂತರ ಪ್ಲಾಸ್ಟಿಕ್ ಕವರ್ ಗಳು ತ್ಯಾಜ್ಯವಾಗಿ ಬೀಳುತ್ತಿವೆ. ಇವುಗಳನ್ನು ಕೊಳೆಯುವಂತೆ ಮಾಡುವ ವ್ಯವಸ್ಥೆ ಮಾಡುವುದು ನಮ್ಮ ಚಿಂತನೆ. ಈ ಪ್ರಾಯೋಗಿಕ ಪ್ರಯತ್ನದ ನಂತರ ಸರ್ಕಾರದ ಮುಂದೆ ಈ ಪ್ರಸ್ತಾಪ ಇಟ್ಟು ಮಾರುಕಟ್ಟೆಗೆ ಪರಿಚಯಿಸಲಾಗುವುದು” ಎಂದು ತಿಳಿಸಿದರು.
ಸಲಹೆ ಸ್ವೀಕಾರ
“ಬೆಂಗಳೂರು ಹಾಲು ಒಕ್ಕೂಟದಲ್ಲಿ ಚನ್ನಪಟ್ಟಣ ಅತಿಹೆಚ್ಚು ಹಾಲು ಉತ್ಪಾದಿಸುತ್ತಿದೆ. ಇಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲಾ 14 ನಿರ್ದೇಶಕರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಒಕ್ಕೂಟದ ಬೆಳವಣಿಗೆಗೆ ಹಾಗೂ ರೈತ ಹಿತ ಕಾಯಲು ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿದ್ದೇವೆ. ಹೀಗಾಗಿ ಆಡಳಿತ ವರ್ಗ, ಹಾಲು ಮಂಡಳಿಯ ಸಲಹೆ, ಮಾರ್ಗದರ್ಶನ ಪಡೆಯಲಾಗುವುದು ಎಂದು ಹೇಳಿದರು.
ಶಾಸಕರ ಸಭೆ ಮಾಡಲು ಮುಖ್ಯಮಂತ್ರಿಗಳಿಗೆ ಪರಮೋಚ್ಛ ಅಧಿಕಾರವಿದೆ. ಶಾಸಕರ ಸಮಸ್ಯೆ ಆಲಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಾಸಕರ ಅಹವಾಲು ಸ್ವೀಕರಿಸುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ ಎಂದರು.
ಯೂರಿಯಾ ಪೂರೈಕೆ ಕೇಂದ್ರದ ಜವಾಬ್ದಾರಿ
“ಯೂರಿಯಾ ಉತ್ಪಾದನೆ ಮಾಡುವುದು ರಾಜ್ಯ ಸರ್ಕಾರವಲ್ಲ. ಕೇಂದ್ರ ಸರ್ಕಾರ ಜವಾಬ್ದಾರಿ ಹೊತ್ತಿದ್ದು, ರಾಜ್ಯ ಸರ್ಕಾರದ ಮೇಲೆ ಆರೋಪ ಹಾಕುವ ಬದಲು ತಮ್ಮ ಜವಾಬ್ದಾರಿ ಅರಿತು ಆದಷ್ಟು ಬೇಗ ರಸಗೊಬ್ಬರ ಪೂರೈಸಬೇಕು. ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಚಿವರು ದೆಹಲಿಯಲ್ಲಿ ಸಿಗುತ್ತಾರೆ. ಹೀಗಾಗಿ ರಾಜ್ಯದ ಸಂಸದರು ಸಚಿವರ ಜತೆ ಸಭೆ ನಡೆಸಿ ಆದಷ್ಟು ಬೇಗ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು" ಎಂದು ತಿಳಿಸಿದರು.