GST Discrimination | ತೆರಿಗೆ ಹಂಚಿಕೆ ವಂಚನೆ: ಹೋರಾಟದ ಕಿಚ್ಚು ಹೊತ್ತಿಸಿದ ಕೇಂದ್ರ ಧೋರಣೆ
ಗುರುವಾರ ರಾಜ್ಯಗಳಿಗೆ ಜಿಎಸ್ಟಿ ತೆರಿಗೆ ಪಾಲು ಹಂಚಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರ, ಮತ್ತೆ ರಾಜ್ಯಕ್ಕೆ ಕೇವಲ 6,498 ಕೋಟಿ ರೂ. ಹಂಚಿಕೆ ಮಾಡಿರುವುದು ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಕೆರಳಿಸಿದೆ.;
ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಸೇರಿ ಒಟ್ಟು 28,152 ಕೋಟಿ, ಉತ್ತರಪ್ರದೇಶ ರಾಜ್ಯವೊಂದಕ್ಕೇ ಬರೋಬ್ಬರಿ 31,962 ಕೋಟಿ!
ಕೇಂದ್ರ ಸರ್ಕಾರ ಈ ಬಾರಿ ಹಂಚಿಕೆ ಮಾಡಿರುವ ಜಿಎಸ್ಟಿ ತೆರಿಗೆ ಪಾಲಿನ ಈ ಲೆಕ್ಕಾಚಾರ ಕರ್ನಾಟಕದ ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಕೆರಳಿಸಿದೆ. ಅದರಲ್ಲೂ ಜಿಎಸ್ಟಿ ತೆರಿಗೆ ಕೊಡುಗೆಯಲ್ಲಿ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಗಿಂತ ಕನಿಷ್ಟ ಮೊತ್ತವನ್ನು ಹಂಚಿಕೆ ಮಾಡಿರುವುದು ದೊಡ್ಡಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ.
ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದ ಕಳೆದ ಏಳೆಂಟು ವರ್ಷಗಳಿಂದ ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ತೆರಿಗೆ ಸಂಗ್ರಹದ ವಿಷಯದಲ್ಲಿ ರಾಜ್ಯದಿಂದ ಅತಿ ಹೆಚ್ಚಿನ ಪಾಲು ಪಡೆಯುತ್ತಿದೆ. ಆದರೆ, ಕನ್ನಡಿಗರಿಂದ ಪಡೆದ ಆ ತೆರಿಗೆಯ ಸರಿಸಮನಾದ ಪಾಲು ಹಂಚಿಕೆ ಮಾಡಬೇಕಾದ ಕೇಂದ್ರ, ಅದಕ್ಕೆ ಬದಲಾಗಿ ದೇಶದಲ್ಲಿ ಅತಿ ಕನಿಷ್ಟ ತೆರಿಗೆ ಕೊಡುಗೆ ನೀಡುವ ರಾಜ್ಯಗಳಿಗೆ ನೀಡುವ ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿದೆ. ಇದು ಕನ್ನಡಿಗರನ್ನು ದೋಚುವ ನಿರಂತರ ಪ್ರಯತ್ನ. ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಬಗೆಯುತ್ತಿರುವ ಈ ದ್ರೋಹದ ವಿರುದ್ಧ ದನಿ ಎತ್ತಬೇಕಿದೆ ಎಂಬ ಮಾತು ರಾಜಕೀಯ, ಉದ್ಯಮ ಮತ್ತು ವಹಿವಾಟು ವಲಯದಿಂದಲೂ ಕೇಳಿಬರುತ್ತಿದೆ.
ತೆರಿಗೆ ಅನ್ಯಾಯದ ವಿರುದ್ಧ ಕಳೆದ ನಾಲ್ಕೈದು ವರ್ಷಗಳಿಂದ ವಿವಿಧ ಕರ್ನಾಟಕದ ಬೌದ್ಧಿಕ ಗುಂಪುಗಳು ಮತ್ತು ಸಾಮಾಜಿಕ ಸಂಘಟನೆಗಳು ಕೂಡ ನಿರಂತರವಾಗಿ ದನಿ ಎತ್ತುತ್ತಲೇ ಇವೆ. ತೆರಿಗೆ ಹಂಚಿಕೆಯ ಕಾನೂನು ಮತ್ತು ನಿಯಮಗಳನ್ನು ಉಲ್ಲೇಖಿಸುತ್ತಾ, ಅಂಕಿಅಂಶಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರ ಹೇಗೆ ಕರ್ನಾಟಕದ ವಿರುದ್ಧ ದೊಡ್ಡ ಅನ್ಯಾಯವನ್ನು ಎಸಗುತ್ತಿದೆ ಎಂಬುದನ್ನು ವಿವರಸುತ್ತಲೇ ಇದ್ದಾರೆ. ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಕೂಡ ತೆರಿಗೆ ವಂಚನೆಯ, ಜಿಎಸ್ಟಿ ಹಂಚಿಕೆಯ ತಾರತಮ್ಯದ ಈ ಅನ್ಯಾಯವೇ ಪ್ರಮುಖ ಚುನಾವಣಾ ವಿಷಯವಾಗಿತ್ತು.
ಮತ್ತೆಮತ್ತೆ ಅನ್ಯಾಯ, ತಾರತಮ್ಯ
ಇದೀಗ ಗುರುವಾರ ರಾಜ್ಯಗಳಿಗೆ ಜಿಎಸ್ಟಿ ತೆರಿಗೆ ಪಾಲು ಹಂಚಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರ, ಮತ್ತೆ ರಾಜ್ಯಕ್ಕೆ ಕೇವಲ 6,498 ಕೋಟಿ ರೂ. ಹಂಚಿಕೆ ಮಾಡಿರುವುದು ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಕೆರಳಿಸಿದೆ.
ಹತ್ತಾರು ಬಾರಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಅನ್ಯಾಯವನ್ನು ವಿವರಿಸಿ, ಪ್ರಧಾನಿ, ಹಣಕಾಸು ಸಚಿವರನ್ನು ಭೇಟಿ ಮಾಡಿ ಅನ್ಯಾಯ ಸರಿಪಡಿಸುವಂತೆ ಕೋರಿ, 16ನೇ ಹಣಕಾಸು ಯೋಜನೆಯ ಪೂರ್ವಭಾವಿ ಸಭೆಗಳಲ್ಲಿ ಅಂಕಿಅಂಶ ಸಹಿತ ವಿವರಿಸಿ, ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಕೋರಿದ್ದರೂ ಇದೀಗ ಮತ್ತೆ ಅದೇ ಅನ್ಯಾಯವನ್ನು ಎಸಗಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಶನಿವಾರ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್, ಜಿಎಸ್ಟಿ ತೆರಿಗೆ ಪಾಲು ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ನಿರಂತರ ತಾರತಮ್ಯವಾಗುತ್ತಿದೆ. ನಮ್ಮ ತೆರಿಗೆ ಹಣವನ್ನು ಉತ್ತರಪ್ರದೇಶ, ದೆಹಲಿ, ಬಿಹಾರಕ್ಕೆ ಕೊಡುತ್ತಿದ್ದಾರೆ. ಆಂಧ್ರಕ್ಕಿಂತಲೂ ಕಡಿಮೆ ಹಣ ನಮಗೆ ನೀಡಿದ್ದಾರೆ. ಅವರಿಗಿಂತ ಕೀಳಾಗಿದ್ದೇವಾ? ಈ ತಾರತಮ್ಯ ಖಂಡಿಸಿ, “ನಮ್ಮ ತೆರಿಗೆ ನಮ್ಮ ಹಕ್ಕು” ಎಂದು ಘೋಷಣೆಯಡಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
“ಅತಿಹೆಚ್ಚು ತೆರಿಗೆ ಪಾವತಿಸುವ ನಮಗೆ ತಾರತಮ್ಯ ಎಸಗಲಾಗುತ್ತಿದೆ. ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸರ್ಕಾರದಲ್ಲಿ ಐವರು ಸಚಿವರು ನಮ್ಮವರೇ ಇದ್ದಾರೆ. ನಮ್ಮಲ್ಲೇ ಇದ್ದುಕೊಂಡು ಈಗ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ” ಎಂದು ಗುಡುಗಿದ್ದಾರೆ.
ಅದರ ಬೆನ್ನಲ್ಲೇ, ಅವರ ಸಹೋದರ ಹಾಗೂ ಕಾಂಗ್ರೆಸ್ ಮಾಜಿ ಸಂಸದ ಡಿ ಕೆ ಸುರೇಶ್ ಕೂಡ ಈ ಬಗ್ಗೆ ದನಿ ಎತ್ತಿದ್ದು, ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಕಳೆದ ಬಾರಿಯೇ ಪ್ರಸ್ತಾಪ ಮಾಡಿದ್ದೆ. ಇದೀಗ ಮತ್ತೊಮ್ಮೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ. ದಕ್ಷಿಣ ಭಾರತಕ್ಕೆ 28,152 ಕೋಟಿ ರೂಪಾಯಿ ನೀಡಿದ್ದಾರೆ. ಆದರೆ ಕೇವಲ ಉತ್ತರಪ್ರದೇಶ ಒಂದಕ್ಕೇ ಬರೋಬ್ಬರಿ 31,962 ಕೋಟಿ ಬಿಡುಗಡೆ ಮಾಡಿದ್ದಾರೆ. ನಮ್ಮನ್ನು ಪದೇಪದೆ ಕೆಣಕುವ ಪ್ರಯತ್ನ ನಡೆಯುತ್ತಿದೆ. ದುಃಖದಿಂದ ಈ ಮಾತನ್ನು ನಾವು ಹೇಳಬೇಕಾಗಿದೆ ಎಂದಿದ್ದಾರೆ.
ಸಂಸದರ ಮೌನದ ವಿರುದ್ಧ ಆಕ್ರೋಶ
ತೆರಿಗೆ ಹಂಚಿಕೆಯಲ್ಲಿ ಪ್ರತಿಬಾರಿ ರಾಜ್ಯಕ್ಕೆ ಮಹಾದ್ರೋಹವಾಗುತ್ತಿದ್ದರೂ ಅತಿ ಹೆಚ್ಚು ಸಂಖ್ಯೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಯಾರೂ ಈ ಅನ್ಯಾಯದ ವಿರುದ್ಧ ದನಿ ಎತ್ತುತ್ತಿಲ್ಲ. ಸಂಸದ ಈ ಮೌನ ಸಹಜವಾಗೇ ರಾಜಕೀಯ ಮತ್ತು ಉದ್ಯಮ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
“ರಾಜ್ಯವನ್ನು ಪ್ರತಿನಿಧಿಸುವ 19 ಸಂಸದರು ಬಿಜೆಪಿಯವರು ಇದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಇದೆ. ಆದ್ರೆ ಸಂಸದರು ಧ್ವನಿ ಎತ್ತುತ್ತಿಲ್ಲ. ಹೀಗಾಗಿ ನಿಮ್ಮನೀತಿ ಬದಲಾವಣೆ ಮಾಡಿ ಎಂದು ನಾನು ಬಿಜೆಪಿಗರಿಗೆ ಮನವಿ ಮಾಡುತ್ತೇನೆ. ರಾಜ್ಯಕ್ಕೆ, ದಕ್ಷಿಣ ಭಾರತಕ್ಕೆ ಹೆಚ್ಚಿನ ತೆರಿಗೆ ಪಾಲನ್ನು ನೀಡಿ ಎಂದು ಆಗ್ರಹಿಸುತ್ತೇನೆ” ಎಂದು ಸುರೇಶ್ ಹೇಳಿದ್ದಾರೆ.
ಪ್ರತ್ಯೇಕ ಭಾರತದ ಕೂಗು ಎಬ್ಬಿಸಬೇಡಿ
ನಿರಂತರವಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ, ಅಭಿವೃದ್ಧಿ ಅನುದಾನ, ಯೋಜನಾ ಹಂಚಿಕೆ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿಯೂ ಅನ್ಯಾಯವಾಗುತ್ತಿರುವ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಸುರೇಶ್, “ಪ್ರತ್ಯೇಕ ದಕ್ಷಿಣ ಭಾರತ ನನ್ನ ಕೂಗಲ್ಲ. ತಮಿಳುನಾಡಿನಲ್ಲಿ ಬಹಳ ಹಿಂದೆಯೆ ಅಂತಹ ಬೇಡಿಕೆ ಇತ್ತು. ಈಗ ಮತ್ತೆ ಅನ್ಯಾಯ ಮಾಡಿ ಮತ್ತೆ ಪ್ರತ್ಯೇಕ ದಕ್ಷಿಣ ಭಾರತದ ಕೂಗನ್ನು ಏಳಿಸಬೇಡಿ. ನಾವು ಭಾರತಾಂಬೆಯ ಮಕ್ಕಳು. ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ” ಎಂದು ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಯಾವ ರಾಜ್ಯಕ್ಕೆ ಎಷ್ಟು ಬಿಡುಗಡೆ
ಕೇಂದ್ರ ಸರ್ಕಾರ ಗುರುವಾರ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಜಿಎಸ್ಟಿ ತೆರಿಗೆ ಪಾಲಿನಲ್ಲಿ ತನ್ನದೇ ಸರ್ಕಾರ ಇರುವ ರಾಜ್ಯಗಳಿಗೆ ಅತಿ ಹೆಚ್ಚಿನ ಹಣ ಹಂಚಿಕೆ ಮಾಡಲಾಗಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅತಿ ಕಡಿಮೆ ಹಂಚಿಕೆ ಮಾಡಲಾಗಿದೆ.
ಹಂಚಿಕೆಯ ವಿವರದಂತೆ, ಉತ್ತರ ಪ್ರದೇಶಕ್ಕೆ 31,962 ಕೋಟಿ, ಬಿಹಾರಕ್ಕೆ 17,921 ಕೋಟಿ, ಮಧ್ಯಪ್ರದೇಶಕ್ಕೆ 13,987 ಕೋಟಿ, ಪಶ್ಚಿಮ ಬಂಗಾಳಕ್ಕೆ 13,404, ಮಹಾರಾಷ್ಟ್ರಕ್ಕೆ 11,255, ರಾಜಸ್ಥಾನಕ್ಕೆ 10,737, ಒಡಿಶಾಕ್ಕೆ 8,068, ಹಾಗೂ ದಕ್ಷಿಣ ಭಾರತದ ತಮಿಳುನಾಡಿಗೆ 7,268 ಕೋಟಿ, ಆಂಧ್ರಪ್ರದೇಶಕ್ಕೆ 7,211 ಕೋಟಿ ಹಾಗೂ ಕರ್ನಾಟಕಕ್ಕೆ ಕೇವಲ 6,498 ಕೋಟಿ ಬಿಡುಗಡೆ ಮಾಡಲಾಗಿದೆ.