Governor vs Government | ರಾಜಭವನ -ಸರ್ಕಾರ ಸಂಘರ್ಷ; ಎರಡನೇ ಬಾರಿಗೆ ಮಸೂದೆ ವಾಪಸ್‌

ಎರಡು ಮಸೂದೆಗಳಿಗೆ ಅಧಿಕಾರಿಗಳು ನೀಡಿರುವ ಸ್ಪಷ್ಟೀಕರಣ ತೃಪ್ತಕರವಾಗಿಲ್ಲ ಎಂದು ಹೇಳಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್‌ ಅವರು ಎರಡನೇ ಬಾರಿಗೆ ಮಸೂದೆಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.;

Update: 2025-02-28 07:44 GMT
ಥಾವರ್‌ಚಂದ್‌ ಗೆಹ್ಲೋತ್‌ ಹಾಗೂ ಸಿದ್ದರಾಮಯ್ಯ

ಮಸೂದೆಗಳ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ರಾಜಭವನದ ನಡುವಿನ ಸಂಘರ್ಷ ಮುಂದುವರಿದಿದೆ.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ತಿದ್ದುಪಡಿ ಮಸೂದೆ ವಾಪಸ್‌ ಕಳುಹಿಸಿದ್ದ ಬೆನ್ನಲ್ಲೇ ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಅವರು ಎರಡನೇ ಬಾರಿಗೆ ಪರಿಷ್ಕರಣೆಗೆ ಸೂಚಿಸಿ ವಾಪಸ್ ಕಳುಹಿಸಿದ್ದಾರೆ.

ಎರಡೂ ಮಸೂದೆಗಳಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಸ್ಪಷ್ಟೀಕರಣ ಕೇಳಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಸರ್ಕಾರ ಕೂಡ ಅಗತ್ಯ ಸ್ಪಷ್ಟನೆ ನೀಡಿ ಮಸೂದೆಗಳನ್ನು ಮರು ಸಲ್ಲಿಕೆ ಮಾಡಿತ್ತು. ಆದರೆ, ಅಧಿಕಾರಿಗಳ ಸ್ಪಷ್ಟೀಕರಣಕ್ಕೆ ತೃಪ್ತರಾಗದ ರಾಜ್ಯಪಾಲರು ಈಗ ಎರಡನೇ ಬಾರಿಗೆ ಮಸೂದೆಗಳನ್ನು ಹಿಂದಕ್ಕೆ ಕಳುಹಿಸಿದ್ದು, ಸಂಘರ್ಷಕ್ಕೆ ಕಾರಣವಾಗಿದೆ.

ಸಹಕಾರ ಸಂಘಗಳ ತಿದ್ದುಪಡಿ ಮಸೂದೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡುವುದು ಸರಿಯಲ್ಲ. ಇದು ಸಮಾಜದ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಡಲಿದೆ. ಈ ತಿದ್ದುಪಡಿಯು ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದುಕೊಳ್ಳಲಿದೆ. ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಆರ್ಥಿಕ ಹೊರೆಯ ಕಾರಣಕ್ಕೆ ಸಹಕಾರಿ ಚುನಾವಣಾ ಪ್ರಾಧಿಕಾರಗಳನ್ನು ರದ್ದುಪಡಿಸುವ ಪ್ರಸ್ತಾವವೂ ಸೂಕ್ತವಲ್ಲ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೌಹಾರ್ದ ಸಹಕಾರಿ ಮಸೂದೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ನೀಡಿದ ಸ್ಪಷ್ಟನೆಗಳೂ ತೃಪ್ತಿಕರವಾಗಿಲ್ಲ. ಎಲ್ಲ ಸುಸ್ತಿದಾರರಿಗೆ ಮತದಾನದ ಹಕ್ಕು ನೀಡುವ ಬದಲು ಮತದಾನ ಮಾಡದಂತೆ ತಡೆಯಲು ಸರಿಯಾದ ವಿಧಾನ ಜಾರಿಗೆ ತರಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನೂ ರಾಜ್ಯಪಾಲರು ಪರಿಷ್ಕರಣೆಗೆ ಸೂಚಿಸಿ ವಾಪಸ್ ಕಳುಹಿಸಿದ್ದರು. ರಾಜ್ಯಪಾಲರು ಎತ್ತಿದ್ದ ಆಕ್ಷೇಪಗಳಿಗೆ ಸ್ಪಷ್ಟೀಕರಣ ಹಾಗೂ ಅಗತ್ಯ ತಿದ್ದುಪಡಿ ತಂದು ಮತ್ತೆ ಕಳುಹಿಸಿದ ನಂತರವೇ ಥಾವರ್ ಚಂದ್ ಗೆಹ್ಲೋತ್ ಅವರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ನೇಮಕ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ನೀಡುವ ಕುರಿತು ಈ ಹಿಂದೆ ಮಸೂದೆಗೆ ತಿದ್ದುಪಡಿ ತಂದಿತ್ತು. ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಈ ನಿರ್ಧಾರವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿತ್ತು. ಆದರೆ, ತಿದ್ದುಪಡಿ ಮಸೂದೆಗೆ ಸಹಿ ಹಾಕದೇ ವಾಪಸ್ ಕಳುಹಿಸಿದ್ದರು.

Tags:    

Similar News