‌Governor vs Govt. | ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ: ಡಾ ಜಿ ಪರಮೇಶ್ವರ್ ಕಿಡಿ

ದಿನಂಪತ್ರಿ ಒಂದೊಂದು ಪತ್ರ ಬರೆದು ಮಾಹಿತಿ ಕೇಳೋದು ಸಂವಿಧಾನ ವಿರೋಧವಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಅನಿವಾರ್ಯತೆ ಇಲ್ಲದಿದ್ದರೆ ನಾವು ರಾಜ್ಯಪಾಲರಿಗೆ ಉತ್ತರ ಕೊಡಲ್ಲ ಎಂದು ಗೃಹ ಸಚಿವರು ಕಿಡಿಕಾರಿದ್ದಾರೆ;

Update: 2024-09-23 10:47 GMT

ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಮರ ಇನ್ನಷ್ಟು ತೀವ್ರಗೊಳ್ಳುವ ಸೂಚನೆಗಳು ಇದ್ದು, ಅರ್ಕಾವತಿ ಬಡಾವಣೆ ರೀಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ರಾಜ್ಯಪಾಲರ ಕ್ರಮದ ವಿರುದ್ಧ ರಾಜ್ಯ ಸಚಿವರು ಸಿಡಿದೆದ್ದಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದೊಂದಿಗೆ ನೇರ ಸಮರ ಸಾರಿರುವ ರಾಜಭವನ, ಕಳೆದ ಎರಡು ತಿಂಗಳುಗಳಿಂದ ಒಂದಿಲ್ಲೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಸಂಘರ್ವ ಮುಂದುವರಿಸಿದೆ.

ಇದೀಗ ಅರ್ಕಾವತಿ ಬಡಾವಣೆ ರೀಡೂ ಪ್ರಕರಣಕ್ಕೆ ಕೈಹಾಕಿರುವ ರಾಜ್ಯಪಾಲರು, ಪ್ರಕರಣದ ಕುರಿತು ಮಾಹಿತಿ ನೀಡುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ವಿಷಯ ಮತ್ತೊಂದು ಸುತ್ತಿನ ವಾಗ್ವಾದಕ್ಕೆ ನಾಂದಿ ಹಾಡಿದೆ.

ರಾಜ್ಯಪಾಲರ ಹೊಸ ಪತ್ರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲದೆ, ಗೃಹ ಸಚಿವ ಡಾ ಜಿ ಪರಮೇಶ್ವರ್ ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದು, ಪ್ರತಿನಿತ್ಯ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ ಉದಾಹರಣೆಗಳೇ ಇಲ್ಲ. ಆದರೆ ಈಗ ಪ್ರತಿ ದಿನ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿದ್ದಾರೆ. ಅನಿವಾರ್ಯತೆ ಇದ್ದರಷ್ಟೇ ಅವರ ಪತ್ರಗಳಿಗೆ ಉತ್ತರ ಕೊಡುತ್ತೇವೆ ಎನ್ನುವ ಮೂಲಕ ರಾಜಭವನದ ವಿರುದ್ಧ ಸಮರ ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ.

ರಾಜ್ಯಪಾಲರು ಹಾಗೂ ಸರ್ಕಾರದ ಮಧ್ಯೆ ಉತ್ತಮ ಬಾಂಧವ್ಯ ಇರುತ್ತೆ. ಆದರೆ, ಈಗಿನಂತೆ ಆದರೆ ಸುಸೂತ್ರ ಆಗೋದಿಲ್ಲ. ಮುಂದೆ ಏನು ಮಾಡಬೇಕೆಂದು ಸಿಎಂ ಜತೆ ಚರ್ಚೆ ಮಾಡುತ್ತೇವೆ. ಅನಿವಾರ್ಯತೆ ಇಲ್ಲದಿದ್ದರೆ ರಾಜ್ಯಪಾಲರಿಗೆ ಉತ್ತರ ಕೊಡುವುದಿಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಕೊಡುತ್ತೇವೆ. ಸಂಪುಟದಲ್ಲಿ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್, ರಾಜ್ಯಪಾಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಹುದ್ದೆ ಅತ್ಯಂತ ಜವಾಬ್ದಾರಿಯುತ ಸ್ಥಾನ. ಸಂವಿಧಾನ ರಕ್ಷಣೆ ಮಾಡುವ ಹೊಣೆಗಾರಿಕೆ ಇದೆ. ಸಂವಿಧಾನ ಯಾವ ರೀತಿ ರಕ್ಷಣೆ ಮಾಡಬೇಕು ಅಂತ ಅಧಿಕಾರ ಕೊಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಈ ರೀತಿಯಾಗಿದೆ. ಪ್ರತಿ ನಿತ್ಯ ಆಡಳಿತದಲ್ಲಿ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ. ಇತಿಹಾಸದಲ್ಲಿ ಕರ್ನಾಟಕದಲ್ಲಿ ಕೇಳಿಲ್ಲ. ಇಲ್ಲಿಯವರೆಗೆ ಅನೇಕ ರಾಜ್ಯಪಾಲರುಗಳು ಬಂದುಹೋಗಿದ್ದಾರೆ. ಆದರೆ ದಿನ ನಿತ್ಯ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿರೋದು ಇದೇ ಮೊದಲು. ಕೆಲವೊಂದು ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಎಂ, ಕಾನೂನು ಸುವ್ಯವಸ್ಥೆ ವಿಚಾರ ಬಂದರೆ ಗೃಹ ಸಚಿವರು ರಾಜ್ಯಪಾಲರಿಗೆ ಮಾಹಿತಿ ನೀಡುತ್ತಿದ್ದರು. ಅವರಿಗೆ ಸಚಿವರನ್ನು ಕರೆದು ಮಾಹಿತಿ ಪಡೆಯುವ ಹಕ್ಕು ಇದೆ. ಆದರೆ, ಹೀಗೆ ನಿತ್ಯ ಒಂದಿಲ್ಲೊಂದು ವಿಷಯ ಕೆದಕಿ ಪತ್ರ ಬರೆಯುವುದು ಹೊಸದು ಎಂದು ಪರಮೇಶ್ವರ್ ಹೇಳಿದ್ದಾರೆ.

ದಿನಂಪತ್ರಿ ಒಂದೊಂದು ಪತ್ರ ಬರೆದು ಮಾಹಿತಿ ಕೇಳೋದು ಸಂವಿಧಾನ ವಿರೋಧವಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಅನಿವಾರ್ಯತೆ ಇಲ್ಲದಿದ್ದರೆ ನಾವು ರಾಜ್ಯಪಾಲರಿಗೆ ಉತ್ತರ ಕೊಡಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಕೊಡುತ್ತೇವೆ. ಎಲ್ಲರಿಗೂ ಒಂದೇ ಮಾನದಂಡ. ಸಿದ್ದರಾಮಯ್ಯಗೆ ಒಂದು ಮಾನದಂಡ, ಕುಮಾರಸ್ವಾಮಿಗೆ ಒಂದು ಮಾನದಂಡ ಆಗಲ್ಲ. ನಾಲ್ಕೂ ಜನ ಸಚಿವರು, ಮಾಜಿ ಸಿಎಂಗಳ ವಿರುದ್ಧದ ದೂರುಗಳಿಗೆ ರಾಜ್ಯಪಾಲರು ನೋಟಿಸ್ ಕೂಡ ನೀಡಿಲ್ಲ ಎಂದು ರಾಜ್ಯಪಾಲರ ವರಸೆಯನ್ನು ಪ್ರಶ್ನಿಸಿದ್ದಾರೆ.

Tags:    

Similar News