ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್‌ಟಿ ಕಡಿತಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಮೆಚ್ಚುಗೆ
ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯಗಳು ಕೈಗೆಟುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಕ್ಷೇತ್ರಕ್ಕೆ ಜಿಎಸ್‌ಟಿಯಲ್ಲಿ ಹೆಚ್ಚಿನ ವಿನಾಯಿತಿ ನೀಡಿದೆ. ಇದಕ್ಕೆ ಅಭೂತಪೂರ್ವ ಸ್ವಾಗತ ವ್ಯಕ್ತವಾಗಿದೆ.;
ಜೀವ ಉಳಿಸುವ ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಲಾಗಿದೆ. ಇದು ಆರೋಗ್ಯ ಕ್ಷೇತ್ರಕ್ಕೆ ಕೇಂದ್ರದ ನಿರ್ಣಕ್ಕೆ ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ. ಆರೋಗ್ಯ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯಗಳು ಕೈಗೆಟುವಂತೆ ಮಾಡುವ ಉದ್ದೇಶದಿಂದ ಜಿಎಸ್‌ಟಿ ದರಗಳ ಪರಿಷ್ಕರಣೆ ವೇಳೆ ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ವಿನಾಯಿತಿ ನೀಡಿದೆ. ವಿಮಾ ಸೌಲಭ್ಯವು ಎಲ್ಲರಿಗೂ ತಲುಪಲಿ ಎಂದು ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಮ್‌ಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇದಕ್ಕೆ ಅಭೂತಪೂರ್ವ ಸ್ವಾಗತ ವ್ಯಕ್ತವಾಗಿದೆ.
ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಬಳಿಕ ವಿಮೆಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದಕ್ಕೆ ಶೂನ್ಯ ತೆರಿಗೆ ವಿಧಿಸಲಾಗಿದೆ. ಇನ್ನು, ಥರ್ಮೋಮೀಟರ್ ಮೇಲಿನ ಶೇ.18ರಷ್ಟು ತೆರಿಗೆಯನ್ನು ಶೇ 5ಕ್ಕೆ ಇಳಿಸಲಾಗಿದೆ. ಇದಲ್ಲದೇ ಹಲವಾರು ನಿರ್ಣಾಯಕ ವೈದ್ಯಕೀಯ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಶೇ.12 ರಿಂದ ಶೇ 5 ಕ್ಕೆ ಇಳಿಕೆ ಮಾಡಲಾಗಿದೆ. ಫೀಡಿಂಗ್ ಬಾಟಲಿಗಳು, ಬೇಬಿ ನ್ಯಾಪ್ಟಿನ್ ಮತ್ತು ಡೈಪರ್‌ಗಳು ದರಗಳನ್ನು ಶೇ 5ಕ್ಕೆ ಕಡಿತಗೊಳಿಸಲಾಗಿದೆ.
ಮೆಡಿಕಲ್ ಗ್ರೇಡ್ ಆಕ್ಸಿಜನ್, ಡಯಾಗೋಸ್ಟಿಕ್ ಕಿಟ್, ಗ್ಲುಕೋಮೀಟರ್, ಟೆಸ್ಟ್ ಸ್ಟ್ರೀಪ್ಸ್, ಕನ್ನಡಕಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ 5ಕ್ಕೆ ಇಳಿಸಲಾಗಿದೆ. ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ, ಹಿರಿಯ ನಾಗರಿಕರ ಆರೋಗ್ಯ ವಿಮೆಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಘೋಷಿಸಲಾಗಿದೆ.
ಔಷಧಿಗಳ ಮೇಲಿನ ಜಿಎಸ್‌ಟಿ ಅನ್ನು ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡಿರುವುದರಿಂದಸಲಾಗಿದೆ. ಇದು ಚಿಕಿತ್ಸೆಯ ಖರ್ಚನ್ನು ಕಡಿಮೆ ಮಾಡುತ್ತದೆ. ಅಗತ್ಯ ಚಿಕಿತ್ಸೆಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುತ್ತದೆ. ಈ ಬದಲಾವಣೆಗಳಿಂದ ಔಷಧಿಗಳು ಸುಲಭವಾಗಿ ಸಿಗುತ್ತವೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು ಎಂಬ ಸರ್ಕಾರದ ಆಶಯಕ್ಕೆ ಇದು ಸಹಾಯ ಮಾಡುತ್ತದೆ.
ಜಿಎಸ್‌ಟಿ ಬದಲಾವಣೆಯು ರೋಗಿಗಳಿಗೆ ಮತ್ತು ಔಷಧಿ ಕಂಪನಿಗಳಿಗೆ ಒಳ್ಳೆಯದು. ಔಷಧಿಗಳ ಮೇಲಿನ ಜಿಎಸ್‌ಟಿ ಶೇ.5 ಕ್ಕೆ ಇಳಿಕೆ ಮಾಡಿರುವುದರಿಂದ ಅನೇಕ ಕುಟುಂಬಗಳಿಗೆ ಚಿಕಿತ್ಸೆಯ ಖರ್ಚು ಕಡಿಮೆಯಾಗುತ್ತದೆ. ಸುಮಾರು 36 ಜೀವ ಉಳಿಸುವ ಔಷಧಿಗಳನ್ನು ಜಿಎಸ್‌ಟಿ ಯಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗಳು ಇದರಲ್ಲಿ ಸೇರಿವೆ. ಇದು ಕೇವಲ ತೆರಿಗೆ ನೀತಿಯಲ್ಲದೆ, ರೋಗಿಗಳಿಗೆ ಸಹಾಯ ಮಾಡುವ ಒಂದು ಕ್ರಮವಾಗಿದೆ ಎಂದು ಔಷಧಾಲಯ ಕ್ಷೇತ್ರವು ಬಣ್ಣಿಸಿದೆ.
ಆರೋಗ್ಯ ಕ್ಷೇತ್ರದ ಸಂಶೋಧನೆಗಳಿಗೆ ಸಹಕಾರಿ:
ಔಷಧಿ ಕಂಪನಿಗಳಿಗೆ ಬೆಲೆ ನಿಗದಿಪಡಿಸಲು ಮತ್ತು ಮಾರುಕಟ್ಟೆ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ. ಈ ಕ್ರಮವು ಹಳ್ಳಿಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡಲಾಗುತ್ತದೆ. ಹೊಸ ಸಂಶೋಧನೆಗಳಿಗೆ ಹಣವನ್ನು ಉಳಿಸುತ್ತದೆ. ಗುಣಮಟ್ಟದ ಆರೋಗ್ಯ ಸೇವೆಗಳು ಎಲ್ಲರಿಗೂ ಇದರಿಂದ ಲಭ್ಯವಾಗಲಿದೆ. ರೋಗಗಳನ್ನು ಬೇಗನೆ ಪತ್ತೆಹಚ್ಚಲು ಸಹ ಸಹಾಯವಾಗುತ್ತದೆ. ಅಲ್ಲದೇ, ತಡೆಗಟ್ಟುವ, ಗುಣಪಡಿಸುವ ಮತ್ತು ಪುನರ್ವಸತಿ ಆರೈಕೆಗೆ ಜಿಎಸ್‌ಟಿ ದರಗಳನ್ನು ಒಂದೇ ರೀತಿ ಇರಿಸುವುದರಿಂದ ಅನುಕೂಲವಾಗುತ್ತದೆ. ಆರೋಗ್ಯ ವಿಮೆ, ಗ್ಲುಕೋಮೀಟರ್ ಮತ್ತು ಕನ್ನಡಕಗಳಂತಹ ಆರೋಗ್ಯ ಉತ್ಪನ್ನಗಳ ಮೇಲಿನ ದರವನ್ನು ಕಡಿಮೆ ಮಾಡಿರುವುದರಿಂದ ಬಡವರಿಗೂ ಕೈಗೆಟುವ ದರದಲ್ಲಿ ಲಭ್ಯವಾಗಲಿದೆ. ಪರೋಕ್ಷ ತೆರಿಗೆ ದರಗಳನ್ನು ಕಡಿಮೆ ಮಾಡುವುದರಿಂದ ರೋಗನಿರ್ಣಯ ಪರೀಕ್ಷೆಗಳು ಮತ್ತು ದಿನನಿತ್ಯದ ವೈದ್ಯಕೀಯ ಸರಬರಾಜುಗಳ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಆರೋಗ್ಯ ಕ್ಷೇತ್ರಕ್ಕೆ ವರದಾನ:
ಆರೋಗ್ಯ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ನೀಡಿರುವ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರಾಜ್ಯ ಔಷಧಾಲಯ ಸಂಘದ ಮಾಜಿ ಅಧ್ಯಕ್ಷ ಗುಂಡೂರಾವ್, ಜಿಎಸ್‌ಟಿ ಕಡಿತವು ಆರೋಗ್ಯ ಕ್ಷೇತ್ರಕ್ಕೆ ಒಂದು ವರದಾನವಾಗಿದೆ. ಇದರಿಂದ ರೋಗಿಗಳಿಗೆ, ಔಷಧಿ ಕಂಪನಿಗಳಿಗೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ಸರ್ಕಾರವು ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು ಎಂಬ ಗುರಿಯನ್ನು ಹೊಂದಿದೆ. ಈ ಕ್ರಮವು ಆ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಜೀವ ಉಳಿಸುವ ಮತ್ತು ಕ್ಯಾನ್ಸರ್ ಔಷಧಿಗಳನ್ನು ಜಿಎಸ್‌ಟಿ ಯಿಂದ ತೆಗೆದುಹಾಕಿರುವುದು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ನೇರ ಪರಿಹಾರವನ್ನು ನೀಡುತ್ತದೆ. ಅನೇಕ ಔಷಧಿಗಳ ಮೇಲಿನ ಜಿಎಸ್‌ಟಿ ಶೇ.12 ರಿಂದ ಶೇ.5 ಕ್ಕೆ ಇಳಿಸಿರುವುದು ಚಿಕಿತ್ಸೆಯ ಖರ್ಚನ್ನು ಕಡಿಮೆ ಮಾಡುತ್ತದೆ ಮತ್ತು ಅಗತ್ಯ ಚಿಕಿತ್ಸೆಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುತ್ತದೆ. ಜಿಎಸ್‌ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ತಲುಪಿಸಲು ಎಂಆರ್‌ಪಿ ದರದಲ್ಲಿಯೂ ಕಡಿತವಾಗಲಿದೆ ಎಂದರು.
ದಿ ಆಸ್ಪತ್ರೆಯ ಸಿಇಒ ಡಾ.ಚಂದ್ರಶೇಖರ್ ಚಿಕ್ಕಮುನಿಯಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಣಯವು ಬಹಳ ಅತ್ಯುತ್ತಮ ನಿರ್ಣಯವಾಗಿದೆ. ವೈದ್ಯಕೀಯ ತಂತ್ರಜ್ಞಾನ ಬೆಳೆದಂತೆ ಚಿಕಿತ್ಸೆ ದರವು ಸಹ ಹೆಚ್ಚಳವಾಗಿದೆ. ರೋಗಿಗಳಿಗೆ ವಿಮೆ ಇಲ್ಲದೆ ಚಿಕಿತ್ಸೆ ವೆಚ್ಚ ಭರಿಸಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಈ ಸಮಸ್ಯೆ ನಿವಾರಣೆಯಾದಂತಾಗಿದೆ. ವಿಮೆ ಪ್ರೀಮಿಯಂ ದರ ಹೆಚ್ಚಿದ್ದರಿಂದ ಬಹಳಷ್ಟು ಮಂದಿ ವಿಮೆ ಮಾಡಿಸುತ್ತಿರಲಿಲ್ಲ. ಇದೀಗ ವಿಮೆ ಶೂನ್ಯಕ್ಕೆ ಇಳಿಸಿರುವುದರಿಂದ ಬಹಳಷ್ಟು ಮಂದಿ ವಿಮೆ ಮಾಡಿಸುತ್ತಾರೆ. ಅಲ್ಲದೇ, ಸುಲಭವಾಗಿ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಖಾಸಗಿ ಕ್ಲಿನಿಕ್‌ನ ದಂತ ವೈದ್ಯೆ ಡಾ.ಮಮತಾ, ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಜಿಎಸ್‌ಟಿ ಕಡಿತದಿಂದ ಬಡವರು, ಮಧ್ಯಮ ವರ್ಗದವರಿಗೆ ವರದಾನವಾಗಿದೆ. ದುಬಾರಿ ಬೆಲೆ ನೀಡಿ ಚಿಕಿತ್ಸೆ ನೀಡಬೇಕಾಗಿತ್ತು. ಕೇಂದ್ರದ ನಿರ್ಧಾರದಿಂದಾಗಿ ಸಾಕಾಷ್ಟು ಬೆಲೆ ಕಡಿಮೆಯಾಗಲಿದೆ. ವಿಮೆಯಲ್ಲೂ ಜಿಎಸ್‌ಟಿ ತೆಗೆದು ಹಾಕಿರುವುದರಿಂದ ಇನ್ನಷ್ಟು ಅನುಕೂಲವಾಗಲಿದೆ. ಔಷಧಿಗಳ ಕಂಪನಿಗಳು ಕೆಲವು ಔಷಧಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ನಮ್ಮ ಬಳಿ ಬರುವ ರೋಗಿಗಳ ಪೋಷಕರು ಕಡಿಮೆ ಬೆಲೆಯ ಔಷಧಿ ನೀಡುವಂತೆ ಮನವಿ ಮಾಡುತ್ತಿದ್ದಾಗ ಮನಕಲಕುತ್ತಿತ್ತು. ಇದೀಗ ಇದೆಲ್ಲಾ ಕಡಿಮೆಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.