ಯೂರಿಯಾ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ; ಬಸವರಾಜ ಬೊಮ್ಮಾಯಿ ಆರೋಪ
ಸಾಮಾನ್ಯವಾಗಿ ಯೂರಿಯಾಗೆ ಜುಲೈ ನಿಂದ ಪ್ರಾರಂಭವಾಗಿ ಆಗಸ್ಟ್ ವರೆಗೂ ಬಹಳ ಬೇಡಿಕೆ ಇರುತ್ತದೆ.;
ಬಸವರಾಜ್ ಬೊಮ್ಮಾಯಿ
ಕರ್ನಾಟಕಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಹತ್ತು ದಿನಗಳಲ್ಲಿ ಪೂರೈಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಭರವಸೆ ನೀಡಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ಬುಧವಾರ ರಾಜ್ಯದ ಬಿಜೆಪಿ ಸಂಸದರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕದಲ್ಲಿ ರೈತರಿಗೆ ಸಕಾಲಕ್ಕೆ ಯೂರಿಯಾ ಸಿಗುತ್ತಿಲ್ಲ. ಇದು ದಿಢೀರ್ ಉದ್ಭವಿಸಿದ ಸಮಸ್ಯೆ ಅಲ್ಲ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಚೆನ್ನಾಗಿ ಬಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆಜೋಳ ಬಿತ್ತನೆ ಪ್ರದೇಶ ಈ ವರ್ಷ ಶೇ 1.5 ರಷ್ಟು ಹೆಚ್ಚಳವಾಗಿದೆ. ಅಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿರುವುದು ಕೃಷಿ ಇಲಾಖೆಗೆ ಗೊತ್ತಿದೆ. ಅದನ್ನು ಇಲಾಖೆ ಒಪ್ಪಿಕೊಂಡಿದೆ. ಸಾಮಾನ್ಯವಾಗಿ ಯೂರಿಯಾಗೆ ಜುಲೈ ನಿಂದ ಪ್ರಾರಂಭವಾಗಿ ಆಗಸ್ಟ್ ವರೆಗೂ ಬೇಡಿಕೆ ಇರುತ್ತದೆ. ಆದರೆ, ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಜೂನ್ ಮೂರನೇ ವಾರದಿಂದಲೇ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರು.
ಕೃಷಿ ಇಲಾಖೆ ವಿಫಲ
ಕೃಷಿ ಇಲಾಖೆಯು ಹವಾಮಾನ ಬದಲಾವಣೆ ತಿಳಿದುಕೊಂಡು ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ಕಳೆದ ವರ್ಷ ಎಷ್ಟು ಗೊಬ್ಬರ ಬಳಕೆಯಾಗಿತ್ತು ಅದನ್ನು ಲೆಕ್ಕ ಹಾಕಿ ಈ ವರ್ಷದ ಅಗತ್ಯತೆ ಅರಿತುಕೊಂಡು ದಾಸ್ತಾನು ಮಾಡಬೇಕಾಗಿತ್ತು. ಕೇಂದ್ರ ಸರ್ಕಾರ ಒದಗಿಸಿರುವ ಗೊಬ್ಬರವನ್ನು ಹಂಚುವ ಕೆಲಸ ರಾಜ್ಯ ಸರ್ಕಾರದ್ದು, ಕೇಂದ್ರ ಸರ್ಕಾರವು ಗೊಬ್ಬರವನ್ನು ರೈಲ್ವೆ ವ್ಯಾಗನ್ ಗಳಲ್ಲಿ ಹತ್ತಿರದ ಯಾರ್ಡ್ ಗೆ ತಲುಪಿಸುತ್ತದೆ. ಅಲ್ಲಿಂದ ರಾಜ್ಯ ಸರ್ಕಾರ ವಿತರಣೆ ಮಾಡಬೇಕು. ಆದರೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ರೈತರ ಅಂದಾಜು ಬೇಡಿಕೆ ಅರಿಯದೇ ವಿಫಲವಾಗಿದೆ ಎಂದು ಆರೋಪಿಸಿದರು.
ಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ
ರಾಜ್ಯದಲ್ಲಿ ಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕರ್ನಾಟಕದಲ್ಲಿ ಗೊಬ್ಬರ ಇದೆ. ಆದರೆ, ರೈತರಿಗೆ ಸಿಗುತ್ತಿಲ್ಲ. ಶ್ರೀಮಂತ ರೈತರು ಹೆಚ್ಚುವರಿ ದುಡ್ಡು ಕೊಟ್ಟು ಗೊಬ್ಬರ ಖರೀದಿಸುತ್ತಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರು ಅಂಗಡಿಗಳ ಮುಂದೆ ಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಅನಧಿಕೃತವಾಗಿ ಗೊಬ್ಬರ ದಾಸ್ತಾನು ಮಾಡಿ, ಕಾಳ ಸಂತೆ ಮೂಲಕ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಯಾವ ಜಿಲ್ಲೆಯಲ್ಲಿ ಎಷ್ಟು ಬೇಡಿಕೆ ಇದೆ ಎನ್ನುವ ಮಾಹಿತಿ ಅಧಿಕಾರಿಗಳಿಗಿಲ್ಲ. ಆಡಳಿತದ ಅವ್ಯವಸ್ಥೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ ಎಂದರು.
ಸರಿಯಾಗಿ ವಿತರಿಸಲಿ
ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದೆ. ಜುಲೈ ಅಂತ್ಯದವರೆಗೆ 6.25 ಲಕ್ಷ ಮೆಟ್ರಿಕ್ ಟನ್ ಕೊಡಬೇಕು. ಈಗಾಗಲೇ 5.35 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 8.82 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಇದೆ. ಅದರಲ್ಲಿ ಕರ್ನಾಟಕ ಸರ್ಕಾರ 7.74 ಲಕ್ಷ ಮೆಟ್ರಿಕ್ ಟನ್ ವಿತರಣೆ ಮಾಡಿದ್ದಾಗಿ ವರದಿ ಕಳುಹಿಸಿದೆ. ಅಂದರೆ ಅವರು 6.25 ಲಕ್ಷ ಮೆಟ್ರಿಕ್ ಟನ್ ವಿತರಣೆ ಬದಲು 7.74 ಲಕ್ಷ ಮೆಟ್ರಿಕ್ ಟನ್ ವಿತರಣೆ ಮಾಡಿದ್ದಾರೆ. ರಾಜ್ಯದ ಬಳಿ ಬಫರ್ ಸ್ಟಾಕ್ ಇನ್ನೂ ಇದೆ ಎಂಬುದು ತಿಳಿಯುತ್ತದೆ. ಈಗ ಕೇಂದ್ರ ಸರ್ಕಾರ ಕೊಡಬೇಕಾಗಿರುವುದು 1.35 ಲಕ್ಷ ಮೆಟ್ರಿಕ್ ಟನ್. ನಾವು ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ರಾಜ್ಯದಲ್ಲಿನ ಗೊಬ್ಬರದ ಸಮಸ್ಯೆ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದ ಬೇಡಿಕೆಗೆ ಸ್ಪಂದಿಸಿದ ಸಚಿವರು, ತಕ್ಷಣ ಅಧಿಕಾರಿಗಳ ಜೊತೆ ಚರ್ಚಿಸಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕಳುಹಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕೋರಮಂಡಲ, ಮದ್ರಾಸ್ ಫರ್ಟಿಲೈಸರ್ ಗಳಿಗೆ ಸೂಚನೆ ಕೊಡುತ್ತೇವೆ. ಹತ್ತು ಹದಿನೈದು ದಿನಗಳಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಸುವುದಾಗಿ ತಿಳಿಸಿದ್ದಾರೆ. ಇಂದೇ ಹದಿನಾರು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಕಳುಹಿಸಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಪ್ರತಿ ದಿನ ಹದಿನೈದರಿಂದ ಇಪ್ಪತ್ತು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಮಾಡಲಾಗುತ್ತದೆ. ರಾಜ್ಯ ಸರ್ಕಾರ ಕೇಂದ್ರದಿಂದ ಸರಬರಾಜಾದ ಗೊಬ್ಬರವನ್ನು ಯಾವ ಜಿಲ್ಲೆ, ತಾಲೂಕು, ಹಾಗೂ ಯಾವ ಗ್ರಾಮದಲ್ಲಿ ಬೇಡಿಕೆ ಇದೆ ಎನ್ನುವುದನ್ನು ತಿಳಿದುಕೊಂಡು ಸರಬರಾಜು ಮಾಡಬೇಕು. ರೈತರು ಎಲ್ಲಿಯೂ ಸರತಿ ಸಾಲಿನಲ್ಲಿ ನಿಲ್ಲದೇ ಅವರಿಗೆ ಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು.
ಎಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಾರೊ ಅವರ ಅಂಗಡಿಗಳ ಮೇಲೆ ದಾಳಿ ಮಾಡಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅಕ್ರಮವಾಗಿ ಸಂಗ್ರಹಿಸಿದ್ದ ಗೊಬ್ಬರವನ್ನು ವಶಪಡಿಸಿಕೊಂಡು ರೈತರಿಗೆ ವಿತರಿಸಬೇಕು. ಅವರ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳಬೇಕು. ಎಲ್ಲಿ ಗೊಬ್ಬರದ ಅಗತ್ಯವಿದೆ ಅಲ್ಲಿ ಸರಿಯಾಗಿ ಸರಬರಾಜು ಮಾಡಿದರೆ ಯೂರಿಯಾ ಗೊಬ್ಬರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಡಾ. ಸಿ.ಎನ್. ಮಂಜುನಾಥ, ಪಿ.ಸಿ ಗದ್ದಿಗೌಡರ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಹಾಜರಿದ್ದರು.