ನಟ ಪ್ರಥಮ್ ಮೇಲೆ ಹಲ್ಲೆ; ದರ್ಶನ್ ಅಭಿಮಾನಿಗಳ ವಿರುದ್ಧ ಎಫ್‌ಐಆರ್, ಗೂಂಡಾವರ್ತನೆಗೆ ಆಕ್ರೋಶ
ದೊಡ್ಡಬಳ್ಳಾಪುರದಲ್ಲಿ ಬಿಗ್‌ಬಾಸ್ ವಿನ್ನರ್ ಮೇಲೆ ಹಲ್ಲೆ ನಡೆಸುವ ಮೂಲಕ ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.;
ಬಿಗ್‌ಬಾಸ್ ಸೀಸನ್-4 ವಿಜೇತ ಪ್ರಥಮ್ ಮೇಲೆ ನಟ ದರ್ಶನ್ ಅಭಿಮಾನಿಗಳು ಹಲ್ಲೆ ನಡೆಸಿರುವ ಪ್ರಕರಣ ಹೊಸ ವಿವಾದವನ್ನು ಸೃಷ್ಟಿಸಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಮಾತನಾಡುವವರ ಮೇಲೆ ದರ್ಶನ್ ಅಭಿಮಾನಿಗಳು ಗೂಂಡಾವರ್ತನೆ ಹಾಗೂ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಚಿತ್ರರಂಗದಲ್ಲಿ ಆತಂಕ ಮೂಡಿಸಿದೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದಿದ್ದ ನಟಿ ರಮ್ಯಾ ವಿರುದ್ಧ ಇತ್ತೀಚೆಗಷ್ಟೇ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಆರಂಭಿಸಿದ್ದರು. ದರ್ಶನ್ ಅಭಿಮಾನಿಗಳ ಈ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ದೊಡ್ಡಬಳ್ಳಾಪುರದಲ್ಲಿ ಬಿಗ್‌ಬಾಸ್ ವಿನ್ನರ್ ಮೇಲೆ ಹಲ್ಲೆ ನಡೆಸುವ ಮೂಲಕ ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಥಮ್ ಹೇಳಿಕೆ ನೀಡಿದ್ದೇ ಈ ಹಲ್ಲೆಗೆ ಕಾರಣ ಎಂಬುದು ಆತಂಕದ ವಿಚಾರವಾಗಿದೆ.
ಏನಿದು ಘಟನೆ ?
ಜು.22ರಂದು ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಸಮೀಪದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ನಟ ಪ್ರಥಮ್ ಬಂದಿದ್ದರು. ಈ ವೇಳೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರು ಪ್ರಥಮ್ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವಕೀಲ ಜಗದೀಶ್ ಗಂಭೀರ ಆರೋಪ ಮಾಡಿದ್ದರು.
ಈ ಸಂಬಂಧ ವಕೀಲ ಜಗದೀಶ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಜೊತೆಗೆ ಪ್ರಥಮ್ ಜೊತೆ ಜಗದೀಶ್ ಮಾತನಾಡಿರುವ ದೂರವಾಣಿ ಕರೆಯ ಆಡಿಯೊ ಕೂಡ ವೈರಲ್ ಆಗಿತ್ತು. ಘಟನೆ ನಡೆದು ಏಳು ದಿನಗಳ ನಂತರ ಪ್ರಥಮ್ ನೇರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರನ್ನು ಮಂಗಳವಾರ ಭೇಟಿಯಾಗಿ ದೂರು ನೀಡಿದ್ದರು.
ಈ ದೂರಿನ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ, ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ BNS u/s 351(2)(3), 352,126(2) r/w 3(5) ಅಡಿ ಪ್ರಕರಣ ದಾಖಲಾಗಿದೆ.
ಪ್ರಥಮ್ ನೀಡಿದ ದೂರಿನಲ್ಲೇನಿದೆ?
ಜು.22ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್ ದೊಡ್ಡಬಳ್ಳಾಪುರದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದರು. ಅಂದು ಪೂಜೆ ಮುಗಿಸಿ ಮಧ್ಯಾಹ್ನ ಸುಮಾರು 3.50 ರ ಸುಮಾರಿಗೆ ವಾಪಸ್ ಬರುವಾಗ ಯಶಸ್ಸಿನಿ ಮತ್ತು ಬೇಕರಿ ರಘು ಇತರರು ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ ಕರೆದೋಯ್ದರು. (ಗ್ರಾಮದ ಹೆಸರು ತಿಳಿದಿಲ್ಲ. ಸ್ಥಳವನ್ನು ಗುರುತಿಸುತ್ತೇನೆ). ನಮ್ಮ ಬಾಸ್( ದರ್ಶನ್) ಬಗ್ಗೆ ಮಾತನಾಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಳಿಕ ಡ್ರ್ಯಾಗರ್ ಮತ್ತು ಚಾಕುವಿನಿಂದ ಚುಚ್ಚುವುದಾಗಿ ಭಯಪಡಿಸಿದರು. ಇವರು ನನ್ನ ಬಳಿ ಗಲಾಟೆ ಮಾಡುವಾಗ ಜೈಲಿನಲ್ಲಿ ದರ್ಶನ್ ಜೊತೆ ಇದ್ದ ಬ್ಯಾರಕ್ ಪೋಟೋ ತೋರಿಸಿದರು ಎಂದು ಪ್ರಥಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಹಳ ಉಪಾಯದಿಂದ ಅಲ್ಲಿಂದ ಪಾರಾಗಿ ಬಂದೆ. ದರ್ಶನ್ ಅಭಿಮಾನಿಗಳು ಗಲಾಟೆ ಮಾಡಿದ ವಿಚಾರಕ್ಕೆ ನನ್ನ ಜೊತೆಗಿದ್ದ ಸ್ನೇಹಿತರಾದ ಮಹೇಶ್, ಪ್ರಮೋದ್ ಮತ್ತು ಚಾಲಕ ಪ್ರಕಾಶ್ ಖುದ್ದು ಸಾಕ್ಷಿಯಾಗಿದ್ದಾರೆ. ದರ್ಶನ್ ಅಭಿಮಾನಿಗಳಿಂದ ನನಗೆ ಜೀವ ಭಯವಿರುವುದರಿಂದ ರಕ್ಷಣೆ ನೀಡಬೇಕು. ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
ದರ್ಶನ್ ಫ್ಯಾನ್ ಪೇಜ್‌ಗಳಿಂದ ತೇಜೋವಧೆ
ಜು.28 ರಿಂದ ಇಲ್ಲಿಯವರೆಗೂ ನಟ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್‌ಗಳಾದ ಡಿ-ಡೈನಾಸ್ಟಿ, ಡಿ-ಕಿಂಗ್ ಡಮ್, ಡಿ-ಯೂನಿವರ್ಸ್ ಮತ್ತು ಡೆವಿಲ್ ಕಿಂಗ್ ಡಮ್ ಸೇರಿದಂತೆ 500 ಕ್ಕೂ ಹೆಚ್ಚು ಪೇಜ್ ಗಳಿಂದ ನನ್ನ ವೈಯಕ್ತಿಕ ತೇಜೋವಧೆ ನಡೆಯುತ್ತಿದೆ. ಮಾನಹರಣ ಮಾಡುತ್ತಿರುವ ಫ್ಯಾನ್ ಪೇಜ್‌ಗಳ ವಿರುದ್ಧವೂ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಥಮ್, ರಕ್ಷಕ್ ಬುಲೆಟ್
ದೊಡ್ಡಬಳ್ಳಾಪುರ ನಗರದಿಂದ ಕೇವಲ ಒಂದು ಕಿ.ಮೀ.ವ್ಯಾಪ್ತಿಯಲ್ಲಿರುವ ರಾಮಯ್ಯನಪಾಳ್ಯದ ಕೆರೆಯ ಪಕ್ಕದಲ್ಲಿ ಬೆಂಗಳೂರಿನ ಖಾಸಗಿ ವ್ಯಕ್ತಿಯೊಬ್ಬರು ಜಮೀನು ಖರೀದಿಸಿ ರೇಣುಕಾ ಯಲ್ಲಮ್ಮ ದೇವಾಲಯ ನಿರ್ಮಾಣ ಮಾಡಿದ್ದಾರೆ.
ಜುಲೈ 22 ರಂದು ನಟ ಪ್ರಥಮ್, ರಕ್ಷಕ್ ಬುಲೆಟ್ ಸೇರಿ ಹಲವರು ಊಟಕ್ಕೆ ಬಂದಿದ್ದರು. ಇನ್ನೂ ಈ ದೇವಾಲಯ ಊರ ಹೊರಗೆ ಇರುವುದರಿಂದ ಅಷ್ಟೇನು ಜನರಿಗೆ ಕಾಣಿಸುವುದಿಲ್ಲ. ಮನೆಯ ಮುಂದೆ ವಾಹನಗಳು ದೇವಾಲಯದ ಬಳಿಗೆ ಹೋಗಿದ್ದನ್ನು ಕೆಲವು ಜನ ನೋಡಿದ್ದಾರೆ. ಆದರೆ, ಘಟನೆ ಕುರಿತು ಯಾರೂ ಕೂಡ ನೋಡಿಲ್ಲ ಎಂದು ಗ್ರಾಮಸ್ಥ ನಾರಾಯಣಪ್ಪ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಆರೋಪಿಗಳ ಬಂಧನಕ್ಕೆ ವಿಶೇಷ ತಂಡ
ನಟ ಪ್ರಥಮ್ ಅವರು ಎಸ್ಪಿ ಕಚೇರಿಗೆ ದೂರು ನೀಡಿದ ಕೂಡಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಹಾಗಾಗಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಇಂದು ಅಥವಾ ನಾಳೆ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಸ್ಥಳ ಮಹಜರು ನಡೆಯಲಿದ್ದು, ಸಾಕ್ಷಾಧಾರ ಸಂಗ್ರಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ನಟ ಪ್ರಥಮ್ ಹೇಳಿಕೆ ನೀಡಿದಾಗಿನಿಂದಲೂ ಪ್ರಥಮ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ದರ್ಶನ್ ಕುರಿತು ಹೇಳಿಕೆಯೇ ಈ ಘಟನೆಗೆ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಅಭಿಮಾನಿಗಳ ದುರ್ವರ್ತನೆಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.