ಹಾಸನ ಚಲೋ| ಬಳ್ಳಾರಿ ಪಾಳೆಗಾರಿಕೆ ಮುರಿದಂತೆ, ಹಾಸನದ ಪಾಳೇಗಾರಿಕೆ ಮುಗಿಸಬೇಕು: ಎಸ್‌.ಆರ್ ಹಿರೇಮಠ್

Update: 2024-05-30 12:19 GMT

ಹಾಸನವನ್ನು ತಮ್ಮ ‘ತಮ್ಮ ರಿಪಬ್ಲಿಕ್’ ಮಾಡಿಕೊಂಡಿರುವ ರೇವಣ್ಣ ಕುಟುಂಬದ ಪಾಳೇಗಾರಿಕೆ ಅವನತಿಯಾಗಬೇಕು. ಪಾಳೆಗಾರಿಕೆಯನ್ನು ಕೊನೆಗಾಣಿಸಲು ವ್ಯವಸ್ಥಿತ ಹೋರಾಟ ನಡೆಯಬೇಕು. ಬಳ್ಳಾರಿಯ ಪಾಳೆಗಾರಿಕೆಯನ್ನು ಮುರಿದಂತೆ, ಹಾಸನದಲ್ಲಿರುವ ಪಾಳೆಗಾರಿಕೆಯನ್ನು ಮುಗಿಸಬೇಕುʼʼ ಎಂದು ʻಹೋರಾಟದ ನಡಿಗೆ – ಹಾಸನ ಕಡೆಗೆ’ ಬೃಹತ್ ಹೋರಾಟ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಎಸ್‌.ಆರ್ ಹಿರೇಮಠ್ ವಾಗ್ಧಾಳಿ ನಡೆಸಿದರು.

ʻʻದೇಶದಲ್ಲಿ ಮೂರು ಉತ್ಕೃಷ್ಟ ಸತ್ಯಾಗ್ರಹಗಳು ನಡೆದಿವೆ. ಒಂದು, ಅಂಬೇಡ್ಕರ್ ನೇತೃತ್ವದ ಮಹಾರ್ ಸತ್ಯಾಗ್ರಹ. ಎರಡು, ದಂಡಿ ಉಪ್ಪಿನ ಸತ್ಯಾಗ್ರಹ. ಎರಡನೆಯದು, 2020-21ರ ರೈತ ಹೋರಾಟ. ಇವು ದೇಶ ಕಂಡ ಐತಿಹಾಸಿಕ ಹೋರಾಟಗಳು. ರೈತರು ಒಂದು ವರ್ಷಗಳ ನಿರಂತರ ಹೋರಾಟ ಮಾಡಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದರು. ಇವತ್ತು, ಹಾಸನದಲ್ಲಿ ನಡೆದಿರುವ ಈ ಲೈಂಗಿಕ ಹಗರಣದ ವಿರುದ್ಧದ ಹೋರಾಟವು ಅಂತಹ ಐತಿಹಾಸಿಕವಾಗಿ ಮುನ್ನಡೆಯಬೇಕುʼʼ ಎಂದರು.

ʻʻಅತ್ಯಾಚಾರ, ಅನ್ಯಾಯ ಮಾಡಿದವರ ವಿರುದ್ಧ ಸಂತ್ರಸ್ತ ಮಹಿಳೆಯರು ಮುಂದೆ ಬಂದು ಹೋರಾಟ ನಡೆಸಬೇಕು. ತಮ್ಮ ಮೇಲಾದ ದೌರ್ಜನ್ಯಗಳ ವಿರುದ್ಧ ಗಟ್ಟಿಯಾಗಿ ಮಾತನಾಡಬೇಕು. ಸರ್ಕಾರ ನಡೆಸುತ್ತಿರುವವರು ಹಾಸನಕ್ಕೆ ಬರಬೇಕು. ಸಂತ್ರಸ್ತೆಯರಿಗೆ ಧೈರ್ಯ ತುಂಬಬೇಕು. ನ್ಯಾಯ ಕೊಡಿಸುವ ಭರವಸೆ ನೀಡಬೇಕು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ಒತ್ತಾಯಿಸಿದರು.

ಹಾಸನ ಜಿಲ್ಲೆಯಲ್ಲಿ ಸುದೀರ್ಘ ಕಾಲದಿಂದಲೂ ಪಾಳೆಗಾರಿಕೆಯ ದರ್ಪದಿಂದ ನಡೆದಿರುವ ದೌರ್ಜನ್ಯಗಳಿಗೆ ಕೊನೆ ಹಾಡೋಣ. ಸಮಗ್ರ ನ್ಯಾಯ ಪಡೆಯಲು ಐತಿಹಾಸಿಕ ಹೋರಾಟ ನಡೆಸಬೇಕಿದೆ. ನ್ಯಾಯಾಂಗ ಹೋರಾಟ ಬಳ್ಳಾರಿಯ ಗಣಿ ಧಣಿಗಳ ಪಾಳೆಗಾರಿಕೆಯನ್ನು ಅಂತ್ಯ ಕಾಣಿಸಿದಂತೆ, ಹಾಸನದ ಪಾಳೆಗಾರಿಕೆಯನ್ನು ಅಂತ್ಯ ಮಾಡಲು ನ್ಯಾಯಾಂಗ ಹೋರಾಟವನ್ನು ಯಶಸ್ವಿಯಾಗಿ ನಡೆಸಲು ನನ್ನ ಕೊನೆ ಉಸಿರು ಇರುವವರೆಗೂ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಹೋರಾಟದ ನಡಿಗೆ ಹಾಸನದ ಕಡೆಗೆ ಎಂಬುದರ ಜತೆಗೆ ಸಮಾನತೆಯ ಕಡೆಗೆ ಆಗಬೇಕು. ಮಹಾಡ್ ಸತ್ಯಾಗ್ರಹವನ್ನು ಅಂಬೇಡ್ಕರ್ ನಡೆಸಿದ್ದರು. ಸೂರ್ಯ ಮುಳುಗದ ಸಾಮ್ರಾಜ್ಯ ನಮ್ಮದು ಅಂತ ಕೊಚ್ಚಿಕೊಳ್ಳುತ್ತಿದ್ದ ಬ್ರಿಟಿಷರನ್ನು ವಾಪಸ್ ಕಳಿಸಲು ಸತ್ಯಾಗ್ರಹದ ಹೋರಾಟ ನಡೆಯಿತು. ಇತ್ತೀಚಿಗೆ ಸಾಮೂಹಿಕ ನಾಯಕತ್ವದಲ್ಲಿ ದೆಹಲಿ ಗಡಿಗಳಲ್ಲಿ ನಡೆದ ರೈತ ಹೋರಾಟದಲ್ಲಿ ಲಕ್ಷಗಟ್ಟಲೆ ಜನ ಅಹಂಕಾರಿ, ಅಸಹಿಷ್ಣುತೆಯ ಪ್ರತೀಕವಾಗಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಬಗ್ಗಿಸಿದರು. ಇಂದು ಹಾಸನದಲ್ಲಿ ಮಹಿಳೆಯರ ಸಮಾನತೆಯ ಕಡೆಗೆ ಕೊಂಡೊಯ್ಯಲು ಹೋರಾಟ ನಡೆಯುತ್ತಿದೆ. ಇದು ದೊಡ್ಡಮಟ್ಟಕ್ಕೆ ಬೆಳೆಯಬೇಕು ಎಂದರು.

ಈ ರಾಜ್ಯದ ಗೃಹಮಂತ್ರಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಈಗಾಲಾದರೂ ಹಾಸನಕ್ಕೆ ಬನ್ನಿ ನೊಂದ ಮಹಿಳೆಯರ ದನಿ ಕೇಳಿ ನ್ಯಾಯ ನೀಡಿ ಎಂದು ಅವರು ಆಗ್ರಹಿಸಿದರು.

Tags:    

Similar News