ಸಾರಿಗೆ ನೌಕರರ ಮುಷ್ಕರ| ಬೇಡಿಕೆ ಈಡೇರಿಕೆಗೆ ಒಪ್ಪದ ಸರ್ಕಾರ; ಸಿಎಂ ಸಭೆ ವಿಫಲ
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪದ ಕಾರಣ ನಿಗದಿಯಂತೆ ಆ.5 ರಂದು ನಾಲ್ಕೂ ನಿಗಮಗಳ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.;
ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರ ನಡುವೆ ಸೋಮವಾರ ನಡೆದ ಮಹತ್ವದ ಸಭೆಯು ವಿಫಲಗೊಂಡಿದೆ. ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ, ನಾಳೆಯಿಂದ (ಆಗಸ್ಟ್ 5) ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘಟನೆಗಳು ಘೋಷಿಸಿದ್ದವು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ, ಕರ್ನಾಟಕ ಹೈಕೋರ್ಟ್ ಮುಷ್ಕರಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ನೌಕರರ ಒಕ್ಕೂಟದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಸೇರಿದಂತೆ ಹಲವು ಮುಖಂಡರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಹಲವು ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಭೆ ವಿಫಲವಾಗಲು ಪ್ರಮುಖ ಕಾರಣಗಳು
ಶ್ರೀನಿವಾಸಾಚಾರಿ ಸಮಿತಿಯ ಶಿಫಾರಸಿನ ಅನ್ವಯ, 38 ತಿಂಗಳ ವೇತನ ಹಿಂಬಾಕಿ (ಸುಮಾರು 700 ಕೋಟಿ ರೂಪಾಯಿ) ಪಾವತಿಸಬೇಕೆಂದು ನೌಕರರು ಪಟ್ಟು ಹಿಡಿದಿದ್ದರು. ಆದರೆ, ಸರ್ಕಾರವು ಕೇವಲ 14 ತಿಂಗಳ ಹಿಂಬಾಕಿಯನ್ನು ಮಾತ್ರ ನೀಡುವುದಾಗಿ ತಿಳಿಸಿತು. ವೇತನ ಪರಿಷ್ಕರಣೆ ಮಾಡುವ ಬೇಡಿಕೆಯನ್ನೂ ಸರ್ಕಾರ ನಿರಾಕರಿಸಿತು.
ಈ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಕಾರಣ, ಮಾತುಕತೆ ವಿಫಲವಾಯಿತು. ಸಭೆಯ ನಂತರ ಮಾತನಾಡಿದ ಸಂಘಟನೆಗಳ ಮುಖಂಡರು, ಸರ್ಕಾರದ ನಿಲುವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನಿಗದಿಯಂತೆ ನಾಳೆಯಿಂದ ಮುಷ್ಕರ ಆರಂಭಿಸುವುದಾಗಿ ಖಚಿತಪಡಿಸಿದ್ದರು.