ಧರ್ಮಸ್ಥಳದಲ್ಲಿ ಮೂರು ವರ್ಷಗಳಿಂದ ಅನಾಥವಾಗಿ ಬಿದ್ದಿದೆ ಹಾಸನ ನೋಂದಣಿಯ ಬೈಕ್

ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುವಂತಹ ಪ್ರಮುಖ ಕೇಂದ್ರದಲ್ಲಿ, ಒಂದು ವಾಹನ ಇಷ್ಟು ಸುದೀರ್ಘ ಕಾಲದಿಂದ ಕೇಳುವವರಿಲ್ಲದೆ ನಿಂತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.;

Update: 2025-08-14 11:33 GMT

ದಕ್ಷಿಣ ಕನ್ನಡದ ಪ್ರಸಿದ್ಧ ಯಾತ್ರಾಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ನದಿಯ ಸ್ನಾನಘಟ್ಟದ ಬಳಿ ವಾಹನ ನಿಲುಗಡೆ ಪ್ರದೇಶದಲ್ಲಿ, ಕಳೆದ ಮೂರು ವರ್ಷಗಳಿಂದ ಹಾಸನ ನೋಂದಣಿಯ ಬೈಕ್ ಒಂದು ಅನಾಥವಾಗಿ ನಿಂತಿದೆ. ಈ ವಾಹನವು ಸ್ಥಳೀಯರು ಮತ್ತು ಭಕ್ತರಲ್ಲಿ ಹಲವು ಪ್ರಶ್ನೆ ಹಾಗೂ ಆತಂಕಗಳಿಗೆ ಕಾರಣವಾಗಿದೆ.

KA-13 V-9165 ನೋಂದಣಿ ಸಂಖ್ಯೆ ಹೊಂದಿರುವ ಬಜಾಜ್ ಪಲ್ಸರ್ ಬೈಕ್, ವರ್ಷಗಟ್ಟಲೇ ಒಂದೇ ಸ್ಥಳದಲ್ಲಿ ನಿಂತು ಸಂಪೂರ್ಣವಾಗಿ ಧೂಳು ಮತ್ತು ಮಣ್ಣಿನಿಂದ ಆವೃತವಾಗಿದೆ. ಬಿಸಿಲು ಮತ್ತು ಮಳೆಗೆ ಒಳಗಾಗಿ ಬೈಕ್‌ನ ಹಲವು ಭಾಗಗಳು ತುಕ್ಕು ಹಿಡಿದಿದ್ದು, ಇದನ್ನು ಕನಿಷ್ಠ ಮೂರು ವರ್ಷಗಳ ಹಿಂದೆಯೇ ಇಲ್ಲಿ ನಿಲ್ಲಿಸಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುವಂತಹ ಪ್ರಮುಖ ಕೇಂದ್ರದಲ್ಲಿ, ಒಂದು ವಾಹನ ಇಷ್ಟು ಸುದೀರ್ಘ ಕಾಲದಿಂದ ಕೇಳುವವರಿಲ್ಲದೆ ನಿಂತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬೈಕ್‌ನ ಮಾಲೀಕರು ಉದ್ದೇಶಪೂರ್ವಕವಾಗಿ ಇದನ್ನು ಇಲ್ಲಿ ಬಿಟ್ಟುಹೋದರೇ ಅಥವಾ ಯಾವುದಾದರೂ ಅನಿರೀಕ್ಷಿತ ದುರ್ಘಟನೆಗೆ ಸಿಲುಕಿದರೇ ಎಂಬ ಪ್ರಶ್ನೆಗಳು ಮೂಡಿವೆ.

ಅನುಮಾನಗಳಿಗೆ ಕಾರಣವಾಗಿರುವ ಹಿನ್ನೆಲೆ

ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ, ಧರ್ಮಸ್ಥಳದಲ್ಲಿ ಕಳೆದ 38 ವರ್ಷಗಳಲ್ಲಿ 279 ಅನಾಥ ಶವಗಳು ಪತ್ತೆಯಾಗಿರುವ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ, ಈ ಅನಾಥ ಬೈಕ್ ಪತ್ತೆಯಾಗಿರುವುದು ಸಾರ್ವಜನಿಕರ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬೈಕ್‌ನ ಮಾಲೀಕರಿಗೆ ಏನಾದರೂ ಅಪಾಯ ಸಂಭವಿಸಿರಬಹುದೇ ಅಥವಾ ಯಾವುದಾದರೂ ಅಹಿತಕರ ಘಟನೆ ಇದರ ಹಿಂದಿದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ.

ಒಂದು ದು ವೇಳೆ ಇದು ಕಳೆದುಹೋದ ವ್ಯಕ್ತಿಯೊಬ್ಬರ ವಾಹನವಾಗಿದ್ದರೆ, ಈ ತನಿಖೆಯು ಪ್ರಮುಖ ಪ್ರಕರಣವೊಂದಕ್ಕೆ ಸುಳಿವು ನೀಡುವ ಸಾಧ್ಯತೆಯೂ ಇದೆ. ಸದ್ಯಕ್ಕೆ, ಈ ಅನಾಥ ಬೈಕ್ ನೇತ್ರಾವತಿ ತಟದಲ್ಲಿ ನಿಂತು ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Tags:    

Similar News