‌KIADB LAND SCAM | ಬಿಜೆಪಿ ಹೇಳಿಕೆ ನಿರಾಕರಿಸಿದ ಸರ್ಕಾರ
x
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

‌KIADB LAND SCAM | ಬಿಜೆಪಿ ಹೇಳಿಕೆ ನಿರಾಕರಿಸಿದ ಸರ್ಕಾರ

ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ನಲ್ಲಿ ನಾಗರಿಕ ಸೌಕರ್ಯದ ಪ್ಲಾಟ್ ಹಂಚಿಕೆಯನ್ನು ಕೆಐಎಡಿಬಿ ನಿಯಮಗಳ ಪ್ರಕಾರ ಮಾಡಲಾಗಿದೆ


Click the Play button to hear this message in audio format

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸಂಬಂಧಿಸಿದ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ ಎಂಬ ಬಿಜೆಪಿ ಆರೋಪವನ್ನು ರಾಜ್ಯ ಸರ್ಕಾರ ತಳ್ಳಿಹಾಕಿದ್ದು,ನಿಯಮಗಳಿಗೆ ಅನುಗುಣವಾಗಿಯೇ ಭೂಮಿ ಹಂಚಿಕೆ ಮಾಡಲಾಗಿದೆ ಮತ್ತು ಬಿಜೆಪಿಯು ಅಧಿಕಾರದಲ್ಲಿದ್ದಾಗ ಇದೇ ರೀತಿಯ ಹಂಚಿಕೆಗಳನ್ನು ಮಾಡಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬ ನಡೆಸುತ್ತಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ ಕೆಐಎಡಿಬಿ ಜಮೀನು ಮಾಡಿರುವುದಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು ಪ್ರಶ್ನಿಸಿದ್ದು, ಈ ಆರೋಪದ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ನಲ್ಲಿ ನಾಗರಿಕ ಸೌಕರ್ಯದ ಪ್ಲಾಟ್ ಹಂಚಿಕೆಯನ್ನು ಕೆಐಎಡಿಬಿ ನಿಯಮಗಳ ಪ್ರಕಾರ ಮಾಡಲಾಗಿದೆ ಎಂದು ಪ್ರತಿಪಾದಿಸಿದರು.

ಸಿರೋಯಾ ಅವರ ನಿಯಮ ಉಲ್ಲಂಘನೆಯ ಆರೋಪವನ್ನು ತಳ್ಳಿಹಾಕಿದ ಪಾಟೀಲ್, ಆಧಾರರಹಿತ ಆರೋಪ ಮಾಡುವ ಮೊದಲು ಸತ್ಯಾಂಶವನ್ನು ಪರಿಶೀಲಿಸುವಂತೆ ಸಲಹೆ ನೀಡಿದರು. ಐಐಟಿ ಪದವೀಧರರಾಗಿರುವ ರಾಹುಲ್ ಅವರು ಮಂಜೂರು ಮಾಡಿದ ಭೂಮಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದಾರೆ ಎಂದು ಪಾಟೀಲ್ ಹೇಳಿದರು.

ಕೆಐಎಡಿಬಿ ನಿಯಮಗಳ ಅಡಿಯಲ್ಲಿ ಸಿಎ ನಿವೇಶನಗಳನ್ನು ಆರ್ ಮತ್ತು ಡಿ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು ಮತ್ತು ಇತರ ಸೌಲಭ್ಯಗಳ ಸ್ಥಾಪನೆ ಸೇರಿದಂತೆ ಬಹು ಉದ್ದೇಶಗಳಿಗಾಗಿ ಬಳಸಬಹುದು. ರಾಜ್ಯ ಮಟ್ಟದ, ಏಕ ಗವಾಕ್ಷಿ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಹಂಚಿಕೆ ಮಾಡಲಾಗಿದೆ ಮತ್ತು ಯಾವುದೇ ರಿಯಾಯಿತಿ ನೀಡಲಾಗಿಲ್ಲ ಎಂದು ಸಚಿವರು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರ ಆರ್‌ಎಸ್‌ಎಸ್‌ನ ಚಾಣಕ್ಯ ವಿಶ್ವವಿದ್ಯಾಲಯಕ್ಕೆ 116 ಎಕರೆ ಭೂಮಿಯನ್ನು 50 ಕೋಟಿ ರೂ.ಗೆ ಮಂಜೂರು ಮಾಡಿತ್ತು, ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 137 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ಲೆಹರ್‌ ಸಿಂಗ್ ಆರೋಪವೇನು?

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಹಂಚಿಕೆ ಮಾಡಿದ್ದ 45.94 ಎಕರೆ ಪೈಕಿ ಐದು ಎಕರೆ ಜಮೀನನ್ನು ಪರಿಶಿಷ್ಟ ಜಾತಿ ಕೋಟಾದಲ್ಲಿ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಮಂಜೂರು ಮಾಡಲಾಗಿದೆ. ಬೆಂಗಳೂರು ಸಮೀಪದ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ನಾಗರಿಕ ಸೌಲಭ್ಯಗಳಿಗೆ ಕಾದಿಟ್ಟ ಈ ಜಮೀನನ್ನು ಪರಿಶಿಷ್ಟ ಜಾತಿ ಕೋಟಾದಲ್ಲಿ ಮಂಜೂರು ಮಾಡಲಾಗಿದೆ. ಕುತೂಹಲಕಾರಿ ಅಂಶವೆಂದರೆ, ಟ್ರಸ್ಟ್‌ನಲ್ಲಿ ಸ್ವತಃ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ರಾಧಾಬಾಯಿ ಖರ್ಗೆ, ಅಳಿಯ ರಾಧಾಕೃಷ್ಣ, ಅವರ ಮಗ ಹಾಗೂ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ, ಮತ್ತೊಬ್ಬ ಪುತ್ರ ರಾಹುಲ್ ಖರ್ಗೆ ಟ್ರಸ್ಟಿಗಳಾಗಿದ್ದಾರೆ. ಇದು ಸ್ವಹಿತಾಸಕ್ತಿ ಸಂಘರ್ಷ, ಸ್ವಜನಪಕ್ಷಪಾತ, ಅಧಿಕಾರದ ದುರ್ಬಬಳಕೆ ಅಲ್ಲವೆ? ಎಂಬ ಪ್ರಶ್ನೆಗಳನ್ನು ಹುಟ್ಟಿಹಾಕಿದೆ ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.

Read More
Next Story