ಶೀಘ್ರವೇ ʼಕೈಗಾರಿಕಾ ನೀರು ಭದ್ರತಾ ಕಾಯ್ದೆʼ ರಚನೆ: ಸಚಿವ ಎಂ.ಬಿ. ಪಾಟೀಲ್
ನೀರು ಪೂರೈಕೆ ಯೋಜನೆಯಡಿ ಉದ್ಯಮಗಳಿಗೆ ಶೇ. 50ರಷ್ಟು ನೀರನ್ನು ನಾವು ಪೂರೈಸುತ್ತೇವೆ. ಉಳಿದ ಶೇ. 50ರಷ್ಟು ನೀರನ್ನು ಕೈಗಾರಿಕೆಗಳೇ ಸಂಸ್ಕರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು.;
ಸಭೆಯಲ್ಲಿ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು.
ಡೇಟಾ ಸೈನ್ಸ್, ತಯಾರಿಕಾ ಸ್ಥಾವರಗಳು ಸೇರಿ ಕೈಗಾರಿಕೆಗಳು ಬೆಳೆಯಬೇಕೆಂದರೆ ವಿದ್ಯುತ್ ಮತ್ತು ನೀರಿನ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ʻಕೈಗಾರಿಕಾ ನೀರು ಭದ್ರತಾ ಕಾಯ್ದೆʼ ರೂಪಿಸುವ ಮತ್ತು ಕೈಗಾರಿಕಾ ಮರುಬಳಕೆ ವಿದ್ಯುತ್ ಉತ್ಪಾದನಾ ಪಾರ್ಕ್ ಸ್ಥಾಪಿಸುವ ಅಗತ್ಯವಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಬುಧವಾರ ಬೆಂಗಳೂರಿನ ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ಅನಿಲದಿಂದ ವಿದ್ಯುತ್ ತಯಾರಿಸುವ ನಿಟ್ಟಿನಲ್ಲಿ ಗಂಭೀರವಾದ ಚರ್ಚೆ ಅಗತ್ಯವಿದೆ. ಈ ಸಂಬಂಧ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರು ಪೂರೈಕೆ ಯೋಜನೆಯಡಿ ಉದ್ಯಮಗಳಿಗೆ ಶೇ. 50ರಷ್ಟು ನೀರನ್ನು ನಾವು ಪೂರೈಸುತ್ತೇವೆ. ಉಳಿದ ಶೇ. 50ರಷ್ಟು ನೀರನ್ನು ಕೈಗಾರಿಕೆಗಳೇ ಸಂಸ್ಕರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲು ಈಗಾಗಲೇ 2,500 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಅಂತಹ ಮಾದರಿಯ ಸಾಧ್ಯತೆಗಳ ಬಗ್ಗೆ ಗಂಭೀರ ಆಲೋಚನೆ ನಡೆದಿದೆ ಎಂದು ಮಾಹಿತಿ ನೀಡಿದರು.
ಉದ್ದೇಶಿತ ಬಾಹ್ಯಾಕಾಶ ಪಾರ್ಕ್, ವಿದ್ಯುನ್ಮಾನ ಬಿಡಿಭಾಗಗಳ ತಯಾರಿಕೆ ಪಾರ್ಕ್ ಮುಂತಾದ ಯೋಜನೆಗಳು ಸೇರಿದಂತೆ ಹಲವು ಮಹತ್ವದ ಉದ್ಯಮಗಳಿಗೆ ಸರ್ಕಾರ ಕೊಡುವ ರಿಯಾಯಿತಿಗಳ ಕುರಿತ ನೀತಿ ರೂಪಿಸಲಾಗುತ್ತಿದೆ. ಈ ಸಂಬಂಧ ಶೀಘ್ರವಾಗಿ ಕೈಗಾರಿಕಾ ಮತ್ತು ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವಿಸ್ತೃತ ಹೂಡಿಕೆ, ಪ್ರೋತ್ಸಾಹ ನೀತಿಗೆ ಸಂಬಂಧಿಸಿದ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಇದಾದ ಕೂಡಲೇ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದರು.
ಐಟಿ ಇಲಾಖೆಯು ಇಎಸ್‌ಡಿಎಂ ವಲಯಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹ ಕ್ರಮಗಳ ನೀತಿ ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಕೈಗಾರಿಕಾ ಇಲಾಖೆ ಕೂಡ ವಿದ್ಯುನ್ಮಾನ ತಯಾರಿಕೆ ವಲಯದಲ್ಲಿ ಹೂಡಿಕೆ ಆಕರ್ಷಣೆಗೆ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಕೆಲವೆಡೆಗಳಲ್ಲಿ ಒಂದೇ ಯೋಜನೆಗೆ ಐಟಿ ಮತ್ತು ಕೈಗಾರಿಕೆ ಇಲಾಖೆಗಳೆರಡೂ ರಿಯಾಯಿತಿ ಕೊಡುತ್ತಿದ್ದು, ಇದನ್ನು ಸರಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಶೇ. 44 ಸ್ಮಾರ್ಟ್‌ಫೋನ್ ಅಮೆರಿಕಕ್ಕೆ ರಫ್ತು
ಪ್ರಸ್ತುತ ನಮ್ಮಲ್ಲಿ ತಯಾರಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ. 44ರಷ್ಟು ಅಮೆರಿಕಕ್ಕೆ ರಫ್ತಾಗುತ್ತಿದೆ. ಮೊದಲು ಶೇ. 61ರಷ್ಟು ಪಾಲು ಹೊಂದಿದ್ದ ಚೀನಾದ ಪ್ರಮಾಣ ಈಗ ಶೇ. 25ಕ್ಕೆ ಕುಸಿದಿದೆ. ಆದರೆ, ವಿಯಟ್ನಾಂನ ಪಾಲು ಮಾತ್ರ ಶೇ. 50ರಷ್ಟಿದೆ. ಈ ಸ್ಪರ್ಧೆಯನ್ನು ಪರಿಗಣಿಸಿ ಬಂಡವಾಳವನ್ನು ಸೆಳೆಯಬೇಕಾಗಿದೆ. ಜತೆಗೆ ಸ್ಮಾರ್ಟ್‌ಫೋನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಈ ಕ್ಷೇತ್ರಕ್ಕೆ ಹಲವು ರಿಯಾಯಿತಿಗಳನ್ನು ಘೋಷಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಸ್ಪೇಸ್ ಪಾರ್ಕ್, ಪಿಸಿಬಿ ಪಾರ್ಕ್‌ಗೆ ಭೂಮಿ
ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ತಮ್ಮ ಇಲಾಖೆಯು ದೊಡ್ಡಬಳ್ಳಾಪುರ ಸಮೀಪದ ಆದಿನಾರಾಯಣ ಹೊಸಹಳ್ಳಿ ಅಥವಾ ಐಟಿಐಆರ್ ಪ್ರದೇಶದಲ್ಲಿ 100 ಎಕರೆಯಲ್ಲಿ ಸ್ಪೇಸ್ ಪಾರ್ಕ್, ಮೈಸೂರಿನ ಕೋಚನಹಳ್ಳಿ ಹಂತ-2ರಲ್ಲಿ 150 ಎಕರೆಯಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಪಾರ್ಕ್, ಕ್ವಿನ್ ಸಿಟಿ ಬಳಿ ಅಡಕವಾಳ ಮತ್ತು ಕೋನೇನಹಳ್ಳಿ ಎರಡೂ ಕಡೆಗಳಲ್ಲಿ ತಲಾ 100 ಎಕರೆಯಲ್ಲಿ ಗ್ಲೋಬಲ್ ಇನ್ನೋವೇಶನ್ ಸಿಟಿ, ಅಡಕವಾಳ ಅಥವಾ ಕೋನೇನಹಳ್ಳಿಯಲ್ಲಿ 100 ಎಕರೆಯಲ್ಲಿ ಕಿಯೋನಿಕ್ಸ್ ಪ್ಲಗ್ ಮತ್ತು ಪ್ಲೇ ಸೌಲಭ್ಯ ಕೇಂದ್ರದ ಅಭಿವೃದ್ಧಿ ಮೂಲಕ ʻಗ್ಲೋಬಲ್ ಕೇಪಬಿಲಿಟಿ ಸೆಂಟರ್ʼಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕಾಗಿ ಈ ಸ್ಥಳಗಳಲ್ಲಿ ಜಮೀನನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ರಾಜಧಾನಿ ಹೊರಗೆ ಡ್ರೋನ್ ಪರೀಕ್ಷಾ ಕೇಂದ್ರ
ಡ್ರೋನ್ ಪರೀಕ್ಷಾ ಕೇಂದ್ರವು ನಿರ್ಜನ ಪ್ರದೇಶದಲ್ಲಿ ಇರಬೇಕು ಎನ್ನುವ ನಿಯಮವಿದೆ. ಆದ್ದರಿಂದ ಬೆಂಗಳೂರಿನ ಭಾಗವೇ ಆಗಿರುವ ಹೆಸರಘಟ್ಟದಲ್ಲಿ ಈ ಯೋಜನೆ ಬರುವುದು ಕಷ್ಟವಾಗಬಹುದು. ಆದ್ದರಿಂದ ಇದಕ್ಕೆ ಸೂಕ್ತ ಜಾಗ ಹುಡುಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು.