ಹ್ಯಾಂಡ್ ಗ್ರೆನೇಡ್ ಪತ್ತೆ ಪ್ರಕರಣ: ಬೆಂಗಳೂರಿನಲ್ಲಿ ಆಯ್ದ ಪ್ರದೇಶದಲ್ಲಿ ಸ್ಫೋಟಕ್ಕೆ ಸಂಚು
ಆರೋಪಿ ಈ ಮೊದಲು ಅರಮನೆ ಮೈದಾನದ ಬಳಿ ಕೆಲಸ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಸ್ಫೋಟಕವನ್ನು ಪಡೆದಿದ್ದ. ಆ ವ್ಯಕ್ತಿ, ಸಿಗರೇಟ್ ಅಂಗಡಿಯೊಂದರ ಹೆಸರು ಹೇಳಿ, ಅಲ್ಲಿ ಬ್ಯಾಗ್ ಇಡಲು ಸೂಚಿಸಿದ್ದ ಎಂದು ಆರೋಪಿ ವಿಚಾರಣೆಯಲ್ಲಿ ತಿಳಿಸಿದ್ದಾನೆ .;
ಹೋಟೆಲ್ ಸಪ್ಲೈಯರ್ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿತ್ತು.
https://karnataka.thefederal.com/category/karnataka/a-hand-grenade-was-found-near-a-hotel-supplier-in-bangalore-177684
ಬೆಂಗಳೂರು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಬ್ಯಾಗಿನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾದ ಪ್ರಕರಣದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆಯನ್ನು ನಡೆಸುತ್ತಿದ್ದು, ಇದೀಗ ಕೆಲವೊಂದು ಸ್ಥಳಗಳಲ್ಲಿ ಸ್ಫೋಟಕಗಳನ್ನಿಡಲು ಸಂಚು ರೂಪಿಸಿದ್ದಾಗಿ ಆರೋಪಿ ಬಾ ಎದು ಮೂಲಗಳಿಂದ ತಿಳಿದುಬಂದಿದೆ.
ಆರೋಪಿ ಅಬ್ದುಲ್ ರೆಹಮಾನ್ ಬ್ಯಾಗ್‌ನಲ್ಲಿ ಗ್ರೆನೇಡ್ ಪತ್ತೆಯಾದ ಕಾರಣ ಮಾರ್ಚ್ 22ರಂದು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಆತನನ್ನು ಬಂಧಿಸಿದ್ದರು. ರಾಜ್ಯ ಮತ್ತು ಕೇಂದ್ರ ಗುಪ್ತಚರ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, ಸಂಪಿಗೆಹಳ್ಳಿ ಪೊಲೀಸರ ವಶದಲ್ಲಿರುವ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಆರೋಪಿಯನ್ನು ಒಂದು ವಾರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆರೋಪಿ ಕೆಲವೊಂದು ಸ್ಪೋಟಕ ಮಾಹಿತಿಗಳನ್ನು ನೀಡಿದ್ದಾನೆ. ಆರೋಪಿ ಈ ಮೊದಲು ಅರಮನೆ ಮೈದಾನದ ಬಳಿ ಕೆಲಸ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಸ್ಫೋಟಕವನ್ನು ಪಡೆದಿದ್ದ. ಆ ವ್ಯಕ್ತಿ, ಸಿಗರೇಟ್ ಅಂಗಡಿಯೊಂದರ ಹೆಸರು ಹೇಳಿ, ಅಲ್ಲಿ ಬ್ಯಾಗ್ ಇಡಲು ಸೂಚಿಸಿದ್ದ ಎಂದು ಆರೋಪಿ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆ ದಿನ ಆರೋಪಿ ಪ್ರಯಾಣಿಸಿದ್ದ ಆಟೋ ಚಾಲಕನನ್ನೂ ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆದರೆ ಆತ ಆರೋಪಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಸದ್ಯ ಆ ವ್ಯಕ್ತಿಯ ಗುರುತು, ಗ್ರೆನೇಡ್ ಮೂಲ ಮತ್ತು ಆರೋಪಿ ತಲುಪಲು ಬಳಸಿದ ಸಂಪರ್ಕ ಜಾಲವನ್ನು ಪತ್ತೆಹಚ್ಚಲು ಅಧಿಕಾರಿಗಳು ಬಿಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರಕರಣವೇನು?
ಅಬ್ದುಲ್ ರೆಹಮಾನ್ ಎಂಬಾತ ಬೆಳ್ಳಹಳ್ಳಿಯ ನಿವಾಸಿ ಎಂದು ಹೇಳಿಕೊಂಡು ವೈಭವ್ ಹೋಟೆಲ್‌ನಲ್ಲಿ ಸಪ್ಲೆಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಹೋಟೆಲ್‌ನವರು ಆಧಾರ್ ಕಾರ್ಡ್ ಕೇಳಿದ್ದರು. ಆದರೆ ಆತ ಎರಡು ದಿನ ಕಳೆದರೂ ಸಹ ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಹೀಗಾಗಿ ಹೋಟೆಲ್ ಸಿಬ್ಬಂದಿಯೊಬ್ಬರು, ಆಧಾರ್ ಕಾರ್ಡ್‌ಗಾಗಿ ಅಬ್ದುಲ್ ರೆಹಮಾನ್ ನ ಬ್ಯಾಗ್ ಪರಿಶೀಲಿಸಿದಾಗ ಗ್ರೆನೇಡ್ ಪತ್ತೆಯಾಗಿತ್ತು..ಕೂಡಲೇ ಹೋಟೆಲ್‌ನವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸಂಪಿಗೆಹಳ್ಳಿ ಪೊಲೀಸರು ಮೊದಲಿಗೆ ಹೋಟೆಲ್‌ನವರಿಂದ ಮಾಹಿತಿ ಪಡೆದುಕೊಂಡು ನಂತರ ರೆಹಮಾನ್ ಬ್ಯಾಗ್ ಚೆಕ್ ಮಾಡಿದಾಗ ಹ್ಯಾಂಡ್ ಗ್ರೆನೇಡ್ ಕಂಡುಬಂದಿತ್ತು. ಬಳಿಕ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಸುರಕ್ಷಿತ ಸ್ಥಳದಲ್ಲಿ ಸ್ಫೋಟಕ ವಸ್ತುವನ್ನು ನಾಶಪಡಿಸಿದ್ದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.