ರಾಜಭವನ vs ಸರ್ಕಾರ | ಮತ್ತೆ ನಾಲ್ಕು ವಿಧೇಯಕ ವಾಪಸ್‌ ಕಳಿಸಿದ ರಾಜ್ಯಪಾಲರು

ಕರ್ನಾಟಕ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲಸಮರ ಮುಂದುವರಿದಿದ್ದು, ಸರ್ಕಾರ ಅನುಮೋದನೆಗೆ ಕಳಿಸಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳನ್ನು ರಾಜ್ಯಪಾಲರು ಸಹಿ ಮಾಡದೇ ವಾಪಸ್ ಕಳಿಸಿದ್ದಾರೆ.;

Update: 2025-01-24 14:05 GMT

ಕರ್ನಾಟಕ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲಸಮರ ಮುಂದುವರಿದಿದ್ದು, ಸರ್ಕಾರ ಅನುಮೋದನೆಗೆ ಕಳಿಸಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳನ್ನು ರಾಜ್ಯಪಾಲರು ಸಹಿ ಮಾಡದೇ ವಾಪಸ್ ಕಳಿಸಿದ್ದಾರೆ.

ಕಳೆದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿದ್ದ ನಾಲ್ಕು ಮಸೂದೆಗಳು ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ಪಡೆದು ರಾಜ್ಯಪಾಲರ ಸಹಿಗೆ ಕಳಿಸಲಾಗಿತ್ತು. ಆದರೆ, ಇದೀಗ ರಾಜ್ಯಪಾಲರು ಎಲ್ಲಾ ನಾಲ್ಕು ಮಸೂದೆಗಳನ್ನೂ ಸರ್ಕಾರಕ್ಕೆ ವಾಪಸ್ ಕಳಿಸಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ 2024, ಕರ್ನಾಟಕ ಅದಿರು ಹಕ್ಕು ಮತ್ತು ಖನಿಜಭೂಮಿ ತೆರಿಗೆ ಮಸೂದೆ 2024, ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ 2024 ಮತ್ತು ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ 2024 ವನ್ನು ಅಂಗೀಕಾರವಾಗಿತ್ತು. ಬಳಿಕ ಅನುಮೋದನೆಗಾಗಿ ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು. ಆದರೆ, ವಿಧೇಯಕದ ಬಗ್ಗೆ ಸ್ಪಷ್ಟನೆ ಕೋರಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.

11 ಮಸೂದೆ ವಾಪಸ್ ಕಳಿಸಿದ್ದ ರಾಜ್ಯಪಾಲರು

ಈ ಹಿಂದೆಯೂ ರಾಜ್ಯ ಸರ್ಕಾರ ಅನುಮೋದನೆಗೆ ಕಳಿಸಿದ್ದ 11 ಮಸೂದೆಗಳನ್ನು ರಾಜ್ಯಪಾಲರು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರ ಹಿಂತಿರುಗಿಸಿದ್ದರು.

ಇದರಿಂದ ಮಸೂದೆಗಳು ಪಾಸಾಗದೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿತ್ತು. 2024ರ ಜನವರಿಯಿಂದ 2024ರ ಆಗಸ್ಟ್ವರೆಗೆ ರಾಜ್ಯಪಾಲರು ಒಟ್ಟು 11 ಮಸೂದೆಗಳನ್ನು ಹೆಚ್ಚಿನ ಮಾಹಿತಿ ಕೋರಿ ವಾಪಸ್ ಕಳುಹಿಸಿದ್ದರು.

ಮುಡಾ ಹಗರಣ, ವಿವಿ ಉಪಕಲಪತಿ ನೇಮಕಾತಿ ಅಧಿಕಾರ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯಪಾಲರು ಮತ್ತು ಕರ್ನಾಟಕ ಸರ್ಕಾರದ ನಡುವೆ ಕಳೆದ ಒಂದು ವರ್ಷದಿಂದ ಶೀತಲಸಮರ ನಡೆಯುತ್ತಿದ್ದು, ಇದೀಗ ಮಸೂದೆಗಳ ವಾಪಸ್ಸಾತಿ ಆ ಸಮರಕ್ಕೆ ಯಾವ ತಿರುವು ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Tags:    

Similar News