Cabinet Meeting | ಅಲ್ಪಸಂಖ್ಯಾತರ ಪರ ಮತ್ತೊಂದು ನಿರ್ಣಯ ಕೈಗೊಂಡ ಸರ್ಕಾರ
ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಿಗೆ ತಿದ್ದುಪಡಿ ತರಲು ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ;
ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಿಗೆ ತಿದ್ದುಪಡಿ ತರಲು ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಕಡಿಮೆ ಇರುವುದರಿಂದ ಅವರೇ ನಡೆಸುವ ಶೈಕ್ಷಣಿಕ ಸಂಸ್ಥೆಗಳಿಗೆ ಶೇಕಡವಾರು ವಿದ್ಯಾರ್ಥಿಗಳ ಪ್ರವೇಶ ಕಷ್ಟಕರವಾಗಿದೆ. ಆದ್ದರಿಂದ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (1ನೇ ತಿದ್ದುಪಡಿ) ನಿಯಮಗಳು 2024 (ಅನುಬಂಧ-3) ಕರಡು ನಿಯಮಗಳನ್ನು ಪರಿಸ್ಕರಿಸಿದ ಬಳಿಕ ಮತ್ತೆ ಸಚಿವ ಸಂಪುಟದಲ್ಲಿ ಮಂಡಿಸದೇ ಅಂತಿಮಗೊಳಿಸಲು ತೀರ್ಮಾನಿಸಿದೆ.
ಸದ್ಯದ ನಿಯಮ 6 ರನ್ವಯ ಮತೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳಲ್ಲಿ ಒಟ್ಟು ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ರಾಜ್ಯದ ವಿದ್ಯಾರ್ಥಿಗಳೇ ಇರಬೇಕು ಎಂದಿತ್ತು. ಈಗ ಆ ನಿಯಮ ಕೈಬಿಡಲಾಗುವುದು. ಆದರೆ, ನಿಯಮ 11ರ ಪ್ರಕಾರ ಯಾವುದೇ ಸಮಯದಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಯ ಸ್ಥಾನಮಾನ ಹಿಂಪಡೆಯಬಹುದು ಎಂದು ಹೇಳಿದೆ.
ನಿಯಮ ತಿದ್ದುಪಡಿಯಿಂದ ಕಡಿಮೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಇದ್ದರೂ ಕಾಲೇಜಿನ ಮಾನ್ಯತೆ ಹಾಗೆಯೇ ಮುಂದುವರಿಯಲಿದೆ. ಕಾಲೇಜುಗಳ ಆಡಳಿತ ಮಂಡಳಿಗಳಲ್ಲಿ ಮಾತ್ರ 2/3 ಅನುಪಾತದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನಿಗದಿಪಡಿಸಲಾಗುತ್ತದೆ. ಈ ಹಿಂದೆ ಪ್ರಾಥಮಿಕ ಶಾಲೆಗಳಲ್ಲಿ ಶೇ 25 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರವೇಶ ಪಡೆದಿರಬೇಕಿತ್ತು. ಪ್ರೌಢಶಾಲೆಯಲ್ಲಿ ಶೇ 50 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕಿತ್ತು. ಹೊಸ ತಿದ್ದುಪಡಿಯ ಪ್ರಕಾರ ಇಂತಹ ಯಾವುದೇ ರೀತಿಯ ಷರತ್ತು ಹಾಗೂ ನಿಬಂಧನೆ ಇರುವುದಿಲ್ಲ.
ವಕ್ಫ್ ವಿವಾದದ ಕಾರಣಕ್ಕಾಗಿ ಕಳೆದ ಮೂರು ಸಂಪುಟ ಸಭೆಗಳಲ್ಲಿ ಈ ವಿಧೇಯಕದ ಚರ್ಚೆಯನ್ನು ಮುಂದೂಡಲಾಗಿತ್ತು.
ಸಂಪುಟ ಸಭೆಯ ಇತರೆ ನಿರ್ಣಯಗಳು
- ಸಾರ್ವಜನಿಕ ವಲಯ ಉದ್ದಿಮೆಗಳು ಎದುರಿಸುತ್ತಿರುವ ನಷ್ಟದಿಂದ ಆರ್ಥಿಕ ಒತ್ತಡ ಹೆಚ್ಚಾಗಿದ್ದು, ಸಾಲಕ್ಕೆ ಮೊರೆ ಹೊಗುವುದನ್ನು ತಪ್ಪಿಸಲು ಅಂತರ್ ನಿಗಮ ಠೇವಣಿ ಹೂಡಿಕೆ ಅನುಮೋದನೆ
- ವಂಚಕ ಹಣಕಾಸು ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಮೂಲಕ ಮಾರಾಟ ಮಾಡಿ ಬಾಧಿತ ಠೇವಣಿದಾರರಿಗೆ ಹಣ ಹಂಚಿಕೆ ಮಾಡುವ ʼಠೇವಣಿದಾರರ ಹಿತಾಸಕ್ತಿ ಮತ್ತು ಸಂರಕ್ಷಣೆ ತಿದ್ದುಪಡಿ ಮಸೂದೆʼಗೆ ಅನುಮೋದನೆ
- ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಗ್ರಾಮೀಣ ಗಡಿ ಭಾಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಮೂಲ ಸೌಕರ್ಯ ಮತ್ತು ಕಲಿಕಾ ವಾತಾವರಣ ನಿರ್ಮಿಸಲು ನಿರ್ಧಾರ
- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022-23ನೇ ಸಾಲಿನಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಲಭ್ಯವಿರುವ ರೂ. ಅನುದಾನದಲ್ಲಿ ಸರ್ಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಹಾಸಿಗೆ, ಮಂಚ ಪೂರೈಸಲು ಆಡಳಿತಾತ್ಮಕ ಅನುಮೋದನೆ
- ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಕಚೇರಿಗಳಿಗೆ ಒಂದೇ ಸೂರಿನಡಿ ಮೂಲಸೌಕರ್ಯ
- 2024-25ನೇ ಸಾಲಿನಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು 100ರೂ.ಗಳ ವೆಚ್ಚದಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಮತ್ತು ಆರೋಗ್ಯ ಬಲವರ್ಧನೆಗಾಗಿ ಪೌಷ್ಠಿಕಾಂಶದ ಪುಡಿ, ಮೊಟ್ಟೆ ಮತ್ತು ಶೇಂಗಾ ಚಿಕ್ಕಿ ಖರೀದಿಸಿ ಒದಗಿಸಲು ಟೆಂಡರ್ ಪ್ರಕ್ರಿಯೆ ಅನುಮೋದನೆ
- ಬಿಬಿಎಂಪಿ ವ್ಯಾಪ್ತಿಯ 1611.49 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ 694ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ
- ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಔಷಧ ನಿಯಂತ್ರಣ ಇಲಾಖೆಗಳನ್ನು ವಿಲೀನಗೊಳಿಸಿ ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಎಂದು ಪದನಾಮೀಕರಿಸಲು ಒಪ್ಪಿಗೆ