ಕರ್ನಾಟಕದಲ್ಲಿ ಅಂತರ್ಜಲ ಬಿಕ್ಕಟ್ಟು: 45 ತಾಲೂಕುಗಳಲ್ಲಿ ಸಂಪೂರ್ಣ ಅಂತರ್ಜಲ ಕುಸಿತ

45 ತಾಲೂಕುಗಳಲ್ಲಿ 100% ಅಂತರ್ಜಲ ಕುಸಿತ ದಾಖಲಾಗಿದೆ. 92 ತಾಲೂಕುಗಳಲ್ಲಿ ಅಂತರ್ಜಲ ಪರಿಸ್ಥಿತಿ ಗಂಭೀರವಾಗಿದೆ. 33 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಅರೆ-ಗಂಭೀರ ವಾಗಿದೆ ಎಂದು ಅವರು ತಿಳಿಸಿದರು.;

Update: 2025-08-22 07:32 GMT

ಸಾಂದರ್ಭಿಕ ಚಿತ್ರ 

ರಾಜ್ಯದಾದ್ಯಂತ 45 ತಾಲ್ಲೂಕುಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಕುಸಿದಿದ್ದು, ಪರಿಸ್ಥಿತಿ ತೀವ್ರವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ನಿಯಂತ್ರಣ ಮತ್ತು ನಿರ್ವಹಣೆ) (ತಿದ್ದುಪಡಿ) ಕಾಯ್ದೆ, 2025 ಅನ್ನು ಮಂಡಿಸುವ ವೇಳೆ ಸಚಿವರು ಈ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದರು. ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ರಾಷ್ಟ್ರೀಯ ಅಂತರ್ಜಲ ಸೂಚ್ಯಂಕದಲ್ಲಿ ಕರ್ನಾಟಕ ಎರಡು ಸ್ಥಾನ ಕುಸಿದು, ಏಳನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ತಲುಪಿರುವುದು ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

45 ತಾಲೂಕುಗಳಲ್ಲಿ 100% ಅಂತರ್ಜಲ ಕುಸಿತ ದಾಖಲಾಗಿದೆ. 92 ತಾಲೂಕುಗಳಲ್ಲಿ ಅಂತರ್ಜಲ ಪರಿಸ್ಥಿತಿ ಗಂಭೀರವಾಗಿದೆ. 33 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಅರೆ-ಗಂಭೀರ ವಾಗಿದೆ ಎಂದು ಅವರು ತಿಳಿಸಿದರು. 

ಈ ಗಂಭೀರ ಸಮಸ್ಯೆಯನ್ನು ಎದುರಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈ ಮಸೂದೆಯ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ 15 ವಿಧಾನ ಪರಿಷತ್ತಿನ ಸದಸ್ಯರು (MLC) ಚರ್ಚೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ನಂತರ ಕಾಯ್ದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಬೆಂಗಳೂರಿನ ಅಂತರ್ಜಲ ಬಿಕ್ಕಟ್ಟು

ಕೇಂದ್ರೀಯ ಅಂತರ್ಜಲ ಮಂಡಳಿಯ ಇತ್ತೀಚಿನ ವರದಿ ಪ್ರಕಾರ, ಬೆಂಗಳೂರಿನಲ್ಲಿ ಅಂತರ್ಜಲದ ಮೇಲಿನ ಅವಲಂಬನೆ ಗಂಭೀರ ಹಂತ ತಲುಪಿದ್ದು, ನಗರ ಹಾಗೂ ಗ್ರಾಮೀಣ ವಲಯಗಳು 2024ರಲ್ಲಿ 100% ಜಲ ಹೊರತೆಗೆಯುವ ದರವನ್ನು ದಾಖಲಿಸಿವೆ. ಇದರ ಅರ್ಥ, ನಗರವು ನೈಸರ್ಗಿಕ ಮರುಪೂರಣಕ್ಕಿಂತಲೂ ಹೆಚ್ಚು ಅಂತರ್ಜಲವನ್ನು ಬಳಕೆ ಮಾಡುತ್ತಿದ್ದು, ಭವಿಷ್ಯದ ಅಗತ್ಯಗಳಿಗೆ ಯಾವುದೇ ಸುರಕ್ಷತಾ ಮಿತಿ ಉಳಿಯುವುದಿಲ್ಲ ಎಂದು ವರದಿ ಹೇಳಿದೆ. 

ರಾಜ್ಯದಲ್ಲಿ ಈ ಬಿಕ್ಕಟ್ಟು ಹೊಸದಲ್ಲ.ನಗರವು ನೈಸರ್ಗಿಕವಾಗಿ ಅಂತರ್ಜಲವು ಪುನಃ ಭರ್ತಿಯಾಗುವುದಕ್ಕಿಂತ ಎರಡು ಪಟ್ಟು ಹೆಚ್ಚು ಅಂತರ್ಜಲವನ್ನು ಹೊರತೆಗೆಯುತ್ತಿದೆ. ಇದರಿಂದ ಅಂತರ್ಜಲದ ನಿಕ್ಷೇಪಗಳು ಅಸ್ಥಿರವಾಗುತ್ತಿವೆ. ಕರ್ನಾಟಕ ಅಂತರ್ಜಲ ನಿರ್ದೇಶನಾಲಯದ ಮಾಹಿತಿಯ ಪ್ರಕಾರ, ಬೆಂಗಳೂರು ಹಲವಾರು ವರ್ಷಗಳಿಂದ ಅತಿಯಾಗಿ ಬಳಕೆಯಾಗುವ ವರ್ಗದಲ್ಲಿದೆ. ಇದು ಅಂತರ್ಜಲವನ್ನು ನಿಯಂತ್ರಿಸುವ ಮತ್ತು ಸಂರಕ್ಷಿಸುವ ಪ್ರಯತ್ನಗಳ ತುರ್ತು ಅಗತ್ಯ ಇದೆ. 

Tags:    

Similar News