
ಯೂರಿಯಾ
ಕರ್ನಾಟಕದಲ್ಲಿ ʼರಸಗೊಬ್ಬರʼ ರಾಜಕೀಯ; ಡಿಎಪಿ, ಯೂರಿಯಾ ಕೊರತೆ ನಿಜವೇ?
ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಆದರೆ, ಈ ಬಾರಿ ಉತ್ತಮ ಮಳೆಯಿಂದಾಗಿ ಬೇಗನೇ ಬಿತ್ತನೆ ಪ್ರಗತಿಯಲ್ಲಿದೆ. ಜತೆಗೆ ವಿಸ್ತೀರ್ಣವೂ ಹೆಚ್ಚಾಗಿದೆ. ಹಾಗಾಗಿ ರಸಗೊಬ್ಬರದ ಕೊರತೆ ಎದುರಾಗಿದೆ.
ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಆರಂಭವಾಗುತ್ತಿದ್ದಂತೆ ʼರಸಗೊಬ್ಬರʼಕ್ಕಾಗಿ ರೈತರ ಪರದಾಟ ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಯಾಗಿ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ.
ರಾಜ್ಯಕ್ಕೆ ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವರನ್ನು ಒತ್ತಾಯಿಸಿದರೆ, ರಾಜ್ಯ ಬಿಜೆಪಿ ನಾಯಕರು ಮಾತ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರ ನೀಡುತ್ತಿರುವ ರಸಗೊಬ್ಬರವನ್ನು ರಾಜ್ಯ ಸರ್ಕಾರ ಸರಿಯಾಗಿ ಹಂಚದೇ ಅಭಾವ ಸೃಷ್ಟಿಸುತ್ತಿದೆ ಎಂದು ದೂರಿದ್ದಾರೆ.
ದಿಢೀರ್ ಬೇಡಿಕೆ ಹೆಚ್ಚಲು ಕಾರಣವೇನು?
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ರೈತರು ಅವಧಿಗಿಂತ ಮುಂಚೆ ಬಿತ್ತನೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಆದರೆ, ಈ ಬಾರಿ ಉತ್ತಮ ಮಳೆಯಿಂದಾಗಿ ಬೇಗನೇ ಬಿತ್ತನೆ ಪ್ರಗತಿಯಲ್ಲಿದೆ. ಜತೆಗೆ ವಿಸ್ತೀರ್ಣವೂ ಹೆಚ್ಚಾಗಿದೆ.
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೆಲವೆಡೆ ಅತಿ ಹೆಚ್ಚು ರಸಗೊಬ್ಬರ ಬೇಡುವ ಮುಸುಕಿನ ಜೋಳದ ಬೆಳೆಯ ವಿಸ್ತೀರ್ಣ ಅಂದಾಜು 2ಲಕ್ಷ ಹೆಕ್ಟೇರ್ ಹೆಚ್ಚಳವಾಗಿದೆ. ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಅಂದಾಜು 13ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮರು ಬಿತ್ತನೆ ನಡೆದಿದೆ.
ತುಂಗಭದ್ರಾ, ಕೃಷ್ಣಾ, ಕಾವೇರಿ ಇತ್ಯಾದಿ ಜಲಾಶಯಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನಿಗದಿತ ಅವಧಿಗೂ ಮುಂಚೆ ನೀರು ಹರಿಸಿರುವುದರಿಂದ ಅವಧಿಗೂ ಮುನ್ನ ನಾಟಿ ಕಾರ್ಯ ಕೈಗೊಳ್ಳಲಾಗಿದೆ. ಇದು ಕೂಡ ಯೂರಿಯಾ ಮತ್ತು ಇತರೆ ರಸಗೊಬ್ಬರಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.
ಕೇಂದ್ರದ ಹಂಚಿಕೆ ಎಷ್ಟು?
ರಾಜ್ಯದಲ್ಲಿ ಏಪ್ರಿಲ್‌ನಿಂದ ಜುಲೈವರೆಗೆ 6,80,655 ಟನ್ ಯೂರಿಯಾಗೆ ಬೇಡಿಕೆಯಿತ್ತು, ಕೇಂದ್ರವು 6,82,500 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದ್ದು, ಅದರಲ್ಲಿ 5,26,817 ಮೆಟ್ರಿಕ್ ಟನ್ ಪೂರೈಸಲಾಗಿದೆ. ಉಳಿದ ಯೂರಿಯಾ ಸರಬರಾಜು ಬಾಕಿ ಇದೆ.
"ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಬೇಡಿಕೆ ಕಡಿಮೆಯಿರುವ ಜಿಲ್ಲೆಗಳಿಂದ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಗೊಬ್ಬರ ವರ್ಗಾವಣೆ ಮಾಡಿ ಸರಿದೂಗಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಡಿಎಪಿ ಕೊರತೆ; ಪರ್ಯಾಯ ಗೊಬ್ಬವಾಗಿ ಕಾಂಪ್ಲೆಕ್ಸ್
ರಾಜ್ಯದಲ್ಲಿ ಡಿಎಪಿ (ಡೈಅಮೋನಿಯಂ ಫಾಸ್ಫೇಟ್) ಕೊರತೆ ಸಾಕಾಷ್ಟಿದೆ. ಇಫ್ಕೊ ಹಾಗೂ ಮಂಗಳೂರು ಕೆಮಿಕಲ್ ಅಂಡ್ ಫರ್ಟಿಲೈಸರ್ ಕಂಪೆನಿ ಪೂರೈಸುವ ಮಂಗಳ ಡಿಎಪಿ ರಸಗೊಬ್ಬರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪೂರೈಕೆಯಾಗಲಿದೆ. ಆದರೆ, ಈ ವರ್ಷ ಡಿಎಪಿ ಉತ್ಪಾದನೆ ಕ್ಷೀಣಿಸಿದ್ದು, ಬಿತ್ತನೆಗೆ ಕಾಂಪ್ಲೆಕ್ಸ್ ರಸಗೊಬ್ಬರ ಬಳಸುವಂತೆ ಕೇಂದ್ರ ಸರ್ಕಾರವೇ ಸಲಹೆ ನೀಡುತ್ತಿದೆ.
ಕರ್ನಾಟಕದ ಮಣ್ಣಿನಲ್ಲಿ ಪೊಟಾಷ್ ಅಂಶ ಕೊರತೆ ಇದೆ. ಈ ಕೊರತೆಯನ್ನು ಸರಿದೂಗಿಸಲು ಡಿಎಪಿ ಬದಲಿಗೆ ಕಾಂಪ್ಲೆಕ್ಸ್ ಬಳಸುವಂತೆ ರಸಗೊಬ್ಬರ ಮಾರಾಟ ಮಳಿಗೆಗಳು, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರಿಗೆ ಹೇಳುತ್ತಿದ್ದಾರೆ ಎಂದು ದೊಡ್ಡಬಳ್ಳಾಪುರದ ಬಸವೇಶ್ವರ ಆಗ್ರೋ ಫರ್ಟಿಲೈಸರ್ ಮಳಿಗೆ ಮಾಲೀಕ ಸುಬ್ಬೇಗೌಡ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಇತ್ಯಾದಿ ಕಡೆಗಳಿಂದ ರೈತರು ರಸಗೊಬ್ಬರ ಖರೀದಿಗೆ ಬರುತ್ತಾರೆ. ನಮ್ಮಲ್ಲಿ ಈಗಾಗಲೇ ಬಿತ್ತನೆ ಭಾಗಶಃ ಮುಗಿದಿದೆ. ಡಿಎಪಿ ಬದಲಿಗೆ ಕಾಂಪ್ಲೆಕ್ಸ್ ವಿತರಿಸಿದ್ದೇವೆ. ಸೆಪ್ಟೆಂಬರ್ ತಿಂಗಳಲ್ಲಿ ಯೂರಿಯಾ ಅಗತ್ಯವಿದೆ. ರಾಗಿ ಬೆಳೆ ಸಮೃದ್ಧವಾಗಿ ಬೆಳೆಯಲು ಯೂರಿಯಾ ಅಗತ್ಯವಾಗಿದೆ. ಆದರೆ, ರೈತರು ಮುಂದೆ ಸಿಗುತ್ತದೋ, ಇಲ್ಲವೋ ಎಂಬ ಆತಂಕದಿಂದ ಮುಂಗಡವಾಗಿ ಖರೀದಿಸುತ್ತಿದ್ದಾರೆ. ದಿನಕ್ಕೆ 200 ಟನ್ ಯೂರಿಯಾ ಮಾರಾಟವಾಗುತ್ತಿದೆ ಎಂದು ಹೇಳಿದರು.
ಅಲಭ್ಯತೆಯ ಭೀತಿಯಿಂದ ಮುಂಗಡ ಖರೀದಿ
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬೃಹತ್ ಪ್ರಮಾಣದ ರಸಗೊಬ್ಬರ ಖರೀದಿ ನಡೆಯಲಿದೆ. ಆದರೆ, ಹಲವು ರೈತರು ಮುಂಗಡವಾಗಿಯೇ ಖರೀದಿಸಿದ್ದರಿಂದ ಯೂರಿಯಾಗೆ ಕೃತಕ ಅಭಾವ ಸೃಷ್ಟಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಕಂಡು ಬಂದಿಲ್ಲ. ಆದರೆ, ಡಿಎಪಿಗೆ ಬೇಡಿಕೆ ಹೆಚ್ಚಿದ್ದರೂ ಅದರ ಬದಲಿಗೆ ಕಾಂಪ್ಲೆಕ್ಸ್ ನೀಡುತ್ತಿರುವುದರಿಂದ ಸಮಸ್ಯೆಯಾಗಿಲ್ಲ. ಈ ವರ್ಷ ಮುಂಗಾರು ಬಿತ್ತನೆಗಾಗಿ ಸುಮಾರು 70 ಟನ್ ಡಿಎಪಿಗೆ ಬೇಡಿಕೆ ಬಂದಿದೆ. ಆದರೆ, ಸರ್ಕಾರ ಕೇವಲ 25 ಟನ್ ಮಾತ್ರ ಪೂರೈಸಿದೆ. ನಾವು ರೈತರಿಗೆ ಕಾಂಪ್ಲೆಕ್ಸ್ ಬಳಸುವಂತೆ ಶಿಫಾರಸು ಮಾಡುತ್ತಿದ್ದೇವೆ ಎಂದು ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿಯಲ್ಲಿರುವ ರಸಗೊಬ್ಬರ ಅಂಗಡಿ ಮಾಲೀಕ ಅಶೋಕ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ನ್ಯಾನೋ ಯೂರಿಯಾ ಬಳಕೆಗೆ ರೈತರ ಹಿಂದೇಟು
ಯೂರಿಯಾ ಅಭಾವ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ನ್ಯಾನೋ ಯೂರಿಯಾ ಬಳಕೆಗೆ ಉತ್ತೇಜನ ನೀಡುತ್ತಿದೆ. ಆದರೆ, ಬಹುತೇಕ ರೈತರು ನ್ಯಾನೋ ಯೂರಿಯಾ ಬಳಕೆಗೆ ಹಿಂದೇಟು ಹಾಕುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ.
ದ್ರವರೂಪದ ನ್ಯಾನೋ ಯೂರಿಯಾದಿಂದ ಸಾಕಷ್ಟು ಅನುಕೂಲಗಳಿವೆ. ಮಣ್ಣಿನ ಫಲವತ್ತತೆಯೂ ಉಳಿಯಲಿದೆ. ಈ ಬಗ್ಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ಜಾಗೃತಿ ಮೂಡಿಸುತ್ತಿದ್ದರೂ ರೈತರು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಇದೂ ಕೂಡ ಯೂರಿಯಾ ಬೇಡಿಕೆ ದುಪ್ಪಟ್ಟಾಗಿದೆ. ದಕ್ಷಿಣ ಕರ್ನಾಟಕದಲ್ಲಿ ರಸಗೊಬ್ಬರ ಕೊರತೆಯಿಲ್ಲ. ಉತ್ತರ ಕರ್ನಾಟಕದಲ್ಲಿ ಮಾತ್ರ ಕೊರತೆ ಕಂಡು ಬಂದಿದೆ ಎಂದು ಎಂದು ಸುಬ್ಬೇಗೌಡ ತಿಳಿಸಿದರು.
ಕಾಳಸಂತೆಯಲ್ಲಿ ಮಾರಾಟ ಆರೋಪ
ಕೆಲವು ರಸಗೊಬ್ಬರ ಮಾರಾಟ ಮಳಿಗೆಗಳು ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿವೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ರಾಗಿ ಬಿತ್ತನೆಗೆ ಡಿಪಿಎ ರಸಗೊಬ್ಬರ ಅತ್ಯಗತ್ಯವಾಗಿದೆ. ಮಾರಾಟ ಮಳಿಗೆಗಳಲ್ಲಿ ಖರೀದಿಸಲು ಹೋದರೆ ಸ್ಟಾಕ್ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ವಾಮಮಾರ್ಗದಲ್ಲಿ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ನಾಗಾರ್ಜುನ ʼದ ಫೆಡರಲ್ ಕರ್ನಾಟಕʼಕ್ಕೆ ದೂರಿದರು.
ರಸಗೊಬ್ಬರ ಮಾರಾಟ ಮಳಿಗೆಯಲ್ಲಿ 50 ಕೆ.ಜಿ. ತೂಕದ ಡಿಎಪಿ ಚೀಲದ ಬೆಲೆ ಸುಮಾರು 1,350 ರಿಂದ 1,550 ಇದೆ. ಆದರೆ, ಕೆಲವರು ಕಾಳಸಂತೆಯಲ್ಲಿ 1800 ರೂ.ಗಳಂತೆ ಮಾರಾಟ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ಹೆಚ್ಚುವರಿ ಹಣ ಭರಿಸಿ, ಖರೀದಿಸಬೇಕಾಗಿದೆ. ಕಾಂಪ್ಲೆಕ್ಸ್ ಹಾಕುವುದರಿಂದ ಇಳುವರಿ ಉತ್ತಮವಾಗಿ ಬರುವುದಿಲ್ಲ ಎಂದು ಹೇಳಿದರು.
ರಸಗೊಬ್ಬರ ಕೊರತೆ ಇಲ್ಲ
ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕ ಪರಿಗಣಿಸದೇ ಯೂರಿಯಾ ಸೇರಿ ಎಲ್ಲಾ ರಸಗೊಬ್ಬರಗಳನ್ನು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮತ್ತು ಸರಬರಾಜು ಮಾಡಲಾಗಿದೆ. ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಕಂಡು ಇಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.
ಬೆಳೆ ಪದ್ಧತಿ ಆಧರಿಸಿ ಮುಂಗಾರು ಹಂಗಾಮಿಗೆ ಮುಂಚಿತವಾಗಿ ಕೇಂದ್ರ ಸರ್ಕಾರಕ್ಕೆ 12.95 ಲಕ್ಷ ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರದಿಂದ 11.17 ಲಕ್ಷ ಮೆಟ್ರಿಕ್ ಟನ್ ಹಂಚಿಕೆಯಾಗಿದೆ. ಏಪ್ರಿಲ್ ನಿಂದ ಜುಲೈ ಹಂಚಿಕೆಯಾದ ಒಟ್ಟು ಡಿಎಪಿಯಲ್ಲಿ 81,000 ಮೆಟ್ರಿಕ್ ಟನ್ ಸರಬರಾಜು ಬಾಕಿ ಇದೆ. ಇದರಿಂದ ಪರ್ಯಾಯ ರಸಗೊಬ್ಬರಗಳ ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸಗೊಬ್ಬರ ಪೂರೈಕೆಗೆ ಆರು ಬಾರಿ ಮನವಿ
ರಸಗೊಬ್ಬರ ಪೂರೈಕೆಗೆ ಒತ್ತಾಯಿಸಿ ಕೃಷಿ ಇಲಾಖೆಯಿಂದ ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ ಆರು ಬಾರಿ ಪತ್ರಗಳನ್ನು ಬರೆದು ಅವಶ್ಯವಿರುವ ಡಿ.ಎ.ಪಿ ಮತ್ತು ಯೂರಿಯಾ ಪೂರೈಕೆಗೆ ಮನವಿ ಮಾಡಲಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರವು ಬೇಡಿಕೆಗೆ ಅನುಗುಣವಾಗಿ ಯೂರಿಯಾ ರಸಗೊಬ್ಬರ ಪೂರೈಸದಿರುವುದು ಅಲ್ಲಲ್ಲಿ ಯೂರಿಯಾ ಕೊರತೆಗೆ ಕಾರಣವಾಗಿದೆ. ಈ ಸಂಬಂಧ ರೈತರು ವಿವಿಧ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರದ ಪೂರೈಸಲು ಅಹವಾಲು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಆರಂಭಿಕ ಶುಲ್ಕ ಪರಿಗಣಿಸದೆ ಕೊರತೆಯಾಗಿರುವ 81 ಸಾವಿರ ಮೆಟ್ರಿಕ್ ಟನ್ ಡಿಎಪಿ ಮತ್ತು 1,45,000 ಮೆಟ್ರಿಕ್ ಟನ್ ಯೂರಿಯಾ ಪೂರೈಸಿದಲ್ಲಿ ರೈತರ ಬವಣೆ ನೀಗಿಸಬಹುದು ಎಂದು ಕೃಷಿ ಇಲಾಖೆ ಹೇಳಿದೆ.