Greater Bengaluru | ನಾಳೆಯಿಂದ ಬಿಬಿಎಂಪಿ ಆಗಲಿದೆ ಗ್ರೇಟರ್‌ ಬೆಂಗಳೂರು; ಮೂರು ಹೊಸ ಪಾಲಿಕೆ ಸೃಷ್ಟಿ?

ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದು, ಸರ್ಕಾರ ಮೇ 15ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ತಯಾರಿ ನಡೆಸಿದೆ. ಹಾಗಾಗಿ ಗುರುವಾರದಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ.;

Update: 2025-05-14 10:52 GMT

ಬಿಬಿಎಂಪಿ 

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಜಾರಿಗೊಳಿಸಿ ರಾಜ್ಯ ಸರ್ಕಾರ ಬುಧವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮೇ 5ರಿಂದ ಪೂರ್ವಾನ್ವಯವಾಗುವಂತೆ ಗ್ರೇಟರ್‌ ಬೆಂಗಳೂರು ಅಧಿಸೂಚನೆ ಪ್ರಕಟಗೊಂಡಿದೆ. ಅದರ ಪ್ರಕಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ಕಾರ್ಯಗಳು ನಾಳೆಯಿಂದ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲೇ ನಡೆಯಲಿವೆ.  ಹಾಗಾದರೆ, ಗ್ರೇಟರ್‌ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ಆಡಳಿತ, ಪ್ರಾಧಿಕಾರ ಹೇಗೆ ಕಾರ್ಯ ನಿರ್ವಹಿಸಲಿದೆ. ಗ್ರೇಟರ್‌ ಬೆಂಗಳೂರು ಜಾರಿಯಿಂದ ಆಗುವ ಬದಲಾವಣೆಗಳು ಎಂಬುದು ಕುತೂಹಲ ಮೂಡಿಸಿದೆ. 

ಪ್ರಾಧಿಕಾರ ರಚನೆಗೆ ಸಿದ್ಧತೆ

ಮೇ 15 ರಿಂದ ಗ್ರೇಟರ್ ಬೆಂಗಳೂರು ವಿಧೇಯಕ ಜಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ ಕಸರತ್ತು ನಡೆಸಿದೆ. ವಿಧೇಯಕ ಜಾರಿಯಿಂದ ಬಿಬಿಎಂಪಿಯು ತಾಂತ್ರಿಕವಾಗಿ ಗ್ರೇಟರ್ ಬೆಂಗಳೂರು ಅಡಿ ಸೇರಲಿದೆ. 

ಈ ಅಧಿನಿಯಮದಡಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದ್ದು, ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷರಾದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷರಾಗಿರಲಿದ್ದಾರೆ.   

ಹಾಲಿ ಬಿಬಿಎಂಪಿಯ 225 ವಾರ್ಡ್‌ಗಳ ವ್ಯಾಪ್ತಿಯನ್ನೇ ಜಿಬಿಎ ವ್ಯಾಪ್ತಿ ಎಂದು ಅಧಿಸೂಚಿಸಲಾಗಿದೆ. ಹೊಸ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವವರೆಗೂ ಪಾಲಿಕೆ ಈಗಿರುವ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಪ್ರಾಧಿಕಾರದಡಿ ಪಾಲಿಕೆ ವಿಭಜನೆಯಾದ ಬಳಿಕ ಆಡಳಿತ ವಿಕೇಂದ್ರೀಕರಣವಾಗಲಿದೆ.

ಆಡಳಿತಾಧಿಕಾರಿಗಳ ನೇಮಕ

ಗ್ರೇಟರ್‌ ಬೆಂಗಳೂರು ವಿಧೇಯಕ ಜಾರಿಯಿಂದ ಪಾಲಿಕೆಯ ಆಡಳಿತವು ತಾಂತ್ರಿಕವಾಗಿ ಬದಲಾಗಲಿದ್ದು, ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಬಿಬಿಎಂಪಿ ಆಡಳಿತಾಧಿಕಾರಿಯೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಆಡಳಿತಾಧಿಕಾರಿಗಳಾಗಿ, ಬಿಬಿಎಂಪಿ ಮುಖ್ಯ ಆಯುಕ್ತರು ಪ್ರಾಧಿಕಾರದ ಮುಖ್ಯ ಆಯುಕ್ತರಾಗಿ ನೇಮಕವಾಗಲಿದ್ದಾರೆ. ಹೊಸ ಪಾಲಿಕೆಗಳ ರಚನೆ, ನಿಯಮ ಉಪಬಂಧಗಳ ಸಹಿತ ಇತರ ಕಾರ್ಯಗಳನ್ನು ಇನ್ನಷ್ಟೇ ರೂಪಿಸಬೇಕಾಗಿದೆ. ಗ್ರೇಟರ್‌ ಬೆಂಗಳೂರು ವಿಧೇಯಕ ಜಾರಿಯಾಗಿ 120 ದಿನಗಳಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಬೇಕು. 

ತಲಾ 150 ವಾರ್ಡ್ ಮೀರದಂತೆ ಹೊಸ ಪಾಲಿಕೆ ರಚನೆ, ಗ್ರೇಟರ್‌ ಬೆಂಗಳೂರು ವ್ಯಾಪ್ತಿ ವಿಸ್ತರಣೆಗೆ ಕಾಯ್ದೆಯಲ್ಲಿ ಅವಕಾಶವಿದೆ.  709 ಚದರ ಕಿ.ಮೀ.ನಿಂದ 1800ಚ. ಕಿ.ಮೀ.ವರೆಗಿನ ಪ್ರದೇಶವನ್ನು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರಿಸಿ,  ಮೂರು ಅಥವಾ ಐದು ಪಾಲಿಕೆಗಳನ್ನು ರಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮೂರು ಹಂತದ ಆಡಳಿತ

ಗ್ರೇಟರ್ ಬೆಂಗಳೂರು ಕಾಯ್ದೆಯಡಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ  ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಸಂಸ್ಥೆಗಳು ಒಂದೇ ವೇದಿಕೆಗೆ ಬರಲಿವೆ.  ಎರಡನೇ ಹಂತದಲ್ಲಿ ಪಾಲಿಕೆಗಳು ರಚನೆಯಾಗಲಿವೆ.  ಮೂರನೇ ಹಂತದಲ್ಲಿ ಪ್ರತಿ ಪಾಲಿಕೆಗಳಲ್ಲಿ ವಾರ್ಡ್ ಮಟ್ಟದ ಸಮಿತಿಗಳು ರಚನೆಯಾಗಲಿವೆ. ಎಲ್ಲಾ ಹಂತಗಳು ಸರ್ಕಾರದ ಕಣ್ಗಾವಲಿನಲ್ಲೇ ನಡೆಯಲಿವೆ.  

 ಪ್ರಾಧಿಕಾರದಲ್ಲಿ ಯಾರೆಲ್ಲಾ ಇರಲಿದ್ದಾರೆ?

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಇರಲಿದ್ದಾರೆ. ಬೆಂಗಳೂರು  ವ್ಯಾಪ್ತಿಯ ಶಾಸಕರು, ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಕಮಿಷನ‌ರ್, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತರು ಸದಸ್ಯರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಇರಲಿದ್ದಾರೆ.

ಚುನಾವಣೆ ಅಗತ್ಯ

ಗ್ರೇಟರ್ ಬೆಂಗಳೂರು ವಿಧೇಯಕದಡಿ  ರಚನೆಯಾಗುವ ಪ್ರಾಧಿಕಾರದಡಿ ಹೊಸ ಪಾಲಿಕೆಗಳನ್ನು ಅಸ್ತಿತ್ವಕ್ಕೆ ಬರಬೇಕಾದರೆ ಚುನಾವಣೆ ನಡೆಸಬೇಕಾಗುತ್ತದೆ.  

ಎಲ್ಲವೂ ನಿಗದಿತ ಸಮಯದೊಳಗೆ ನಡೆದಲ್ಲಿ ಮುಂಬರುವ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಇಲ್ಲವೇ ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.  

Tags:    

Similar News